ಉತ್ತಮ ಜೀವನಕ್ಕಾಗಿ ಕೋಳಿ ಹುಂಜದಿಂದ ನಾವು ಕಲಿಯಬೇಕಾಗಿರುವುದೇನು?
ಪ್ರಕೃತಿ ನಿಯಮದಂತೆ ಎಲ್ಲವೂ ನಡೆಯುತ್ತಿದೆ. ಮಳೆ ಬಂದು ನಿಂತ ಬಳಿಕ ಬಿಸಿಲು ಬರುತ್ತದೆ. ಬಿಸಿಲ ನಡುವೆ ಮಳೆಯೂ ಬರುತ್ತದೆ. ಇಲ್ಲಿ ಯಾವುದೇ ಒಂದು ಹೆಚ್ಚಾದರೂ ನಾವು ತತ್ತರಿಸಿ ಹೋಗುತ್ತೇವೆ. ಪ್ರಕೃತಿಯಲ್ಲಿ ಏನೇ ಹೆಚ್ಚುಕಡಿಮೆ ಆದರೂ ಅದನ್ನು ಸರಿತೂಗಿಸಿಕೊಳ್ಳುವ ಶಕ್ತಿ ದೇವರು ಪ್ರಕೃತಿಗೆ ಕೊಟ್ಟಿದ್ದಾನೆ. ಈ ಪ್ರಕೃತಿಯ ನಡುವೆ ಬದುಕುತ್ತಿರುವ ನಾವು ಕೋಳಿ ಹುಂಜದಿಂದಲೂ ಕೆಲವೊಂದನ್ನು ಕಲಿಯ ಬೇಕಾಗಿದೆಯಂತೆ. ಹಾಗಾದರೆ ಏನದು?
ಪ್ರಕೃತಿಯಲ್ಲಿರುವ ಸಸ್ಯ ಪ್ರಾಣಿ ಎಲ್ಲವೂ ಬದುಕಲು ಹೋರಾಟ ಮಾಡುತ್ತವೆ.
ಪ್ರತಿಯೊಂದು ಜೀವರಾಶಿಗೂ ಬದುಕಿನಲ್ಲಿ ಭಯವಂತು ಇದ್ದೇ ಇದೆ. ಹೀಗಿದ್ದಾಗಿಯೂ ಅವು ಬದುಕಲು ಹೋರಾಟ ಮಾಡುತ್ತವೆ. ಮತ್ತು ಹೋರಾಟ ಮಾಡುತ್ತಲೇ ಬದುಕುತ್ತವೆ. ಪ್ರತಿಯೊಂದು ಜೀವರಾಶಿಗೂ ಒಂದು ನಿಯಮವಿದೆ ಮತ್ತು ಅದರಂತೆಯೇ ಬದುಕುತ್ತವೆ. ಪ್ರಾಣಿ ಪಕ್ಷಿಗಳಿಗೆ ಆಕ್ಷಣದಷ್ಟೇ ಚಿಂತೆ. ಅದು ಸಿಕ್ಕಿತೆಂದರೆ ಖುಷಿಯಾಗಿ ಬಿಡುತ್ತವೆ. ನಾಳಿನ ಚಿಂತೆಗಳು ಅವುಗಳತ್ತ ಸುಳಿಯಲ್ಲ.

ಆದರೆ ಮನುಷ್ಯರಾದ ನಮ್ಮ ಬದುಕು ಹಾಗಿಲ್ಲ. ನಮಗೆ ನಾಳೆ ಮಾತ್ರವಲ್ಲ ಮುಂದಿನ ತಲೆಮಾರಿನ ಬಗ್ಗೆಯೂ ಚಿಂತೆ ಮಾಡುತ್ತೇವೆ. ಜತೆಗೆ ಕೂಡಿಡುವ ಪ್ರಯತ್ನ ಮಾಡುತ್ತೇವೆ. ಹೀಗಾಗಿಯೇ ನಾವು ಎಲ್ಲವೂ ಇದ್ದರೂ ಏನೂ ಇಲ್ಲದಂತೆ ಬದುಕುತ್ತೇವೆ. ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿಗಳೆಲ್ಲವೂ ಅವುಗಳ ಕೆಲಸ ಕಾರ್ಯವನ್ನು ಚಾಚೂ ತಪ್ಪದೆ ಮಾಡುತ್ತವೆ. ಅವುಗಳಲ್ಲೊಂದು ಶಿಸ್ತಿದೆ. ಅದನ್ನು ನಾವು ಪ್ರಕೃತಿ ನಿಯಮ ಎನ್ನುತ್ತೇವೆ. ಅದು ನಿಲ್ಲುವುದಿಲ್ಲ. ಅಷ್ಟೇ ಅಲ್ಲ ಯಾರನ್ನೂ ಕಾಯುವುದಿಲ್ಲ. ದಿನ ಬೆಳಗಾದರೆ ಅದನ್ನು ಚಾಚೂ ತಪ್ಪದೆ ಮಾಡುತ್ತವೆ.
