ಉದ್ಯೋಗಿಗೆ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಗಿಫ್ಟ್! ಕಂಪನಿ ಮಾಲೀಕನ ಸರ್‌ಪ್ರೈಸ್‌ಗೆ ನೆಟ್ಟಿಗರು ಫಿದಾ
ದುಬೈ: ಸಾಮಾನ್ಯವಾಗಿ ಕಂಪನಿಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ ಉದ್ಯೋಗಿಗಳಿಗೆ ಬೋನಸ್, ಇನ್ಸೆಂಟಿವ್ ಅಥವಾ ಉಡುಗೊರೆ ನೀಡುವುದು ವಾಡಿಕೆ. ಆದರೆ ದುಬೈನ ರಿಯಲ್ ಎಸ್ಟೇಟ್ ಕಂಪನಿಯೊಂದು ತನ್ನ ಉದ್ಯೋಗಿಯ ಸಾಧನೆಗೆ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಐಷಾರಾಮಿ ಲ್ಯಾಂಬೋರ್ಗಿನಿ ಉರುಸ್ ಕಾರನ್ನೇ ಉಡುಗೊರೆಯಾಗಿ ನೀಡಿದೆ. ಕಂಪನಿಯ ಈ ವಿಶೇಷ ಉಡುಗೊರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ.
ದುಬೈ ಮೂಲದ ರಿಚ್‌ಕೀ ಪ್ರಾಪರ್ಟೀಸ್ (Richkey Properties) ಎಂಬ ರಿಯಲ್ ಎಸ್ಟೇಟ್ ಕಂಪನಿ ತನ್ನ ಅತ್ಯುತ್ತಮ ಸಾಧನೆ ಮಾಡಿದ ಉದ್ಯೋಗಿ ನಟಾಲಿಯಾ ಚಾವೆಜ್ ಅವರಿಗೆ ಈ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದೆ. ಕಳೆದ ಎರಡು ವರ್ಷಗಳಲ್ಲಿ 500 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಪೂರ್ಣಗೊಳಿಸಿದ ಸಾಧನೆಗಾಗಿ ಈ ವಿಶೇಷ ಬಹುಮಾನ ನೀಡಲಾಗಿದೆ.

ಕಂಪನಿ ವಾರ್ಷಿಕೋತ್ಸವದಲ್ಲಿ ಸರ್‌ಪ್ರೈಸ್ ಗಿಫ್ಟ್
ಕಳೆದ ವಾರ ಕಂಪನಿಯ ಮೂರನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಉದ್ಯೋಗಿಗಳಿಗೆ ನಾಲ್ಕು ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ವೇಳೆ ನಟಾಲಿಯಾ ಚಾವೆಜ್ ಅವರಿಗೆ 2026ರ ಕಂಪನಿಯ ಅತ್ಯುತ್ತಮ ಸಾಧಕ ಉದ್ಯೋಗಿ (Top Performer of 2026) ಪ್ರಶಸ್ತಿ ಘೋಷಿಸಲಾಯಿತು.
ಕಂಪನಿಯ ಸಿಇಒ ಫಹ್ಮಿ ಅವಾದ್ ಅವರು ವೇದಿಕೆಗೆ ಕರೆದು ನಟಾಲಿಯಾ ಅವರಿಗೆ ಟ್ರೋಫಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದ ನಟಾಲಿಯಾ ಅವರನ್ನು ಮತ್ತೆ ವಾಪಸ್ ಕರೆಸಿಕೊಂಡ ಸಿಇಒ, ಮತ್ತೊಂದು ಸರ್‌ಪ್ರೈಸ್ ಉಡುಗೊರೆ ಇದೆ ಎಂದು ತಿಳಿಸಿದರು.
ಬಳಿಕ ಉಡುಗೊರೆಯನ್ನು ತೆರೆಯುವಂತೆ ಸೂಚಿಸಿದರು. ಆಗ ಅಲ್ಲಿ ದೊಡ್ಡ ಬಿಲ್ಲಿನಿಂದ ಅಲಂಕರಿಸಿದ್ದ ಹೊಚ್ಚಹೊಸ ಲ್ಯಾಂಬೋರ್ಗಿನಿ ಉರುಸ್ ಕಾರು ಕಾಣಿಸಿಕೊಂಡಿದೆ. ಇದನ್ನು ಕಂಡ ನಟಾಲಿಯಾ ಸಂತಸದಿಂದ ಅಚ್ಚರಿಗೊಳಗಾಗಿದ್ದಾರೆ.
