Life Tips: ಪ್ರಾಮಾಣಿಕ ಬದುಕು ನಮಗೇಕೆ ಬೇಕು ಗೊತ್ತಾ?
ಒಳ್ಳೆಯದನ್ನು ಧ್ಯಾನಿಸುತ್ತಾ ಹೋಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ. ಮೋಸ, ವಂಚನೆ ಮಾಡದೆ ಪ್ರಾಮಾಣಿಕವಾಗಿ ಬದುಕುವ ವ್ಯಕ್ತಿ ಯಾವುದೇ ಭಯವಿಲ್ಲದೆ ಖುಷಿಯಾಗಿ ನೆಮ್ಮದಿಯಾಗಿ ಇರುತ್ತಾನೆ. ಆದರೆ ನ್ಯಾಯ ಮಾರ್ಗವನ್ನು ಬಿಟ್ಟು ಅನ್ಯಾಯದ ಹಾದಿಯಲ್ಲಿ ಸಾಗಿದವನು ಎಷ್ಟೇ ಸಕಲ ಐಶ್ವರ್ಯಗಳನ್ನು ಮನೆಯಲ್ಲಿ ತಂದು ಗುಡ್ಡೆ ಹಾಕಿಕೊಂಡಿದ್ದರೂ ಆತ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ.
ಒಂದು ಕೊಟ್ಟು ಮತ್ತೊಂದು ಕಿತ್ತುಕೊಳ್ಳುವುದು ದೇವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ ನಾವು ಏನೇ ಮಾಡಿದರೂ ಏನು ಆಗಬೇಕೋ ಅದೇ ಆಗುತ್ತಿರುತ್ತದೆ. ನಾವು ದೇವರ ಜತೆಯಲ್ಲಿ ಇರಲು ಸಾಧ್ಯವಾಗದು ಆದರೆ ದೇವರ ನಾಮಸ್ಮರಣೆ ತೊಡಗಿಸಿಕೊಳ್ಳಲು ತೊಂದರೆಯಿಲ್ಲ. ಇವತ್ತಿನ ಕಾಲದಲ್ಲಿ ನಾವು ಬದುಕಲು ಹೋರಾಟ ಮಾಡಲೇ ಬೇಕಾಗಿದೆ. ಆದರೆ ಆ ಹೋರಾಟ ಕೇವಲ ನಮಗಾಗಿ ಇರಬೇಕೇ ಹೊರತು ಬೇರೆಯವರ ಬದುಕನ್ನು ಕಿತ್ತುಕೊಳ್ಳಲು ಆಗಿರಬಾರದು.

ಮೋಸ, ವಂಚನೆ, ನಂಬಿಕೆ ದ್ರೋಹ, ಭ್ರಷ್ಟಾಚಾರ, ಹೀಗೆ ಯಾವುದನ್ನು ಮನುಷ್ಯರು ಮಾಡಬಾರದೋ ಅದೆಲ್ಲವನ್ನು ಮಾಡುತ್ತಲೇ ಜೀವನ ನಡೆಸುವುದು ಕೆಲವರಿಗೆ ಅಭ್ಯಾಸವಾಗಿದೆ. ಅದನ್ನೇ ಅವರು ಬದುಕು ಎಂಬಂತೆ ನಂಬಿ ಬದುಕುತ್ತಿದ್ದಾರೆ. ಇಂತಹವರ ನಡುವೆ ಒಳ್ಳೆಯವರಾಗಿ ಬದುಕುವುದು ಬಹಳಷ್ಟು ಮಂದಿಗೆ ಕಷ್ಟವಾಗುತ್ತಿದೆ. ಹೀಗಾಗಿ ಒಳ್ಳೆಯವರಾಗಿ, ಪ್ರಾಮಾಣಿಕವಾಗಿ ಬದುಕಬೇಕೆಂದು ಕೊಂಡವರು ಕೂಡ ನಾವು ಹೀಗಿದ್ದರೆ ಉದ್ದಾರವಾಗಲ್ಲವೆಂದು ತಮಗೆ ಇಷ್ಟವಿಲ್ಲದ ಹಾದಿಯನ್ನೇ ಹಿಡಿಯುವಂತಾಗಿದೆ.
