ಮಿಕ್ಕಿರುವ ಅನ್ನವನ್ನು ಎಸೆಯುವ ಬದಲು ತಯಾರಿಸಿ ಗರಿಗರಿಯಾದ ಹಪ್ಪಳ: ಬಲು ಸುಲಭದ ರೆಸಿಪಿ ಇದು
ಪ್ರತಿಯೊಂದು ಮನೆಯಲ್ಲೂ ಅನ್ನ ಉಳಿಯುವುದು ಸಾಮಾನ್ಯ. ರಾತ್ರಿ ಉಳಿದ ಅನ್ನವನ್ನು ತಂಗಳು ಎನ್ನುವ ಕಾರಣಕ್ಕೆ ಅನೇಕ ಜನರು ತಿನ್ನಲು ಇಷ್ಟಪಡುವುದಿಲ್ಲ. ನೇರವಾಗಿ ಕಸದ ಬುಟ್ಟಿಗೆ ಎಸೆಯುತ್ತೇವೆ. ಅಥವಾ ಫ್ರಿಜ್ ಒಳಗೆ ಇಡುತ್ತೇವೆ. ಎಷ್ಟೋ ಸಲ ಫ್ರಿಜ್ ಒಳಗೆ ಇಟ್ಟ ಅನ್ನ ಅಲ್ಲಿಯೇ ವಾರಗಳವರೆಗೆ ಉಳಿದು ಕೊನೆಗೆ ಕಸದ ಡಬ್ಬಿಯೇ ಸೇರುವುದು. ಅನ್ನ ಎಂದರೆ ದೇವರು ಎನ್ನುವ ನಂಬಿಕೆ ನಮ್ಮಲ್ಲಿದೆ. ಅನ್ನವನ್ನು ಎಸೆದರೆ ಮುಂದೊಂದು ದಿನ ಅದೇ ಅನ್ನಕ್ಕಾಗಿ ಪರಿತಪಿಸುವ ಕಾಲ ಬರುತ್ತದೆ ಎನ್ನುತ್ತಾರೆ ಹಿರಿಯರು. ಆದ ಕಾರಣ ಯಾವುದೇ ಕಾರಣಕ್ಕೂ ಅನ್ನವನ್ನು ಎಸೆಯಬಾರದು. ಹೀಗೆ ಉಳಿದ ಅನ್ನವನ್ನು ಬಿಸಾಡುವ ಬದಲು ಅದರಿಂದ ಕೆಲವೊಂದು ರುಚಿಕರ ಖಾದ್ಯಗಳನ್ನು ತಯಾರಿಸಬಹುದು. ಈ ತಿಂಡಿಗಳನ್ನು ತಯಾರಿಸುವ ರೆಸಿಪಿ ಕೂಡಾ ಬಹಳ ಸುಲಭವಾಗಿದೆ. ಮಾತ್ರವಲ್ಲ ಬಹು ಬೇಗನೆ ಮಾಡಿ ಮುಗಿಸಬಹುದು.
ಉಳಿದ ಅನ್ನದಲ್ಲಿ ಮಾಡುವ ಬೇರೆ ಬೇರೆ ರೆಸೆಪಿಗಳಲ್ಲಿ ಹಪ್ಪಳ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮಿಕ್ಕಿದ ಅನ್ನದಿಂದ ಮಾಡಿದ ಗರಿಗರಿಯಾದ ಹಪ್ಪಳವನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕೆನಿಸುವಷ್ಟು ರುಚಿಕರವಾಗಿರುತ್ತದೆ. ಇದನ್ನು ತಯಾರಿಸಲು ಹೆಚ್ಚು ಸಾಮಗ್ರಿಗಳ ಅಗತ್ಯವೂ ಇಲ್ಲ.