ಲ್ಯಾಂಬೋರ್ಗಿನಿ ಉರುಸ್ ಬೆಲೆ ಎಷ್ಟು?
ಲ್ಯಾಂಬೋರ್ಗಿನಿ ಉರುಸ್ ವಿಶ್ವದ ಜನಪ್ರಿಯ ಐಷಾರಾಮಿ ಎಸ್‌ಯುವಿ ಕಾರುಗಳಲ್ಲಿ ಒಂದಾಗಿದೆ. ದುಬೈ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 9 ಲಕ್ಷದಿಂದ 15.5 ಲಕ್ಷ ಯುಎಇ ದಿರ್ಹಮ್‌ವರೆಗೆ ಇದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 2.3 ಕೋಟಿ ರೂ.ನಿಂದ 4 ಕೋಟಿ ರೂ.ವರೆಗೆ ಬೆಲೆ ಇದೆ.
ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಿಚ್‌ಕೀ ಪ್ರಾಪರ್ಟೀಸ್, ನಟಾಲಿಯಾ ಅವರು 2026ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಕಂಪನಿಯ ಟಾಪ್ ಪರ್ಫಾರ್ಮರ್ ಪ್ರಶಸ್ತಿ ಗಳಿಸಿದ್ದಾರೆ. ಇದರೊಂದಿಗೆ ಅತ್ಯುತ್ತಮ ಬಹುಮಾನವಾಗಿ ಲ್ಯಾಂಬೋರ್ಗಿನಿ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ತಿಳಿಸಿದೆ.
'ನನ್ನ ಕಂಪನಿ ನನಗೆ ಬಿಪಿ ಕೊಡುತ್ತದೆ!'
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. 'ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಇದೇ ರೀತಿ ಗೌರವಿಸಿದರೆ ಎಷ್ಟು ಚೆನ್ನಾಗಿರುತ್ತದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, 'ನಮ್ಮ ಕಂಪನಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದರೂ ಒಂದು ವೋಚರ್ ಕೂಡ ಸಿಗುವುದಿಲ್ಲ. ಕೇವಲ ಪ್ರಮಾಣಪತ್ರ ನೀಡಿ ಅಭಿನಂದಿಸುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ನೆಟ್ಟಿಗರ ಕಾಮೆಂಟ್ ಮಾತ್ರ ಎಲ್ಲರ ಗಮನ ಸೆಳೆದಿದೆ. 'ನನ್ನ ಕಂಪನಿ ನನಗೆ ಉಡುಗೊರೆಯಾಗಿ ನೀಡುವುದು ರಕ್ತದೊತ್ತಡ (BP) ಮಾತ್ರ' ಎಂದು ತಮಾಷೆಯಾಗಿ ಬರೆದಿದ್ದಾರೆ.
ಕಾರು ಉಡುಗೊರೆ ನೀಡಿದ ಮತ್ತೊಂದು ಕಂಪನಿ
ಉದ್ಯೋಗಿಗಳ ಸಾಧನೆಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿರುವ ಕಂಪನಿಗಳ ಸಾಲಿಗೆ ರಿಚ್‌ಕೀ ಪ್ರಾಪರ್ಟೀಸ್ ಹೊಸ ಸೇರ್ಪಡೆಯಾಗಿದೆ. ಇತ್ತೀಚೆಗೆ ಎಂಐಟಿಎಸ್ ಗ್ರೂಪ್ ಆಫ್ ಕಂಪನೀಸ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಎಂ.ಕೆ. ಭಾಟಿಯಾ ಅವರು ದೀಪಾವಳಿ ಹಬ್ಬದ ಮುನ್ನ ತಮ್ಮ ನಾಲ್ವರು ಉದ್ಯೋಗಿಗಳಿಗೆ ಹೊಚ್ಚಹೊಸ ಕಿಯಾ ಸೋನೆಟ್ ಎಸ್‌ಯುವಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.


Click it and Unblock the Notifications