ಒಳ್ಳೆಯದಕ್ಕಿಂತ ಕೆಟ್ಟದು ಬಹು ಆಕರ್ಷಣೀಯ
ಇವತ್ತು ಒಳ್ಳೆಯದಕ್ಕಿಂತ ಕೆಟ್ಟದು ನಮ್ಮೆಲ್ಲರನ್ನು ಬಹುಬೇಗ ಆಕರ್ಷಿಸುತ್ತದೆ. ಹೀಗಾಗಿ ಒಳ್ಳೆಯದರ ಕಡೆಗೆ ಮನಸ್ಸನ್ನು ಕೊಂಡೊಯ್ಯುವ ಪ್ರಯತ್ನವನ್ನೇ ಬಹುತೇಕರು ಮಾಡುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ನಾವು ಮಾಡಿದ್ದೇ ಸರಿ ಎನ್ನುವ ಮನೋಭಾವವು ಅವರನ್ನು ನ್ಯಾಯ ಮಾರ್ಗಕ್ಕಿಂತ ಹೆಚ್ಚಾಗಿ ಅನ್ಯಾಯದ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದೆ. ಆದರೆ ನಮ್ಮ ತಪ್ಪಿನ ಅರಿವಾದ ತಕ್ಷಣ ಎಚ್ಚೆತ್ತುಕೊಳ್ಳದೆ ಹೋದರೆ ಅದಕ್ಕೆ ತಕ್ಕ ಕಂದಾಯವನ್ನು ನಾವೆಲ್ಲರೂ ಕಟ್ಟಲೇ ಬೇಕಾಗುತ್ತದೆ.
ನಮಗೆಲ್ಲರಿಗೂ ಕೈತುಂಬಾ ಹಣಬೇಕು, ಓಡಾಡಲು ಕಾರು ಬೇಕು, ಎಲ್ಲರ ಮುಂದೆ ತಾನೇನು ಕಡಿಮೆ ಇಲ್ಲವೆಂಬಂತೆ ಬದುಕ ಬೇಕೆಂಬ ಬಯಕೆಯಿದೆ. ಆದರೆ ಅದೆಲ್ಲವೂ ಕಷ್ಟಪಟ್ಟು ದುಡಿಯುವವರಿಗೆ ತಕ್ಷಣಕ್ಕೆ ದಕ್ಕುವುದಿಲ್ಲ. ಹೀಗಾಗಿ ಅಡ್ಡ ಮಾರ್ಗಗಳಿಂದ ಒಮ್ಮೆಲೆ ಹಣ ಸಂಪಾದಿಸಲು ಮುಂದಾಗುತ್ತಾರೆ. ಆದರೆ ಅವರ ನಸೀಬು ಸರಿ ಇರೋ ತನಕ ಅವರು ಅಂದುಕೊಂಡಂತೆ ನಡೆಯುತ್ತದೆ. ಆದರೆ ಅದು ಕೆಟ್ಟ ಮಾರನೆಯ ದಿನವೇ ಸಂಕಷ್ಟ ಶುರುವಾಗುತ್ತದೆ. ಮಾಡಿದ ಅಷ್ಟು ಪಾಪಕೃತ್ಯಗಳಿಗೆ ಪ್ರಾಯಶ್ಚಿತ ಅನುಭವಿಸಿಯೇ ತೀರಬೇಕಾಗುತ್ತದೆ.

ನೆಮ್ಮದಿಗೆ ಮಾನಸಿಕ ಆರೋಗ್ಯ ಬೇಕು
ಏನೇನೋ ಮಾಡಿ ಹಣ ಸಂಪಾದಿಸಿದರೂ ಅದನ್ನು ನೆಮ್ಮದಿಯಾಗಿ ಅನುಭವಿಸುವಂತಿಲ್ಲ. ಅಷ್ಟರಲ್ಲೇ ಆರೋಗ್ಯ ಹದಗೆಡುತ್ತಿದೆ. ಅರಿವಿಲ್ಲದೆ ಕಾಯಿಲೆಗಳು ಮುತ್ತಿಕೊಂಡಿರುತ್ತವೆ. ಕಷ್ಟಪಟ್ಟು ದುಡಿದರೂ ಇಷ್ಟಪಟ್ಟಿದನ್ನು ತಿನ್ನಲಾಗದೆ ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಒಬ್ಬ ಮನುಷ್ಯ ನೆಮ್ಮದಿಯಾಗಿ ದಿನ ಕಳೆಯಬೇಕಾದರೆ ಆತನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗಿರುತ್ತದೆ. ಹೀಗಾಗಿ ಮಾನಸಿಕ ಆರೋಗ್ಯ ಬೇಕೆಂದರೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು.
ನಮ್ಮ ಹಲವು ವೈರುದ್ಧಗಳ ನಡುವೆಯೂ ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಅದು ಸುಲಭವಾಗ ಬೇಕಾದರೆ ನಮ್ಮ ಬದುಕು ಪ್ರಾಮಾಣಿಕವಾಗಿರಬೇಕಾಗುತ್ತದೆ. ಸಾಧ್ಯವಾದಷ್ಟು ದೇವಸ್ಥಾನಗಳಿಗೆ ಹೋಗುವುದು, ದೇವತಾಕಾರ್ಯಗಳಲ್ಲಿ ತೊಡಗಿಕೊಳ್ಳುವುದು, ದೇವರ ನಾಮಸ್ಮರಣೆ ಮಾಡುವುದು ಹೀಗೆ ಮಾಡುತ್ತಾ ನಮ್ಮೊಳಗಿನ ವಿಕಾರತೆಯನ್ನು ತೊಡೆದು ಹಾಕಬೇಕಾಗುತ್ತದೆ. ಮತ್ತು ಪರಿಶುದ್ಧ ಮನಸ್ಸನ್ನು ನೆಲೆಗೊಳಿಸಬೇಕು. ಇದು ಅಷ್ಟು ಸುಲಭವಲ್ಲ. ಆದರೆ ಕಷ್ಟವೂ ಅಲ್ಲ.
