ದುಷ್ಟರ ಸಂಗದಿಂದ ಸಜ್ಜನರಿಗೆ ಸಂಕಷ್ಟ: ಜೀವನದ ಒಳಿತಿಗಾಗಿ ನಾವೇನು ಮಾಡಬೇಕು..?
ಪ್ರತಿಯೊಬ್ಬರೂ ಅವರವರ ಮನಸ್ಥಿತಿಗೆ ತಕ್ಕಂತಹ ವ್ಯಕ್ತಿಗಳ ಸಂಗವನ್ನು ಮಾಡುತ್ತಾರೆ. ಮತ್ತು ಅವರೊಂದಿಗೆ ಒಡನಾಟವನ್ನಿಟ್ಟು ಕೊಂಡು ಅವರ ಮನಸ್ಥಿತಿಗೆ ತಕ್ಕಂತಹ ಕೆಲಸಗಳನ್ನೇ ಮಾಡುತ್ತಾರೆ. ಇಲ್ಲಿ ನಾವು ಯಾರ ಸಹವಾಸ ಮಾಡುತ್ತಿದ್ದೇವೆ? ಎನ್ನುವುದು ಬಹು ಮುಖ್ಯವಾಗುತ್ತದೆ. ಬಹಳಷ್ಟು ಜನರು ಸಹವಾಸ ದೋಷದಿಂದಲೇ ಬದುಕಿನಲ್ಲಿ ಅಡ್ಡದಾರಿ ಹಿಡಿಯುತ್ತಾರೆ ಅಷ್ಟೇ ಅಲ್ಲದೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.
ದೇವರು ನಮ್ಮೆಲ್ಲರಿಗೂ ವರವೆಂಬಂತೆ ಯೋಚಿಸುವ ಶಕ್ತಿಯನ್ನು ನೀಡಿದ್ದಾನೆ. ಹೀಗಿರುವಾಗ ನಾವು ಯಾರ ಸಂಗ ಮಾಡುತ್ತಿದ್ದೇವೆ ಮತ್ತು ಅದರಿಂದ ನಮಗೇನು ಪ್ರಯೋಜನವಾಗುತ್ತದೆ ಎಂಬುದನ್ನು ಯೋಚಿಸಿ ಮುನ್ನಡೆಯಬೇಕಾಗುತ್ತದೆ. ಇಲ್ಲದೆ ಹೋದರೆ ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬ ಹಿಂದಿನವರ ಮಾತು ನಿಜವಾಗಿ ಬಿಡುತ್ತದೆ. ಇವತ್ತು ನಮ್ಮ ಕಣ್ಣ ಮುಂದೆಯೇ ಸಹವಾಸದಿಂದ ಸಂಕಷ್ಟ ಅನುಭವಿಸಿದವರ ಮತ್ತು ಅನುಭವಿಸುತ್ತಿರುವವರ ದೊಡ್ಡ ಪಟ್ಟಿಯೇ ಇದೆ.

ಬಹಳಷ್ಟು ಜನರ ಬದುಕು ಮೂರಾಬಟ್ಟೆಯಾದಾಗಲೆಲ್ಲ ನಾವು ಅವನು ಅಥವಾ ಅವಳು ಸಹವಾಸದಿಂದ ಕೆಟ್ಟರು ಎಂದು ಥಟ್ ಅಂಥ ಹೇಳಿ ಬಿಡುತ್ತೇವೆ. ಇದು ನಿಜವೂ ಹೌದು. ಹೀಗಿರುವಾಗ ನಾವೆಲ್ಲರೂ ಸಂಬಂಧ ಬೆಳೆಸುವ ಅಥವಾ ಗೆಳೆತನ ಮಾಡುವ ಮುನ್ನ ನೂರು ಸಲ ಯೋಚಿಸಬೇಕಿದೆ. ದುರ್ಜನರ ಸಂಗ ಬಿಡು, ಸಜ್ಜನರ ಸಹವಾಸ ಮಾಡು ಎಂಬ ಹಿತೋಕ್ತಿಯನ್ನು ಸರ್ವಕಾಲಕ್ಕೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಹಿರಿಯರು ಹಿತೋಕ್ತಿಯನ್ನು ಸುಮ್ಮನೆ ಹೇಳಿಲ್ಲ
ಈ ಹಿತೋಕ್ತಿಯನ್ನು ಸುಮ್ಮನೆ ಹೇಳಿಲ್ಲ. ಅನುಭವದಿಂದಲೇ ಹೇಳಿದ್ದಾರೆ. ಪುರಾಣ ಕಾಲದಿಂದ ಇಲ್ಲಿಯವರೆಗೆ ನಡೆದ ಅದೆಷ್ಟೋ ಘಟನೆಗಳನ್ನು ಆದರಿಸಿಯೇ ಹಿರಿಯರು ಹೇಳಿದ್ದಾರೆ. ಹೀಗಾಗಿಯೇ ಅದು ಮಹತ್ವ ಪಡೆದುಕೊಂಡಿದೆ. ಮತ್ತು ಎಷ್ಟೋ ಸಲ ಅದು ನಮ್ಮ ಅನುಭವಕ್ಕೂ ಬಂದಿರುತ್ತದೆ. ನಾವು ಸಜ್ಜನರ ಸಂಗದಿಂದ ಪಡೆದದ್ದು, ದುರ್ಜನರಿಂದ ಕಳೆದುಕೊಂಡಿದ್ದು ಬೇಕಾದಷ್ಟಿದೆ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ದುರ್ಜನರ ಸಹವಾಸ ಮಾಡಿರುತ್ತೇವೆ. ಅವರೊಂದಿಗೆ ಸೇರಿ ಮಾಡಬಾರದ್ದನೆಲ್ಲಾ ಮಾಡಿ ಬಿಡುತ್ತೇವೆ.
