ನಮ್ಮಲ್ಲಿದ್ದುಕೊಂಡೇ ನಮ್ಮನ್ನು ಆಳುವ ಆ ಮೂರು ಭಾವನೆಗಳು ಯಾವುದು ಗೊತ್ತಾ?
ಪ್ರತಿಯೊಬ್ಬ ಮನುಷ್ಯನಲ್ಲಿಯೂ ತನ್ನದೇ ಆದ ಭಾವನೆಗಳಿರುತ್ತವೆ. ಆ ಭಾವನೆಗಳು ಆತನ ಸ್ವಭಾವದ ಸುತ್ತಲೂ ಗಿರಕಿ ಹೊಡೆಯುತ್ತಿರುತ್ತವೆ. ಕೆಲವರು ಭಾವನೆಗಳನ್ನು ಹೊರ ಹಾಕಿದರೆ, ಮತ್ತೆ ಕೆಲವರು ಒಳಗೆ ಅದುಮಿಟ್ಟು ತಮಗೆ ತೋಚಿದಂತೆ ಕಲ್ಪನೆ ಮಾಡಿಕೊಳ್ಳುತ್ತಾರೆ. ನಮ್ಮಲ್ಲಿನ ಭಾವನೆಗಳನ್ನು ಹೊರಹಾಕಲು ಸಾಕಷ್ಟು ಹಾದಿಗಳಿವೆ. ಆದರೆ ಅದನ್ನು ಮರೆತು ಮೌನವಾಗಿದ್ದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸದಾ ನಮ್ಮಲ್ಲೊಂದು ಒಳ್ಳೆಯ ಭಾವನೆಗಳನ್ನು ಕಾಪಿಟ್ಟುಕೊಳ್ಳಬೇಕು. ಆ ಭಾವನೆಯೊಂದಿಗೆ ತೇಲಾಡುತ್ತಿರಬೇಕು.
ಕವಿಗಳು ನಮ್ಮಲ್ಲಿರುವ ಭಾವನೆಗಳನ್ನು ಅಕ್ಷರಗಳಲ್ಲಿ ಇಳಿಸಿದರೆ, ಇನ್ನು ಕೆಲವರು ತಮ್ಮ ಕೆಲಸಗಳಲ್ಲಿ ಅದನ್ನು ಪ್ರದರ್ಶಿಸಿ ಬಿಡುತ್ತಾರೆ. ಮತ್ತೆ ಕೆಲವರು ಒಳ್ಳೆದೊಂದು ಹವ್ಯಾಸಗಳಲ್ಲಿ ತೋರಿಸುತ್ತಾರೆ. ಇನ್ನು ಕೆಲವರು ತಮ್ಮ ಭಾವನೆಗಳನ್ನು ಮತ್ತೊಬ್ಬರೊಂದಿಗೆ ಹೇಳಿಕೊಂಡು ಹಗುರವಾಗುತ್ತಾರೆ. ಆದರೆ ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳ ಬೇಕಾದ ವಿಷಯ ಏನೆಂದರೆ ನಮ್ಮಲ್ಲಿರುವ ಭಾವನೆ ಶುದ್ಧತೆಯಿಂದ ಕೂಡಿದ್ದರೆ ಅದು ಖುಷಿ ಕೊಡುವುದರಲ್ಲಿ ಎರಡು ಮಾತಿಲ್ಲ.