ಸ್ವಾಮಿ ಬ್ರಹ್ಮಾನಂದರು ಹೇಳುವುದೇನು?
ಕೆಲವರು ಸುಮ್ಮನೆ ಕುಳಿತಾಗಲೂ ದೇವರ ನಾಮ ಜಪ ಮಾಡುತ್ತಿರುತ್ತಾರೆ. ಅದು ನಮಗೆ ವಿಚಿತ್ರವಾಗಿ ಕಂಡು ಬಂದರೂ ಅದು ಎಲ್ಲೆಂದರಲ್ಲಿ ಹರಡಿ ಹೋಗುವ ಮನಸ್ಸನ್ನು ಎಳೆದು ತಂದು ಒಂದೆಡೆ ಕಟ್ಟಿಹಾಕುವ ಪ್ರಯತ್ನವಾಗಿರುತ್ತದೆ. ಬಹಳಷ್ಟು ಸಲ ನಮ್ಮನ್ನು ಕೆಟ್ಟವರನ್ನಾಗಿಸುವುದು ಎಲ್ಲವೂ ಬೇಕೆಂಬ ಬಯಕೆ ಮತ್ತು ನಮ್ಮ ಸುತ್ತಮುತ್ತ ಇರುವವರಲ್ಲಿದೆ, ನಮಗಿಲ್ಲವೆಂಬ ಹೊಟ್ಟೆಯುರಿ. ಅದಕ್ಕಿಂತ ಹೆಚ್ಚಾಗಿ ಅವನಿಗಿಂತ ನಾನೇನು ಕಡಿಮೆಯಿಲ್ಲ ಎಂಬ ಅಹಂ. ಹೀಗಾಗಿ ಅವರ ಜತೆಗೆ ನಮಗೆ ಗೊತ್ತಿಲ್ಲದಂತೆ ಪೈಪೋಟಿಗಿಳಿಯುತ್ತೇವೆ. ಇದರಿಂದ ನಮಗೆ ಲಾಭಕ್ಕಿಂತ ನಷ್ಟವೇ ಎಂಬುದು ಗೊತ್ತಿದ್ದರೂ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಕ್ರಮೇಣ ಅದರ ಪರಿಣಾಮ ನಮ್ಮ ಮೇಲೆ ಬೀರಲಾರಂಭಿಸಿದಾಗ ಪರಿಸ್ಥಿತಿ ಭೀಕರವಾಗಿರುತ್ತದೆ.
ಸ್ವಾಮಿ ಬ್ರಹ್ಮಾನಂದರು ಹೇಳುವ ಪ್ರಕಾರ ಮನುಷ್ಯನ ಮನಸ್ಸಿನೊಳಗೆ ಅನಪೇಕ್ಷಣೀಯವಾದ ಬಯಕೆಗಳು ಅಥವಾ ಗೊಂದಲಗಳು ನುಸುಳಿ ಬರದಂತೆ ಸದಾ ನೋಡಿಕೊಳ್ಳಬೇಕಂತೆ. ಅಂತಹ ವಿಚಾರಗಳು ಮನಸ್ಸನ್ನು ತುಂಬಿಕೊಳ್ಳಲು ಪ್ರಯತ್ನಿಸಿದಾಗ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿ ಏಕಚಿತ್ತದಿಂದ ಪ್ರಾರ್ಥಿಸಬೇಕಂತೆ. ಇದನ್ನು ಅಭ್ಯಾಸ ಮಾಡಿಕೊಂಡರೆ ಬದುಕನ್ನು ಒಂದೊಳ್ಳೆಯ ನೆಲೆಗಟ್ಟಿನಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆಯಂತೆ. ನ್ಯಾಯ ಮಾರ್ಗದ ಸಂಪಾದನೆಯಲ್ಲಿ ಇದ್ದುದರಲ್ಲಿ ನೆಮ್ಮದಿಯ ಬದುಕನ್ನು ಸಾಗಿಸುವುದರಲ್ಲಿ ಇರುವ ಸುಖ ಮೋಸ ವಂಚನೆಯಿಂದ ಸಂಪಾದಿಸುವುದರಲ್ಲಿ ಇರುವುದಿಲ್ಲ ಎಂಬ ಸತ್ಯ ಅರಿತರೆ ಪ್ರಾಮಾಣಿಕರಾಗಿ ಬದುಕಲು ಸಾಧ್ಯವಾಗುತ್ತದೆ.












Click it and Unblock the Notifications