ಅನ್ನದ ಹಪ್ಪಳ:
ಉಳಿದ ಅನ್ನದಿಂದ ಹಪ್ಪಳ ಮಾಡುವ ಸಂಪ್ರದಾಯ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮುಂದುವರೆದಿದೆ. ಒಂದು ಕಾಲದಲ್ಲಿ, ಬೇಸಿಗೆಯಲ್ಲಿ ಮನೆಗಳ ಮುಂದೆ ದೊಡ್ಡ ಬಟ್ಟೆಗಳನ್ನು ಹರಡಿ ಹಪ್ಪಳಗಳನ್ನು ಒಣಗಿಸುವುದು ಸಾಮಾನ್ಯವಾಗಿತ್ತು. ಕಾಲ ಬದಲಾದರೂ, ಆ ರುಚಿಯ ಹುಚ್ಚು ಇನ್ನೂ ಕಡಿಮೆಯಾಗಿಲ್ಲ. ಈ ಅನ್ನದ ಹಪ್ಪಳಗಳು ತಿನ್ನುವುದಕ್ಕೂ ರುಚಿ, ಆರೋಗ್ಯವಾಗಿಯೂ ಇರುತ್ತದೆ. ವಿಶೇಷವಾಗಿ ನಿಮ್ಮ ಮಕ್ಕಳು ಸಂಜೆ ಗರಿಗರಿಯಾದ ಖಾದ್ಯವನ್ನು ಬಯಸಿದರೆ ಥಟ್ ಅಂತ ಈ ಹಪ್ಪಳವನ್ನು ಕರಿದು ಕೊಡಬಹುದು. ಚಿಪ್ಸ್‌ನಂಥಹ ಅನಾರೋಗ್ಯಕರ ಆಹಾರವನ್ನು ನೀಡುವ ಬದಲು ಹಪ್ಪಳ ನೀಡುವುದು ಉತ್ತಮ ಆಯ್ಕೆ. ಇನ್ನು ಊಟಕ್ಕೆ ದಾಲ್, ಸಾಂಬಾರ್ ಮತ್ತು ರಸಂ ಇದ್ದಾಗ ಸೈಡ್‌ನಲ್ಲಿ ಈ ಹಪ್ಪಳ ಇದ್ದರೆ ಇನ್ನೇನು ಬೇಕು.
ಅನ್ನದ ಹಪ್ಪಳ ಮಾಡುವ ವಿಧಾನ:
ಈ ಹಪ್ಪಳಗಳನ್ನು ಮಾಡಲು, ಮೊದಲು ಉಳಿದ ಅನ್ನವನ್ನು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ತೊಳೆಯಿರಿ. ನಂತರ ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಅಥವಾ ರವೆ, ಸಣ್ಣ ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ, ಜೀರಿಗೆ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೆಲವರು ರುಚಿಗಾಗಿ ಶುಂಠಿ ತುಂಡುಗಳು, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸುತ್ತಾರೆ. ನೆನಪಿರಲಿ ಈ ಮಿಶ್ರಣವು ತುಂಬಾ ತೆಳುವಾಗಿರಬಾರದು, ಆದರೆ ಕೈಯಿಂದ ಹರಡುವಂತಿರಬೇಕು. ನಂತರ, ಅದನ್ನು ಪ್ಲಾಸ್ಟಿಕ್ ಹಾಳೆ ಅಥವಾ ಬಟ್ಟೆಯ ಮೇಲೆ ಸಣ್ಣ ಹಪ್ಪಳದ ಆಕಾರದಲ್ಲಿ ಹರಡಿ. ಒಂದು ಅಥವಾ ಎರಡು ದಿನ ಬಿಸಿಲಿನಲ್ಲಿ ಒಣಗಿಸಿದರೆ, ಅದು ಚೆನ್ನಾಗಿ ಗಟ್ಟಿಯಾಗುತ್ತದೆ. ಇವುಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿಮೇಡ್ ಫ್ರೈಗಳಂತೆ ಗರಿಗರಿಯಾಗಿರುತ್ತವೆ ಮತ್ತು ತುಂಬಾ ರುಚಿಯಾಗಿರುತ್ತವೆ.