ನಮ್ಮ ಬದುಕಿಗೆ ಶಿಸ್ತು ಎಂಬುದೇ ಇಲ್ಲ
ನಾವು ಹಾಗಲ್ಲ ನಮ್ಮ ಬದುಕಿಗೆ ಶಿಸ್ತು ಎಂಬುದೇ ಇಲ್ಲ. ಹೀಗಾಗಿಯೇ ಬಹಳಷ್ಟು ವಿಚಾರಗಳಲ್ಲಿ ಸೋಲುಗಳನ್ನು ಕಾಣುತ್ತೇವೆ. ಹಾಗೆಸುಮ್ಮನೆ ಸೂಕ್ಷ್ಮವಾಗಿ ಗಮನಿಸಿ ನೋಡಿ ಪಕ್ಷಿಗಳು, ಚಳಿಯಿರಲಿ, ಮಳೆಯಿರಲಿ ಅವುಗಳ ಸಮಯಕ್ಕೆ ಸರಿಯಾಗಿ ಗೂಡು ಬಿಟ್ಟು ಆಹಾರ ಅರಸಿ ಹಾರಿ ಹೋಗುತ್ತವೆ. ಪ್ರಾಣಿಗಳು ಕೂಡ ಅವುಗಳ ದೈನಂದಿನ ಕೆಲಸ ಏನಿದೆಯೋ ಅದನ್ನು ಚಾಚು ತಪ್ಪದೆ ಮಾಡುತ್ತವೆ. ಹೊಟ್ಟೆ ತುಂಬಲು ಏನು ಬೇಕೋ ಅದನ್ನು ಅವುಗಳಿಗೆ ತೋಚಿದಂತೆ ಮಾಡಿ ಮುಗಿಸುತ್ತವೆ.
ಅವುಗಳಿಗೆಲ್ಲ ಹೋಲಿಸಿದರೆ ಮನುಷ್ಯರಾದ ನಾವು ಬುದ್ದಿವಂತರು, ವಿವೇಚನಾಶೀಲರು. ಆದರೆ ನಾವು ಕೆಲವೊಮ್ಮೆ ಅವುಗಳಿಗಿಂತ ಕೀಳಾಗಿ ನಡೆದುಕೊಳ್ಳುತ್ತೇವೆ. ಚಳಿಯಿದ್ದರೆ ಚಳಿ.. ಬಿಸಿಲಿದ್ದರೆ ಅಯ್ಯೋ ಬಿಸಿಲು.. ಮಳೆ ಬಂದರೆ ಅಬ್ಬಾ ಮಳೆ.. ಹೀಗೆ ಗೊಣಗುತ್ತಾ ಅವುಗಳಿಗೆ ಹೆದರಿ ನಮ್ಮ ಕರ್ತವ್ಯ ಮರೆತು ಮುಸುಕು ಹಾಕಿ ಮಲಗಿ ಬಿಡುತ್ತೇವೆ.
ಸೋಮಾರಿಗಳನ್ನಾಗಿ ಮಾಡುತ್ತಿರುವುದು ಯಾವುದು?
ಇಂತಹ ಶಿಸ್ತುಗಳಿಲ್ಲದ ಮತ್ತು ಶ್ರಮವೇ ಪಡದ ಬದುಕಿನಿಂದ ದೈಹಿಕ ರೋಗಗಳಿಗೆ ಪಾಲುದಾರರಾಗುತ್ತಿದ್ದೇವೆ. ನಾವೇನು ಮಾಡಬೇಕೆಂದುಕೊಂಡಿದ್ದೇವೆಯೋ ಅದನ್ನು ಮಾಡಿ ಮುಗಿಸದೆ ನಾಳೆ ಮಾಡಿದರಾಯಿತು ಎನ್ನುತ್ತಲೇ ಸೋಮಾರಿಗಳಾಗಿ ಮುನ್ನಡೆಯುತ್ತಿದ್ದೇವೆ. ಕೆಲವರಂತು ಯಾವುದನ್ನೂ ಮಾಡದೆ ನಾಳೆ ಮಾಡಿದರಾಯಿತು ಎಂದುಕೊಂಡೇ ಕಾಲ ಕಳೆಯುತ್ತಾರೆ. ಹೀಗಾಗಿಯೇ ಕೆಲವೊಂದು ಸಮಸ್ಯೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ.