ಭಾವನೆಗಳಿಗೆ ಕಾಮ, ಕ್ರೋಧ, ಲೋಭ, ಅಸೂಯೆ, ಅಹಂಕಾರ, ಈರ್ಷ್ಯೆ ಸೇರದೆ ಹೋದರೆ ಅವು ನಮಗೆ ಸದಾ ಖುಷಿ, ನೆಮ್ಮದಿಯನ್ನೇ ಸದಾ ನೀಡುತ್ತಿರುತ್ತದೆ. ಅದು ಬಿಟ್ಟು ಅನೈತಿಕ ಹಾದಿ ಹಿಡಿದರೆ ಅದರ ಪರಿಣಾಮಗಳು ಒಳ್ಳೆಯದಾಗಿರಲಿಲ್ಲ. ಇನ್ನು ನಮ್ಮಲ್ಲಿ ಮೂಡುವ ಭಾವನೆಗಳನ್ನು ಮೂರು ವಿಧದಲ್ಲಿ ವಿಂಗಡಿಸಬಹುದಾಗಿದೆ. ಅದು ಯಾವುದೆಂದರೆ, ವಸ್ತುವಿನ ಸ್ವರೂಪವನ್ನು ಸರಿಯಾಗಿ ತಿಳಿಯದಿರುವುದು ಅಭಾವನೆ, ವಸ್ತುವು ಇರುವುದೇ ಒಂದಾದರೆ ಅದನ್ನು ಬೇರೊಂದಾಗಿ ಅರಿಯುವುದು ವಿಪರೀತ ಭಾವನೆ, ಆ ವಸ್ತುವು ಆ ವಿಧವಾಗಿ ಇಲ್ಲವೆಂಬ ಭಾವನೆಯನ್ನು ತಾಳುವುದು ಅಸಂಭಾವನೆ.
ಒಂದೊಳ್ಳೆಯ ಮೂರ್ತರೂಪ ನೀಡಬೇಕು
ನಮ್ಮಲ್ಲಿ ಹುಟ್ಟುವ ಭಾವನೆಗಳಿಗೆ ಒಂದೊಳ್ಳೆಯ ಮೂರ್ತ ರೂಪ ನೀಡಬೇಕಾಗುತ್ತದೆ. ಆಗ ಭಾವನೆಗಳಿಗೆ ಅರ್ಥ ಬರುತ್ತದೆ. ಭಾವನೆಗಳು ಕೂಡ ಮನುಷ್ಯನ ಸ್ವಭಾವದಿಂದ ನಿರ್ಧರಿತವಾಗುತ್ತದೆ. ಅದು ಸತ್ವ, ರಜ, ತಮ ಎಂಬ ಮೂರು ಗುಣಗಳಿಂದ ಉಂಟಾಗುತ್ತದೆ. ಇದರಲ್ಲಿ ಯಾವುದೇ ಒಂದು ಅಥವಾ ಎರಡು ಗುಣಗಳ ಪ್ರಾಧಾನ್ಯದಿಂದ ಒಬ್ಬ ವ್ಯಕ್ತಿಯ ಸ್ವಭಾವವು ನಿಂತಿರುತ್ತದೆ. ಹೀಗಾಗಿ ಆ ಗುಣಗಳಿಗೆ ಸಂಬಂಧಪಟ್ಟಂತೆ ಭಾವನೆಗಳು ಹುಟ್ಟಿಕೊಂಡಿರುತ್ತವೆ.
ಮನುಷ್ಯ ಚಟುವಟಿಕೆಯಿಂದ ಇರಬೇಕಾದರೆ ಅವನಲ್ಲಿ ಒಂದೊಳ್ಳೆಯ ಭಾವನೆ ಸದಾ ಜಾಗೃತವಾಗಿರಬೇಕು. ವಿಷಯ ಯಾವುದೇ ಆಗಿರಲಿ ನಮ್ಮೊಳಗಿನ ಭಾವನೆಗಳು ಅದರಲ್ಲಿ ಮಿಂದೇಳುವಂತಿರಬೇಕು. ಆದರೆ ಇಲ್ಲಿ ನಮ್ಮ ಭಾವನೆಗಳು ಹೇಗಿರಬೇಕು? ಅಥವಾ ಅದು ಎಲ್ಲಿಂದ ಹುಟ್ಟಬೇಕು? ಎಂಬುದರ ಬಗ್ಗೆ ಹೇಳಬೇಕೆಂದರೆ ಅದು ಸತ್ವ ಗುಣದಿಂದ ಹೊರಬರಬೇಕು.

