Pondy Melange 2027 ಪುದುಚೇರಿ ಶ್ರೀಮಂತ ಸಂಸ್ಕೃತಿ ಅನಾವರಣಕ್ಕೊಂದು ವೇದಿಕೆ: ಮುಖ್ಯಮಂತ್ರಿ ಎನ್. ರಂಗಸಾಮಿ
ಪುದುಚೇರಿ: ಕಡಲ ತೀರದ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸಮುದ್ರ ಪ್ರೇಮಿಗಳಿಗೆ ಸ್ವರ್ಗ. ಅಧ್ಯಾತ್ಮದಲ್ಲಿ ಆಸಕ್ತಿ ಇರುವವರಿಗಾಗಲಿ, ಸಮುದ್ರದಲ್ಲಿ ಮೋಜು ಮಸ್ತಿ ಮಾಡೋ ಸಾಹಸಿಗರಿಗೆ ಈ ನಗರ ಕೈ ಬೀಸಿ ಕರೆಯುತ್ತಿದೆ. ಇಲ್ಲಿಗೆ ಭೇಟಿ ನೀಡಲೀಗ ಮತ್ತೊಂದು ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಾಗುತ್ತಿದೆ. 'Pondy Melange 2027' ನಡೆಯಲಿದ್ದು, ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿ, ಲಾಂಛನ ಬಿಡುಗಡೆ ಮಾಡಿದ್ದಾರೆ ಮುಖ್ಯಮಂತ್ರಿ ಎನ್. ರಂಗಸಾಮಿ.

ಕಡಲ ನಗರಿ ಪುದುಚೇರಿಯ ಶ್ರೀಮಂತ ಸಾಂಸ್ಕೃತಿಕ ಮಹತ್ವ ಸಾರುವ ಈ ಕಾರ್ಯಕ್ರಮವನ್ನು ಪುದುಚೇರಿ ಪ್ರವಾಸೋದ್ಯಮ ಇಲಾಖೆ ಹಾಗೂ ಟೆಕ್‌ಶಾಟ್ (TEKSHOT) ಆಯೋಜಿಸುತ್ತಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುದುಚೇರಿ ಮುಖ್ಯಮಂತ್ರಿ ರಂಗಸಾಮಿ, ದೇಶದೆಲ್ಲೆಡೆಯಿಂದ ಈ ನಗರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಕಾರ್ಯಕ್ರಮದಿಂದ ಮತ್ತಷ್ಟು ಜನರನ್ನು ಸ್ವಾಗತಿಸಲಿದೆ. ಈ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸಲಿವೆ ಎಂದರು.
ಬೇರೆ ರಾಜ್ಯಗಳ ಜನರಿಂದ ಪುದುಚೆರಿಯ ಜನಪ್ರಿಯತೆ ಹೆಚ್ಚುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮನರಂಜನಾ ಉತ್ಸವಗಳು ಹೆಚ್ಚಿನ ಜನರನ್ನು ಪುದುಚೇರಿಗೆ ಭೇಟಿ ನೀಡುವಂತೆ ಪ್ರೇರೇಪಿಸಲಿವೆ. ಇದರಿಂದ ಪ್ರವಾಸೋದ್ಯಮದ ಬೆಳವಣಿಗೆಗೂ ಕೊಡುಗೆ ದೊರೆಯಲಿದೆ. ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯೊಂದಿಗೆ ಪುದುಚೇರಿಯ ವಿವಿಧ ಸ್ಥಳಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಲಾಗಿದೆ, ಎಂದರು.