ಕ್ರಮೇಣ ನಾವು ಮಾಡಿದ ಪಾಪದ ಕಾರ್ಯಕ್ಕೆ ಭಗವಂತ ನಮಗೆ ತಕ್ಕ ಪ್ರತಿಫಲ ನೀಡುತ್ತಾನೆ. ಅದಕ್ಕೆ ತಕ್ಕ ಕಂದಾಯ ಕಟ್ಟ ಬೇಕಾದ ಪರಿಸ್ಥಿತಿ ಒದಗಿ ಬಂದಾಗ ಛೆ! ತಪ್ಪು ಮಾಡಿಬಿಟ್ಟೆ ಆತನ ಅಥವಾ ಅವಳ ಸಹವಾಸ ಮಾಡಿ ಹಾಳಾಗಿ ಬಿಟ್ಟೆ ಎಂಬುದು ಅರಿವಿಗೆ ಬರುತ್ತದೆ. ಆದರೆ ಬೇರೆ ದಾರಿಯಿರುವುದಿಲ್ಲ ಹೀಗಾಗಿ ಮಾಡಿದ ಪಾಪಕಾರ್ಯಕ್ಕೆ ತಕ್ಷ ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ.

ದುಷ್ಟರ ಸಂಗದಿಂದ ಸಜ್ಜನರಿಗೆ ಸಂಕಷ್ಟ
ಕೆಟ್ಟವರ ಸಹವಾಸದಲ್ಲಿರುವವರೆಗೂ ನಾವು ಪರಿಶುದ್ಧರಾಗಿರಲು ಸಾಧ್ಯವಿಲ್ಲ. ದಾನ ಶೂರ ಕರ್ಣನೇ ದುರ್ಜನರ ಸಹವಾಸದಿಂದ ಹಾಳಾದನು. ದೈಹಿಕ ಬಲ ಮತ್ತು ಬುದ್ದಿಬಲ ಇದ್ದರೂ ಏನು ಪ್ರಯೋಜನವಾಯಿತು? ದುರ್ಯೋಧನ, ದುಶ್ಯಾಸನ, ಶಕುನಿಯರ ಸಹವಾಸದಲ್ಲಿ ಬೆರೆತು ದುಷ್ಟ ಚತುಷ್ಟಯ ಎಂದು ಕುಖ್ಯಾತಿ ಪಡೆದನು. ದುಷ್ಟರ ಸಹವಾಸದಿಂದ ಸಜ್ಜನರು ಹೇಗೆ ಹಾಳಾಗುತ್ತಾರೆ ಎಂಬುದಕ್ಕೆ ಕರ್ಣ ಒಳ್ಳೆಯ ಉದಾಹರಣೆಯಾಗುತ್ತಾನೆ.
ದುಷ್ಟರ ಸಂಗದಿಂದ ಸಜ್ಜನರ ಮೇಲೆ ಪರಿಣಾಮ ಬೀರುತ್ತದೆ. ಅವರ ಸಂಗದಿಂದಾಗಿ ಸದ್ಗುಣಗಳು ನಾಶವಾಗಿ ದುರ್ಗುಣಗಳು ಹುಟ್ಟುತ್ತವೆ. ಆದುದರಿಂದ ನಾವು ಅಂತಹವರಿಂದ ಆದಷ್ಟು ದೂರವಿರುವಂತೆ ಎಚ್ಚರವಹಿಸಬೇಕು. ಸರ್ಪ ಒಮ್ಮೆ ಕಚ್ಚಿ ತೃಪ್ತಿಪಟ್ಟುಕೊಳ್ಳುತ್ತದೆ. ಆದರೆ ದುರ್ಜನರು ಆಹೋರಾತ್ರಿ ಮಾತು ಕೃತಿಯಿಂದ ಚುಚ್ಚಿ ನೋವು ನೀಡುತ್ತಾರೆ. ವಿಶ್ರಾಂತಿಯಿಲ್ಲದೆ, ವಿರಾಮವಿಲ್ಲದೆ, ತೊಂದರೆ ನೀಡುತ್ತಾರೆ.
