Jolada Rotti Recipe: ಉತ್ತರ ಕರ್ನಾಟಕ ಜೋಳದ ರೊಟ್ಟಿ ರೆಸಿಪಿ- ಮನೆಯಲ್ಲಿ ತಯಾರಿಸಲು ಕಷ್ಟನಾ? ಇಲ್ಲಿದೆ ಸರಳ ವಿಧಾನ
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಪ್ರತೀ ದಿನ ಊಟಕ್ಕೆ ಈ ಭಾಗದ ಜನ ರೊಟ್ಟಿಯನ್ನು ತಯಾರಿಸಿ ಸೇವಿಸುತ್ತಾರೆ. ಇದರೊಂದಿಗೆ ಬಗೆ ಬಗೆಯ ತರಕಾರಿ, ಸೊಪ್ಪಿನ ಪಲ್ಯ ತಯಾರಿಸುವುದು ಇಲ್ಲಿನ ವಿಶೇಷ. ಆದರೀಗ ಜೋಳದ ರೊಟ್ಟಿ ಕೇವಲ ಉತ್ತರ ಕರ್ನಾಟದ ಭಾಗವಾಗಿ ಉಳಿದಿಲ್ಲ. ರಾಜ್ಯದ ಹಲವೆಡೆ ಇದನ್ನು ತಯಾರಿಸಲಾಗುತ್ತದೆ. ಜೊತೆಗೆ ಹೋಟೆಲ್‌ಗಳಲ್ಲೂ ಜೋಳದ ರೊಟ್ಟಿ ಲಭ್ಯವಿರುತ್ತದೆ. ಆದರೆ ಜೋಳದ ರೊಟ್ಟಿಯ ನಿಜವಾದ ರುಚಿ ಸವಿಯಬೇಕು ಅಂದರೆ ಉತ್ತರ ಕರ್ನಾಟಕದಲ್ಲೇ ತಿನ್ನಬೇಕು.
ಆದರೆ ಎಲ್ಲಾ ಸಮಯದಲ್ಲೂ ಇದು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲೇ ಉತ್ತರ ಕರ್ನಾಟಕ ಶೈಲಿಯಲ್ಲಿ ರೊಟ್ಟಿಯನ್ನು ತಯಾರಿಸಬಹುದು. ಕೆಲವರಿಗೆ ರೊಟ್ಟಿಯನ್ನು ತಯಾರಿಸುವುದು ತುಂಬಾ ಕಷ್ಟ. ಇನ್ನೂ ಕೆಲವರಿಗೆ ರೊಟ್ಟಿ ತಯಾರಿಸುವ ವಿಧಾನ ಕೇಳಿ ತಯಾರಿಸಲು ಹಿಂದೇಟು ಹಾಕುತ್ತಾರೆ. ಆದರೀಗ ನಾವು ಹೇಳುವ ಸುಲಭ ವಿಧಾನವನ್ನು ಅನುಸರಿಸಿದರೆ ಉತ್ತರ ಕರ್ನಾಟಕ ಶೈಲಿಯಲ್ಲಿ ರೊಟ್ಟಿಯನ್ನು ತಯಾರಿಸಿ ಸವಿಯಬಹುದು. ಹಾಗಾದರೆ ತಡ ಮಾಡುವುದು ಬೇಡ ರೊಟ್ಟಿ ತಯಾರಿಸುವ ವಿಧಾನ ತಿಳಿಯೋಣ.

ಬೇಕಾಗುವ ಪದಾರ್ಥ
* ಬಿಳಿ ಜೋಳದಿಂದ ನುಣ್ಣಗೆ ರುಬ್ಬಿದ ಹಿಟ್ಟು (1 ಕಪ್)
* ಉಪ್ಪು ಸ್ವಲ್ಪ (ಅಗತ್ಯವಿದ್ದರೆ ಮಾತ್ರ)
* ನೀರು
ರೊಟ್ಟಿ ತಯಾರಿಸುವ ವಿಧಾನ:-
* ಮೊದಲಿಗೆ ರೊಟ್ಟಿ ತಟ್ಟುವ ಮಣೆಯ ಮೇಲೆ ಹಿಟ್ಟು ಹಾಕಿ ಅದಕ್ಕ ಬಿಸಿ ನೀರು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು.
* ಹಿಟ್ಟು ಚಪಾತಿ ಹದಕ್ಕೆ ಇದ್ದರೆ ತುಂಬಾ ಚೆನ್ನಾಗಿ ರೊಟ್ಟಿ ತಟ್ಟಬಹುದು ಅಥವಾ ಚಪಾತಿಯಂತೆ ಕೂಡ ತಯಾರಿಸಬಹುದು.
* ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಒಂದೊಂದೇ ಉಂಡೆಗಳನ್ನು ತೆಗೆದುಕೊಂಡು ಒಣ ಹಿಟ್ಟು ಹಾಕಿ ಮಣೆಯ ಮೇಲೆ ತಟ್ಟಿ. ರೊಟ್ಟಿ ತಟ್ಟುವಾಗ ಮಣಿಗೆ ಹಿಟ್ಟು ಹಿಡಿಯದಂತೆ ನೋಡಿಕೊಳ್ಳಬೇಕು.
* ನಿಮಗೆ ರೊಟ್ಟಿ ತಟ್ಟಲು ಸಾಧ್ಯವಾಗದೇ ಇದ್ದರೆ ಚಪಾತಿಯಂತೆ ಕೂಡ ಇದನ್ನು ತಯಾರಿಸಬಹುದು. ಆದರೆ ಇದನ್ನು ತೆಳುವಾಗಿ ತಟ್ಟಿ ಮಾಡಿದರೆ ತುಂಬಾ ಚೆನ್ನಾಗಿ ಬರುತ್ತದೆ.
*ಮೊದಲ ಬಾರಿ ತಯಾರಿಸುವವರಿಗೆ ರೊಟ್ಟಿ ತಟ್ಟಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಂತ ಬಿಡಬೇಡಿ. ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ನಿತ್ಯ ಹೀಗೆ ಮಾಡುವುದನ್ನು ಪ್ರಯತ್ನ ಮಾಡಿ. ಮೊದಲ ದಿನ ನಿಮಗಿದು ಕಷ್ಟವಾಗಬಹುದು. ಆದರೆ ಒಂದೆರೆಡು ದಿನದಲ್ಲಿ ಚಂದವಾಗಿ ನೀವು ರೊಟ್ಟಿಯನ್ನು ತಯಾರಿಸುವಿರಿ.
* ವೃತ್ತಾಕಾರದಲ್ಲಿ ರೊಟ್ಟಿಯನ್ನು ತಟ್ಟಿ ನಂತರ ಅದನ್ನು ತವೆಯ ಮೇಲೆ ಹಾಕಿ.
* ಒಂದು ಚಿಕ್ಕಬಟ್ಟೆಯನ್ನು ನೀರಿನಲ್ಲಿ ಅದ್ದಿ ಸ್ವಲ್ಪ ನೀರಿರುವಂತೆ ಹಿಂಡಿಕೊಂಡು ಅದನ್ನು ರೊಟ್ಟಿಯ ಮೇಲ್ಬದಿಗೆ ಹಚ್ಚಿ.
* ನಂತರ ಎರಡು ಬದಿ ರೊಟ್ಟಿಯನ್ನು ಬೇಯಿಸಿಕೊಂಡರೆ ಬಿಸಿ ಬಿಸಿ ಜೋಳದ ರೊಟ್ಟಿ ಸವಿಯಲು ಸಿದ್ಧ.












Click it and Unblock the Notifications