ಆಮೇಲೆ ಮಾಡೋಣ.. ಹೇಗೋ ನಡೆಯುತ್ತೆ.. ಮುಂತಾದ ಅಸಡ್ಡೆಯ ಮಾತುಗಳು ಕೂಡ ನಮ್ಮನ್ನು ಇನ್ನಷ್ಟು ಸೋಮಾರಿಗಳನ್ನಾಗಿ ಮಾಡಿ ಬಿಡುತ್ತದೆ. ಪ್ರತಿದಿನ ಒಂದು ನಿರ್ದಿಷ್ಟ ಸಮಯದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಅದೇ ಸಮಯಕ್ಕೆ ಮಳೆಯೋ, ಚಳಿಯೋ ಇದ್ದರೆ ಬೆಚ್ಚಗೆ ಹೊದ್ದು ಮಲಗಿಬಿಡೋಣ ಎನಿಸಿ ಬಿಡುತ್ತದೆ. ಈಗ ಎದ್ದು ಮಾಡೋ ಕೆಲಸವನ್ನು ಮತ್ತೆ ಮಾಡಿದರಾಯಿತು ಎಂಬ ತೀರ್ಮಾನಕ್ಕೂ ಬಂದು ಬಿಡುತ್ತೇವೆ.
ಕೋಳಿ ಹುಂಜದಿಂದ ಏನನ್ನು ಕಲಿಯಬೇಕು?
ಹಿರಿಯರು ಹೇಳುತ್ತಾರೆ ಸಮಯಕ್ಕೆ ಸರಿಯಾಗಿ ಏಳುವುದು, ಯುದ್ಧ ಮಾಡಲು ಸದಾ ಸನ್ನದ್ಧರಾಗಿರುವುದು, ಬಂಧುಗಳಿಗೆ ಅವರ ಪಾಲನ್ನು ಕೊಡುವುದು, ಸ್ವಯಂ ಅಕ್ರಮಣ ಮಾಡುತ್ತಾ ಊಟ ಮಾಡುವುದು. ಈ ನಾಲ್ಕು ಗುಣಗಳನ್ನು ಮನುಷ್ಯ ಕೋಳಿ ಹುಂಜದಿಂದ ಕಲಿಯ ಬೇಕಂತೆ. ಮಳೆಯಿರಲಿ, ಚಳಿಯಿರಲಿ ಹುಂಜ ಬೆಳಗಾಗುತ್ತಿದ್ದಂತೆಯೇ ಕೂಗಿ ಮಲಗಿದವರಿಗೆ ಬೆಳಗಾಯಿತು ಎಂಬ ಸಂದೇಶವನ್ನು ರವಾನಿಸುತ್ತದೆ. ಕೋಳಿ ಹುಂಜ ಅಪ್ಪಿ ತಪ್ಪಿಯೂ ಮತ್ತೆ ಕೂಗಿದರಾಯಿತು ಎಂದು ತೆಪ್ಪಗಿರುವುದಿಲ್ಲ. ಜೊತೆಗೆ ಏನೇ ಆಹಾರ ಸಿಕ್ಕಿದರೂ ಇತರೆ ಕೋಳಿಗಳನ್ನು ಕೂಗಿ ಕರೆಯುತ್ತದೆ. ಅಷ್ಟೇ ಅಲ್ಲದೆ ಬೇರೆ ಕೋಳಿಗಳನ್ನು ಓಡಿಸುತ್ತಾ ತನ್ನ ಆಹಾರ ತಿನ್ನುತ್ತದೆ. ಅಷ್ಟೇ ಅಲ್ಲದೆ ಸುತ್ತಮುತ್ತ ಕಣ್ಣಾಡಿಸುತ್ತಾ ಎಚ್ಚರಿಕೆಯಿಂದಲೇ ಸಾಗುತ್ತಿರುತ್ತದೆ.
ಈ ಕೋಳಿ ಹುಂಜದಲ್ಲಿರುವ ಶಿಸ್ತು ಆಗಲೀ ಗುಣಗಳಾಗಲೀ ನಮ್ಮಲ್ಲಿ ಇಲ್ಲದಾಗಿದೆ. ಆದ್ದರಿಂದ ಶಿಸ್ತುಬದ್ಧವಾಗಿ ಕೆಲಸ ಮಾಡದೆ ಮತ್ತೆ ಮಾಡಿದರಾಯಿತು. ನಾಳೆ ಮಾಡಿದರಾಯಿತು ಎಂದು ಮುಂದೂಡುತ್ತೇವೆ. ಇನ್ನು ನೆರಳಿಗಾಗಿ ಮತ್ತು ಹಣ್ಣಿಗಾಗಿ ಮರವನ್ನು ಆಶ್ರಯಿಸುತ್ತೇವೆ. ಕೆಲವೊಮ್ಮೆ ಕೆಲವೊಮ್ಮೆ ಮರ ರುಚಿಯಾದ ಹಣ್ಣನ್ನು ಕೊಡದಿದ್ದರೂ ನೆರಳನ್ನಂತು ನೀಡಿಯೇ ನೀಡುತ್ತದೆ. ಮರ, ಗಿಡ, ಪ್ರಾಣಿ, ಪಕ್ಷಿಗಳಲ್ಲಿ ಶಿಸ್ತು ಮತ್ತು ಒಂದೊಂದು ರೀತಿಯ ಉಪಕಾರದ ಗುಣವಿರುವಾಗ ಮನುಷ್ಯರಾದ ನಾವು ಏಕೆ ಹೀಗೆ?












Click it and Unblock the Notifications