ದುಷ್ಟರ ಸಂಗ ತ್ಯಜಿಸುವುದು ಒಳಿತು
ನಾವು ನೆಮ್ಮದಿಯಿಂದ ಬದುಕಬೇಕಾದರೆ ದುರ್ಜನರಿಂದ ದೂರ ಇರುವುದನ್ನು ಕಲಿಯಬೇಕು. 'ಭಜ ಸಾಧು ಸಮಾಗಮಂ' ಅಂದರೆ ಸಜ್ಜನರ ಸಹವಾಸದಲ್ಲಿರು ಎಂಬ ವಾಕ್ಯವನ್ನು ಮನದಲ್ಲಿ ಪಠಿಸುತ್ತಲೇ ಇರಬೇಕಾಗುತ್ತದೆ. ನಾವು ದುಷ್ಟರಿಂದ ದೂರವಿದ್ದರೆ ಸಾಲದು, ಸಜ್ಜನರ ಸಂಗ ಮಾಡಬೇಕು. ಸತ್ಸಂಗದಲ್ಲಿರಬೇಕು ಎಂದು ವೇದವ್ಯಾಸರು ಹೇಳಿದ್ದಾರೆ. ಪರೋಪಕಾರವೇ ಪುಣ್ಯ.
ಪರಪೀಡನೆಯೇ ಪಾಪ ಎಂಬುದನ್ನು ಮರೆಯಬಾರದು. ದುಷ್ಟ ಜನರ ಸಂಗವನ್ನು ತ್ಯಜಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ನಮ್ಮಲ್ಲಿ ಒಳ್ಳೆತನ ಬೆಳೆಸಿಕೊಳ್ಳುವುದು, ಜತೆಗೆ ಇಂದ್ರಿಯಗಳನ್ನು ಹಿತಮಿತವಾಗಿ ಬಳಸಿ ಜೀವನ ನರಕದೃಶ್ಯವಾಗದಂತೆ ನೋಡಿಕೊಳ್ಳಬೇಕು. ಬಾಹ್ಯದಿಂದ ದೃಷ್ಟಿಯನ್ನು ಕಿತ್ತು ಅಂತರ್ಮುಖ ಮಾಡಿಕೊಳ್ಳಬೇಕು. ಇದಕ್ಕಿಂತ ಮಿಗಿಲಾದ ಸಾಧನೆ ಬೇರೊಂದಿಲ್ಲ.
ಪಶುಪಕ್ಷಿಗಳು ತಮ್ಮ ರೀತಿ ನೀತಿ ಪಾಲಿಸುತ್ತವೆ. ದುರದೃಷ್ಟವೆಂದರೆ ಮಾನವನು ಮಾನವ ಧರ್ಮದಿಂದ ದೂರ ಸರಿಯುತ್ತಾನೆ. ಪಶುಪಕ್ಷಿಗಳಿಗೆ ಕಾಲ ಹಾಗೂ ಕಾರಣವಿದೆ. ಅವುಗಳನ್ನು ಅನುಸರಿಸಿ ವರ್ತಿಸುತ್ತವೆ. ಆದರೆ ಮನುಷ್ಯ ಹಾಗಲ್ಲ ಅವನಿಗೆ ಬುದ್ದಿಯಿದೆ. ಅದನ್ನು ಆತ್ಮತತ್ವ ಅರಿಯಲು ಬಳಸಬೇಕು. ಹಾಗಾದಾಗ ನಮ್ಮಿಂದ ಮತ್ತೊಬ್ಬರಿಗೆ ಕೆಡಕಾಗುವುದಿಲ್ಲ. ನಮ್ಮಿಂದ ಬೇರೆಯವರಿಗೆ ಕೆಡಕು ಉಂಟಾಗುವುದಿಲ್ಲ. ಒಂದೊಳ್ಳೆಯ ಬದುಕನ್ನು ನಾವು ಕಟ್ಟಿಕೊಳ್ಳುವ ಜತೆಗೆ ನಾವು ಯಾರ ಸಂಗ ಮಾಡಿದ್ದೇವೆ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ.












Click it and Unblock the Notifications