ಕೋತಿಗಳಿಗೂ ಬಂತು ಚಿನ್ನದ ಬೆಲೆ : 2.5 ಮಿಲಿಯನ್ ರೂಪಾಯಿ ಮೀರಿದೆ ಮೌಲ್ಯ, ಇದ್ದಕ್ಕಿದ್ದಂತೆ ವಾನರನಿಗ್ಯಾಕೆ ಇಷ್ಟು ಬೇಡಿಕೆ?
ಭಾರತದಲ್ಲಿ, ಮಂಗಗಳನ್ನು ಹನುಮಂತನ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಲ್ಲಿ ಕೋತಿಗೆ ಯಾರೂ ತೊಂದರೆ ಕೊಡುವುದಿಲ್ಲ. ಅಲ್ಲದೆ ಅವುಗಳನ್ನು ಕೊಲ್ಲುವುದು ಕೂಡಾ ಮಹಾ ಪಾಪ ಎನ್ನುವ ನಂಬಿಕೆಯಿದೆ. ಆದರೆ ನೆರೆಯ ಚೀನಾದಲ್ಲಿ, ಮಂಗಗಳ ವ್ಯಾಪಾರವು ಕೋಟಿಗಳಲ್ಲಿ ನಡೆಯುತ್ತದೆ. ಇಲ್ಲಿ ಪ್ರತಿ ಕೋತಿಯನ್ನು 24-25 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಹೀಗೆ ಖರೀದಿಸಿದ ಮಂಗಗಳನ್ನು ಹೊಸ ಔಷಧಿಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬಳಸಲಾಗುತ್ತಿದೆ. ಆದರೆ ಈಗ, ಮಂಗಗಳ ಬೆಲೆಯಲ್ಲಿ ಭಾರೀ ಏರಿಕೆಯಿಂದಾಗಿ, ಕೆಲವು ಸಂಶೋಧಕರು ತಮ್ಮ ಅಧ್ಯಯನವನ್ನು ನಿಲ್ಲಿಸಬೇಕಾಗಿದೆ.
ಮಕಾಕ್ ಕೋತಿಗಳ ಬೆಲೆ ಇದ್ದಕ್ಕಿದ್ದಂತೆ ಹೆಚ್ಚಾಗಲು ಕಾರಣ?
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಗುವಾಂಗ್‌ಝೌದ ಜಿನಾನ್ ವಿಶ್ವವಿದ್ಯಾಲಯದ ವಿಜ್ಞಾನಿ ಗುವೊ ಕ್ಸಿಯಾಂಗ್ಯು, ಗಂಭೀರ ಮೆದುಳಿನ ಕಾಯಿಲೆಗಳಿಗೆ ಮಾನವರಲ್ಲದ ಪ್ರೈಮೇಟ್ ಮಾದರಿಗಳನ್ನು ಅಭಿವೃದ್ಧಿಪಡಿಸುವ ಮಾರ್ಗಗಳನ್ನು ಸಂಶೋಧಿಸುತ್ತಿರುವ ಸಂಶೋಧಕರಾಗಿದ್ದಾರೆ. ಈ ಉದ್ದೇಶಕ್ಕಾಗಿ ಅವರು ಮಕಾಕ್ ಮಂಗಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ ಮಂಗಗಳ ಬೆಲೆಯಲ್ಲಿನ ಹಠಾತ್ ಏರಿಕೆಯಿಂದಾಗಿ ಇದೀಗ ಖರೀದಿ ಕೂಡಾ ಕಷ್ಟಕರವಾಗಿದೆ. ಚೀನೀ ಹೊಸ ವರ್ಷದಿಂದ ಪ್ರಯೋಗಾಲಯದ ಮಂಗಗಳ ಬೆಲೆಗಳು ಸ್ಥಿರವಾಗಿ ಏರಿವೆ.

ಅಲ್ಲಿನ ಪೂರೈಕೆದಾರರು ಈಗ ಮಕಾಕ್ ಮಂಗಗಳನ್ನು 180,000 ಯುವಾನ್‌ಗಳಿಗೆ ಅಂದರೆ ಸುಮಾರು 25,58,772 ರೂಪಾಯಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ವಿಜ್ಞಾನಿ ಗುವೊ ಕ್ಸಿಯಾಂಗ್ಯು ಪ್ರಕಾರ, ಇದು ಕೇವಲ ಬೆಲೆಯ ವಿಷಯವಲ್ಲ. ಅನೇಕ ಸಂದರ್ಭಗಳಲ್ಲಿ, ಪೂರೈಕೆ ಕಡಿಮೆ ಇರುವುದರಿಂದ ಇಷ್ಟು ಹೆಚ್ಚಿನ ಬೆಲೆಗಳ ಹೊರತಾಗಿಯೂ ಮಂಗಗಳು ಖರೀದಿಗೆ ಲಭ್ಯವಿರುವುದಿಲ್ಲ. ಗುವೊ ಗುವಾಂಗ್‌ಡಾಂಗ್ ಪ್ರಾಂತೀಯ ಕೀ ಲ್ಯಾಬೊರೇಟರಿ ಆಫ್ ನಾನ್-ಹ್ಯೂಮನ್ ಪ್ರೈಮೇಟ್ ರಿಸರ್ಚ್‌ನಲ್ಲಿ ಕೆಲಸ ಮಾಡುತ್ತಾರೆ.
ಸಂಶೋಧನೆಗೆ ಮಕಾಕ್ ಮಂಗವೇ ಯಾಕೆ ಬೇಕು ?
