Mithai Bendu Recipe: ನಮ್ಮೂರು ಉತ್ತರ ಕರ್ನಾಟಕ ಜಾತ್ರೆವೊಳಗ ಜಿಲೇಬಿ, ಮಂಡಕ್ಕಿ ಜೊತೆ ಮಿಠಾಯಿ ಬೆಂಡು ತಿಂದಿರೇನು?
ಉತ್ತರ ಕರ್ನಾಟಕದ ಆಹಾರ ಶೈಲಿ ಕೊಂಚ ವಿಭಿನ್ನ. ಇಲ್ಲಿನ ಜನ ಸಿಹಿಗಿಂತ ಖಾರವಾದ ಆಹಾರವನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಆದರೂ ಜಾತ್ರೆ, ಮೈದಾನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಹೋದಾಗ ಮಾತ್ರ ಇಲ್ಲಿ ಸಿಹಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಬಿಸಿಲು ನಾಡಿನ ಜಾತ್ರೆಗಳು ಕೆಲ ಬಾರಿ ತುಂಬಾ ದಿನಗಳವರೆಗೆ ನಡೆಯುತ್ತವೆ. ಕೆಲ ಜಾತ್ರೆಗಳು ಸಂಜೆ ಹೊತ್ತು ಆರಂಭವಾಗಿ ರಾತ್ರಿ ಹೊತ್ತು ಮುಗಿಯುತ್ತವೆ. ಆಗ ಖಾರ ಮಂಡಕ್ಕಿ ಬಜ್ಜಿ ಜೊತೆಗೆ ಇಲ್ಲಿನ ಜನರಿಗೆ ಸ್ವೀಟ್ ಪೇಣೆ ಹಾಗೂ ಜಿಲೇಬಿ ತುಂಬಾನೇ ಅಚ್ಚುಮೆಚ್ಚು. ಇದನ್ನು ತಿನ್ನೋದಕ್ಕಾಗಿನೇ ಕೆಲ ಜನ ಜಾತ್ರೆಗೆ ಹೋಗುತ್ತಾರೆ.

ಜಿಲೇಬಿ ಗೊತ್ತು ಆದರೆ ಇನೇನು ಸ್ವೀಟ್ ಪೇಣೆ ಅಂದ್ರಾ? ಇದು ನಿಮಗೆ ಗೊತ್ತಿರಲು ಸಾಧ್ಯವಿಲ್ಲ ಬಿಡಿ. ಯಾಕೆಂದರೆ ಇದು ಉತ್ತರ ಕರ್ನಾಟಕ ಜಾತ್ರೆಗಳಲ್ಲಿ ಹಾಗೂ ಸ್ವೀಟ್ ಅಂಗಡಿಗಳಲ್ಲಿ ಮಾತ್ರ ಹೆಚ್ಚಾಗಿ ಸಿಗುತ್ತದೆ. ಬೆಂಗಳೂರು ಮೈಸೂರುಗಳಲ್ಲಿ ಮಕರ ಸಂಕ್ರಾಂತಿಗೆ ಅಲ್ಲಲ್ಲಿ ಸಣ್ಣಪುಟ್ಟ ಅಂಗಡಿಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತದೆ.
ಸ್ವೀಟ್ ಪೇಣೆ. ಇದೊಂದು ಸಿಹಿ. ಇದನ್ನು ಸಕ್ಕರೆಯಲ್ಲಿ ಮಾಡಲಾಗುತ್ತದೆ. ಪೆನ್ಸಿಲ್ ಆಕಾರದಲ್ಲಿ ತಯಾರಿಸುವುದರಿಂದ ಇದನ್ನು ಪೇಣೆ ಅಥವಾ ಬಳಪ ಸ್ವೀಟ್ ಅಂತ ಕರೆಯಲಾಗುತ್ತದೆ. ಹಾಗಾದರೆ ಈ ಬಳಪ ಸ್ವೀಟ್ ತಯಾರಿಸುವುದು ಹೇಗೆ ಅನ್ನೋದನ್ನು ಈಗ ತಿಳಿಯೋಣ. ನೀವು ಕೂಡ ಇದನ್ನು ಟ್ರೈ ಮಾಡಿ ರುಚಿ ನೋಡಿ ನಮ್ಮೊಂದಿಗೆ ನಿಮ್ಮ ಪ್ರತಿಕ್ರಿಯಯನ್ನು ಕಾಮೆಮಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಬೇಕಾಗುವ ಪದಾರ್ಥಗಳು:
* ಸಕ್ಕರೆ ಒಂದು ಕಪ್
* ವಿನೇಗರ್ 2 ಚಮಚ (ಅಂಥವಾ ನಿಂಬೆ ಹಣ್ಣಿನ ರಸ)
* ತುಪ್ಪಾ ಸ್ವಲ್ಪ