ಪ್ರವಾಸಿಗರನ್ನು ಆಕರ್ಷಿಸೋ ಕಾರ್ಯಕ್ರಮ
'ಪಾಂಡಿ ಮೆಲಾಂಜ್ 2027' ಅನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಜಗತ್ತಿನಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಿ, ಪುದುಚೇರಿಯನ್ನು ಪ್ರಮುಖ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ" ಎಂದು ಮುಖ್ಯಮಂತ್ರಿ ತಿಳಿಸಿದರು.
ಶುಕ್ರವಾರ ಪುದುಚೇರಿಯ ಗಾಂಧಿ ತಿಡಲ್‌ನಲ್ಲಿ ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮ ಕಡಲ ತೀರದ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವುದರ ಜೊತೆಗೆ, ಪ್ರಮುಖ ಪ್ರವಾಸಿ ತಾಣವಾಗಿ ಅದರ ಆಕರ್ಷಣೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಸಮಾರಂಭದಲ್ಲಿ ಪುದುಚೇರಿಯ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವರಾದ ಮಲ್ಲಾಡಿ ಕೃಷ್ಣ ರಾವ್ ಅವರು 'ಪಾಂಡಿ ಮೆಲಾಂಜ್ 2027'ರ ಪರಿಕಲ್ಪನೆ ಹಾಗೂ ಮುಂಬರುವ ಕಾರ್ಯಕ್ರಮಗಳನ್ನು ಪರಿಚಯಿಸುವ ವಿಶೇಷ ಪ್ರಚಾರ ವಿಡಿಯೋವನ್ನು ಬಿಡುಗಡೆ ಮಾಡಿದರು.
Pondy Melange 2027: ಸಂಸ್ಕೃತಿ, ಸೃಜನಶೀಲತೆಯ ಸಂಭ್ರಮ
'ಸಂಸ್ಕೃತಿ • ಸೃಜನಶೀಲತೆ • ಸಂಭ್ರಮ' ಎಂಬ ವಿಷಯವಸ್ತುವಿನೊಂದಿಗೆ ರೂಪುಗೊಂಡಿರುವ 'ಪಾಂಡಿ ಮೆಲಾಂಜ್', ಕಲೆ, ಸಂಗೀತ, ಫ್ಯಾಷನ್, ಆಹಾರ, ಕ್ಷೇಮ, ಪರಂಪರೆ ಮತ್ತು ಮನರಂಜನೆಯ ವಿವಿಧ ಆಯಾಮಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಾಂಸ್ಕೃತಿಕ ಉತ್ಸವ.
ಈ ಕಾರ್ಯಕ್ರಮದ ಭಾಗವಾಗಿ, 2027ರ ಜನವರಿಯಲ್ಲಿ ಶಿಕ್ಷಣ, ಆಧ್ಯಾತ್ಮಿಕತೆ ಮತ್ತು ಆರೋಗ್ಯ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಸರಣಿ ಸಮ್ಮೇಳನಗಳನ್ನು ಆಯೋಜಿಸಲು ಸಂಘಟಕರು ಯೋಜಿಸಿದ್ದಾರೆ. ಈ ಸಮ್ಮೇಳನಗಳಲ್ಲಿ ಗಣ್ಯ ವ್ಯಕ್ತಿಗಳು, ವೃತ್ತಿಪರರು, ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಅರ್ಥಪೂರ್ಣ ಚರ್ಚೆ ಮತ್ತು ಜ್ಞಾನ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಜನವರಿಯಲ್ಲಿ ನಡೆಯಲಿರುವ ಸಮ್ಮೇಳನದ ನಂತರ, 2027ರ ಫೆಬ್ರವರಿಯಲ್ಲಿ ಸಂಗೀತ ಕಚೇರಿಗಳು ಮತ್ತು ಅಂತಾರಾಷ್ಟ್ರೀಯ ನೃತ್ಯ ಪ್ರದರ್ಶನಗಳು ಸೇರಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮಗಳು ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಆಕರ್ಷಕ ಅನುಭವವನ್ನು ನೀಡಲಿವೆ.
ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ
ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳೂ ನಡೆದವು. ಈ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಸಮ್ಮೇಳನಗಳು, ಸಾಂಸ್ಕೃತಿಕ ಸಂಭ್ರಮಗಳು ಮತ್ತು ಮನರಂಜನಾ ಕಾರ್ಯಕ್ರಮಗಳ ಆಕರ್ಷಕ ಸರಣಿಯೊಂದಿಗೆ 'ಪಾಂಡಿ ಮೆಲಾಂಜ್ 2027' ಪುದುಚೇರಿಯ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಜಗತ್ತಿಗೆ ಪರಿಚಯಿಸುವ ಗುರಿ ಹೊಂದಿದೆ. ಸಂಸ್ಕೃತಿ, ಸೃಜನಶೀಲತೆ, ಸಂಭ್ರಮ ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಪುದುಚೇರಿಯನ್ನು ರೂಪಿಸುವ ನಿಟ್ಟಿನಲ್ಲಿ ಈ ಉತ್ಸವ ಮಹತ್ವದ ಹೆಜ್ಜೆಯಾಗಲಿದೆ.


Click it and Unblock the Notifications