ಪಾಥಲಾಜಿಕಲ್, ಮಾಲಿಕ್ಯುಲರ್ ಮತ್ತು ಬಯೋಲಾಜಿಕಲ್ ಕೆಲಸಗಳಿಗಾಗಿ ತಮ್ಮ ಪ್ರಯೋಗಾಲಯಕ್ಕೆ ವಾರ್ಷಿಕವಾಗಿ 30 ರಿಂದ 50 ಮಂಗಗಳು ಬೇಕಾಗುತ್ತವೆ ಎನ್ನುತ್ತಾರೆ ಗುವೊ. ವರದಿಗಳ ಪ್ರಕಾರ, ಚೀನಾದ ಔಷಧ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳು ವೇಗವಾಗಿ ಬೆಳೆಯುತ್ತಿವೆ. ಕ್ಸಿ ಜಿನ್‌ಪಿಂಗ್ ಸರ್ಕಾರವು ದೇಶದಲ್ಲಿ ಹೊಸ ಔಷಧಗಳು ಮತ್ತು ಜೈವಿಕ ಔಷಧಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದೆ. ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯವನ್ನು ಮುರಿದು ಜಾಗತಿಕ ಔಷಧ ಕೇಂದ್ರವಾಗುವುದು ಇದರ ಗುರಿಯಾಗಿದೆ.
ಪ್ರಯೋಗಾಲಯದಲ್ಲಿ ಮಕಾಕ್ ಮಂಗಗಳಿಗೆ ಬೇಡಿಕೆ ಹೆಚ್ಚು
ಇದಕ್ಕಾಗಿಯೇ ಎಲ್ಲೆಡೆ ಕ್ಲಿನಿಕಲ್ ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಅಭಿವೃದ್ಧಿಪಡಿಸಲಾಗುತ್ತಿರುವ ಔಷಧಿಗಳ ಎಷ್ಟು ಮತ್ತು ಹೇಗೆ ಪರಿಣಾಮಕಾರಿ ಎನ್ನುವುದನ್ನು ನಿರ್ಣಯಿಸಲು ಪ್ರಾಣಿಗಳನ್ನು ಈ ಪ್ರಯೋಗಾಲಯಗಳಿಗೆ ಕರೆತರಲಾಗುತ್ತದೆ. ಮಂಗಗಳು, ಅದರಲ್ಲಿಯೂ ಮಕಾಕ್ ಮಂಗಗಳ ಡಿಎನ್ಎ ಮತ್ತು ಜೈವಿಕ ಪ್ರತಿಕ್ರಿಯೆಗಳು ಮಾನವರಂತೆಯೇ ಇರುತ್ತವೆ. ಆದ್ದರಿಂದ, ಪ್ರಯೋಗಾಲಯಗಳಲ್ಲಿ ಅವುಗಳಿಗೆ ಹೆಚ್ಚಿನ ಬೇಡಿಕೆಯಿದೆ.
ವರದಿಯ ಪ್ರಕಾರ, ಯಾವುದೇ ಔಷಧವನ್ನು ತಕ್ಷಣ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದಿಲ್ಲ. ಅದನ್ನು ಬಿಡುಗಡೆ ಮಾಡುವ ಮೊದಲು, ಹಲವಾರು ಹಂತಗಳ ಮೂಲಕ ಹೋಗಬೇಕು. ಮೊದಲು, ಅದು ಪ್ರಯೋಗಾಲಯ ಪರೀಕ್ಷೆಗೆ ಒಳಗಾಗುತ್ತದೆ. ನಂತರ, ಪ್ರಾಣಿಗಳ ಮೇಲೆ ಅವುಗಳ ಪರಿಣಾಮವನ್ನು ನಿರ್ಧರಿಸಲು ಔಷಧವನ್ನು ಪರೀಕ್ಷಿಸಲಾಗುತ್ತದೆ. ಈ ಎರಡೂ ಹಂತಗಳಲ್ಲಿ ಔಷಧವು ಪರಿಣಾಮಕಾರಿ ಎಂದು ಸಾಬೀತಾದರೆ, ನಂತರ ಅದನ್ನು ಬಿಡುಗಡೆ ಮಾಡಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಚೀನಾ ಬಯೋಟೆಕ್ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ ಎಂಬುದು ಗಮನಿಸಬೇಕಾದ ಸಂಗತಿ. ಕ್ಯಾನ್ಸರ್, ಬೊಜ್ಜು, ಮಧುಮೇಹ, ಹೃದಯಾಘಾತ ಮತ್ತು ಸ್ವಯಂ ನಿರೋಧಕ ಕಾಯಿಲೆಗಳಂತಹ ಕಾಯಿಲೆಗಳಿಗೆ ಔಷಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಅದು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಆದರೂ, ಮಕಾಕ್ ಮಂಗಗಳ ಅಲಭ್ಯತೆಯು ಈಗ ವಿಜ್ಞಾನಿಗಳಿಗೆ ಸಮಸ್ಯೆಯನ್ನು ಸೃಷ್ಟಿಸಿದೆ. ಹೆಚ್ಚಿನ ಬೇಡಿಕೆಯಿಂದಾಗಿ, ಕಾಡಿನಲ್ಲಿ ಅವುಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ. 2025 ಮತ್ತು 2027 ರ ನಡುವೆ, ಚೀನಾದಲ್ಲಿ ಪ್ರತಿ ವರ್ಷ ಪ್ರಯೋಗಾಲಯದ ಬಳಕೆಗೆ ಸುಮಾರು 49,000 ರಿಂದ 52,000 ಮಕಾಕ್ ಮಂಗಗಳು ಮಾತ್ರ ಸಿಗತ್ತವೆ ಎಂದು ಅಂದಾಜಿಸಲಾಗಿದೆ.












Click it and Unblock the Notifications