ಮಾಡುವ ವಿಧಾನ:-
*ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಒಂದು ಕಪ್ ಸಕ್ಕರೆ ಹಾಕಿ ಅದಕ್ಕೆ ಅರ್ಧ ಕಪ್ ನೀರು ಬೆರೆಸಿ ವಿನೇಗರ್ ಹಾಕಿ.
* ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಪೂರ್ತಿಯಾಗಿ ಕರಗಿ ಗಟ್ಟಿ ಪಾಕ ಬರುವವರೆಗೂ ಕಲಸಿ.
*ಬಾಣಲೆಯಲ್ಲಿ ಸಕ್ಕರೆ ಕರಗಿದ ಮೇಲೆ ಜಾಸ್ತಿ ಹೊತ್ತು ಮಿಕ್ಸ್ ಮಾಡಬೇಡಿ. ಸಕ್ಕರೆ ಕರಗಿ ಗಟ್ಟಿ ಪಾಕ ಬರುವವರೆಗೂ ಅದನ್ನು ಬಿಡಿ.
* ಇದು ಗಟ್ಟಿಯಾಗಿದಿಯಾ ಎಂದು ತಿಳಿಯಲು ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಸ್ವಲ್ಪ ಪಾಕವನ್ನು ಅದರಲ್ಲಿ ಹಾಕಿ. ಅದನ್ನು ಹೊರಗಡೆ ತೆಗೆದು ಅದು ಉಂಡೆ ಮಾಡಲು ಬಂದರೆ ಪಾಕ ರೆಡಿಯಾಗಿದೆ ಎಂದು ಅರ್ಥ.
*ಒಂದು ಪ್ಲೇಟ್‌ಗೆ ತುಪ್ಪವನ್ನು ಸವರಿ
* ಬಳಿಕ ಪಾಕ ತಟ್ಟೆಗೆ ಹಾಕಿ. ಸ್ವಲ್ಪ ಮಾತ್ರ ತಣ್ಣಗಾಗಲು ಬಿಡಿ.
* ನಂತರ ಇದನ್ನು ಕೈಗೆ ತುಪ್ಪ ಹಚ್ಚಿಕೊಂಡು ಹಿಗ್ಗಿಸಿ ಮಿಕ್ಸ್ ಮಾಡಬೇಕು. ಇದು ಬಿಸಿಯಾಗಿರುತ್ತದೆ. ಆಗಾಗ ತುಪ್ಪ ಹಚ್ಚಿಕೊಂಡು ಕೈಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ.
* ಇಪ್ಪತ್ತು ನಿಮಿಷ ಹೀಗೆ ಮಾಡಿ. ಇದರ ಬಣ್ಣ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ತಣ್ಣಗಾಗಲು ಬಿಡಬಾರದು ತಣ್ಣಗಾಗಲು ಬಿಟ್ಟರೆ ಅದು ಚೆನ್ನಾಗಿ ಹಿಗ್ಗುವುದಿಲ್ಲ. ಪುಡಿ ಪುಡಿಯಾಗಿಬಿಡುತ್ತದೆ.
* ಇದನ್ನು ಉದ್ದವಾಗಿ ಪೆನ್ಸಿಲ್‌ನಂತೆ ಮಾಡಿ 15 ನಿಮಿಷ ಬಿಟ್ಟು ಬಳಿಕ ಕಟ್ ಮಾಡಿದರೆ ಬಾಯಲ್ಲಿ ಕರಗುವ ಪೇಣೆ ರೆಡಿ.












Click it and Unblock the Notifications