ಸತ್ವಗುಣದಿಂದ ಹುಟ್ಟುವ ಭಾವನೆ ಸುಂದರ
ಸತ್ವ ಗುಣವು ಸತ್ವ ಗುಣವು ನೀರಿನ ಹಾಗೆ ನಿರ್ಮಲವಾದುದು. ಅದರಲ್ಲಿ ಆತ್ಮ ಸ್ವರೂಪವೂ ಪ್ರತಿಬಿಂಬಿಸಿ ಸೂರ್ಯನಂತೆ ಜಡ ಜಗತ್ತನ್ನು ಪ್ರಕಾಶಪಡಿಸುತ್ತದೆ. ಶ್ರದ್ಧೆ, ಭಕ್ತಿ ಮುಮುಕ್ಷುತ್ವ, ದೈವಿ ಸಂಪತ್ತು ಹಾಗೂ ಅಸುರ ಸಂಪತ್ತಿನ ತ್ಯಾಗವಾಗಿದ್ದು, ಪ್ರಸನ್ನತೆ, ಆತ್ಮಾನುಭವ, ಪರಮಶಾಂತಿ, ತೃಪ್ತಿ ಆಹ್ಲಾದ, ಆನಂದವನ್ನು ತುಂಬುತ್ತಿರುತ್ತದೆ. ಇಂತಹ ಸತ್ವಗುಣದಿಂದ ಹುಟ್ಟುವ ಭಾವನೆ ಮನುಷ್ಯನನ್ನು ಆನಂದದಿರಿಸುತ್ತದೆ. ಇಲ್ಲಿ ನಮ್ಮ ಭಾವನೆಗಳನ್ನು ಕೆರಳಿಸುವವರು ಬೇಕಾದಷ್ಟು ಮಂದಿಯಿದ್ದಾರೆ. ಭಾವನೆಗಳು ಸದಾ ಒಳಿತಿನ ಕಡೆಗೆ ಇರಲಿ ಅದನ್ನು ಹೊರತು ಪಡಿಸಿ ಅನೈತಿಕತೆ ಕಡೆಗೆ ಹೊರಳಿಸಿದರೆ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು.
ಎಲ್ಲಿಯವರೆಗೆ ನಮ್ಮ ಸ್ವಭಾವದಲ್ಲಿ ರಜಸ್ಸು ಮತ್ತು ತಮಸ್ಸುಗಳು ಆಧಿಪತ್ಯವನ್ನು ಸ್ಥಾಪಿಸದಂತೆ ನೋಡಿಕೊಳ್ಳುತ್ತೇವೆಯೋ ಅಲ್ಲಿಯವರೆಗೆ ನಮ್ಮಲ್ಲಿ ಹುಟ್ಟುವ ಭಾವನೆಗಳ ಶುದ್ಧವಾಗಿರುತ್ತವೆ. ಇಲ್ಲಿ ನಾವು ಮುಖ್ಯವಾಗಿ ಎಚ್ಚರ ವಹಿಸಬೇಕಾದ ವಿಚಾರ ಏನೆಂದರೆ? ನಮ್ಮ ಮನಸ್ಸನ್ನು ರಜೋಗುಣ ಮತ್ತು ತಮೋಗುಣಗಳ ಪ್ರಾಬಲ್ಯಕ್ಕೆ ವಶವಾಗದಂತೆ ಹಾಗೆಯೇ ಸತ್ವ ಗುಣ (ಒಳ್ಳೆಯ ಗುಣ) ಬೆಳೆಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನಮ್ಮೊಳಗೆ ಒಳ್ಳೆಯ ಭಾವನೆ ಹುಟ್ಟಲು ಸಾಧ್ಯವಾಗುತ್ತದೆ.












Click it and Unblock the Notifications