ಪಕೋಡಾ ಕೂಡಾ ಬಲು ರುಚಿ:
ತಕ್ಷಣ ತಿನ್ನಲು ಬಯಸುವವರು ಪಕೋಡಾ ಮಾಡಿಯೂ ತಿನ್ನಬಹುದು. ಉಳಿದ ಅನ್ನವನ್ನು ಕಡಲೆ ಹಿಟ್ಟು, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳೊಂದಿಗೆ ಬೆರೆಸಿ, ಸಣ್ಣ ಉಂಡೆಗಳನ್ನಾಗಿ ಮಾಡಿ, ಆ ಉಂಡೆಗಳನ್ನು ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿ ಅನ್ನದ ಪಕೋಡಾ ಸವಿಯಲು ರೆಡಿಯಾಗುತ್ತದೆ. ಮಳೆ ಬರುತ್ತಿದ್ದ ಸಮಯದಲ್ಲಿ ಒಂದು ಲೋಟ ಚಹಾದೊಂದಿಗೆ ಈ ಪಕೋಡಾ ಬೆಸ್ಟ್ ಕಾಂಬಿನೇಶನ್.
ಟೇಸ್ಟಿ ಮಂಚೂರಿಯನ್:
ಹೊರಗೆ ಫಾಸ್ಟ್ ಫುಡ್ ತಿನ್ನುವುದಕ್ಕಿಂತ ಮನೆಯಲ್ಲಿ ಆರೋಗ್ಯಕರವಾಗಿ ತಯಾರಿಸಿದ ತಿಂಡಿ ಮಾಡಿ ತಿನ್ನುವುದು ಉತ್ತಮ. ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್ ಅನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದು ಅದಕ್ಕೆ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮ್ಯಾಟೋ ಸಾಸ್ ಹಾಕಿ ಅನ್ನದ ಪಕೋಡಾ ಹಾಕಿ ಬೆರೆಸಿದರೆ ಸೂಪರ್ ಮಂಚೂರಿಯನ್ ಕೂಡಾ ರೆಡಿಯಾಗುತ್ತದೆ.
ಇಂದಿನ ಪೀಳಿಗೆಯಲ್ಲಿ ಅನೇಕ ಜನರು ಉಳಿದ ಅನ್ನವನ್ನು ವ್ಯರ್ಥ ಮಾಡುತ್ತಿದ್ದರೆ, ನೆಟ್ಟಿಗರು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ "ಉಳಿದ ಅನ್ನದಿಂದ ಮಾಡಿದ ಭಕ್ಷ್ಯಗಳು ವಿಶೇಷ ರುಚಿಯನ್ನು ಹೊಂದಿರುತ್ತವೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಶೇಷವಾಗಿ ಮಿಕ್ಕಿದ ಅನ್ನದಿಂದ ತಯಾರಿಸುವ ಫ್ರೈಡ್ ರೈಸ್, ಪಕೋಡಾ ಮತ್ತು ಹಪ್ಪಳ, ಮಂಚೂರಿಯನ್ ತಿನ್ನಲು ಬಹಳ ರುಚಿಯಾಗಿರುತ್ತದೆ. ಜೊತೆಗೆ ಆರೋಗ್ಯಕರವಾಗಿಯೂ ಇರುತ್ತದೆ.
ಹಾಗಾಗಿ ಮನೆಯಲ್ಲಿ ಅನ್ನ ಉಳಿದಿದ್ದರೆ ಅದನ್ನು ಎಸೆಯುವ ಬದಲು ಅದರಿಂದ ರುಚಿಕರ ತಿನಿಸುಗಳನ್ನು ತಯಾರಿಸಿ ಕುಟುಂಬದೊಂದಿಗೆ ಸವಿಯಿರಿ. ಈ ಸಣ್ಣ ಸಲಹೆಗಳಿಂದ ಆಹಾರವನ್ನು ವೇಸ್ಟ್ ಮಾಡದೆ ಹೊಸ ರುಚಿಗಳನ್ನು ಆನಂದಿಸಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications