ಬೇಸಿಗೆಯಲ್ಲಿ ಡಯಾಲಿಸಿಸ್ ರೋಗಿಗಳಲ್ಲಿ ಸೋಂಕಿನ ಅಪಾಯ ಹೆಚ್ಚಾಗುವುದೇಕೆ? ಸಮಸ್ಯೆ ಉಲ್ಬಣಿಸದಂತೆ ಏನು ಮಾಡಬೇಕು

ದಿನೇ ದಿನೇ ಬಿಸಿಲ ಬೇಗೆ ಜಾಸ್ತಿಯಾಗುತ್ತಿದೆ. ಏರುತ್ತಿರುವ ಬಿಸಿಲು ಆರೋಗ್ಯವಂತರನ್ನೂ ಹೈರಾಣಾಗಿಸಿದೆ. ಇನ್ನು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಮತ್ತು ಡಯಾಲಿಸಿಸ್‌ಗೆ ಒಳಗಾಗಿರುವ ರೋಗಿಗಳ ಜೀವನವನ್ನು ಇನ್ನಷ್ಟು ದುಸ್ತರಗೊಳಿಸಿದೆ. ಡಯಾಲಿಸಿಸ್ ರೋಗಿಗಳು ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ.ಇದರಿಂದಾಗಿ ಅವರು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ. ವಿಶೇಷವಾಗಿ ಬೇಸಿಗೆಯಲ್ಲಿ, ಬೆವರುವುದು, ಡಿಹೈಡ್ರೇಶನ್‌ ಮತ್ತು ಸೋಂಕಿನ ಅಪಾಯ ಕಾಡುತ್ತದೆ.

1.ಕ್ಯಾತೆಟರ್ ಮತ್ತು ಫಿಸ್ಟುಲಾ ಸೋಂಕುಗಳು:

ವೆಸ್ಕ್ಯುಲರ್‌ ಆಕ್ಸೆಸ್‌ ಡಯಾಲಿಸಿಸ್ ರೋಗಿಗಳ ಲೈಫ್‌ ಲೈನ್‌ ಆಗಿರುತ್ತದೆ. ಬೇಸಿಗೆಯಲ್ಲಿ ಅತಿಯಾಗಿ ಬೆವರುವುದು ಈ ಪ್ರದೇಶದಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವನ್ನು ಹೆಚ್ಚಿಸುತ್ತದೆ. ಫಿಸ್ಟುಲಾ ಸ್ಥಳದಲ್ಲಿ ಕೆಂಪಾಗುವುದು, ಊತ, ನೋವು ಅಥವಾ ಕೀವು ಕಾಣಿಸಿಕೊಂಡರೆ, ಅದು ಸೋಂಕಿನ ಸಂಕೇತವಾಗಿರಬಹುದು. ಬೇಸಿಗೆಯಲ್ಲಿ ಬೆವರು ಸಂಗ್ರಹವಾಗುವುದನ್ನು ತಡೆಯಲು ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬೆವರಿನಿಂದ ಒದ್ದೆಯಾದ ಬ್ಯಾಂಡೇಜ್‌ಗಳನ್ನು ತಕ್ಷಣ ಬದಲಾಯಿಸಬೇಕು.

Dialysis Patients

2.ಜೀರ್ಣಾಂಗವ್ಯೂಹದ ಸೋಂಕು:

ಬೇಸಿಗೆಯಲ್ಲಿ, ನೀರು ಮತ್ತು ಆಹಾರವು ಬೇಗನೆ ಹಾಳಾಗುತ್ತದೆ. ಡಯಾಲಿಸಿಸ್ ರೋಗಿಗಳಿಗೆ ದಿನವಿಡೀ ಎಷ್ಟು ನೀರು ಕುಡಿಯಬೇಕೆಂದು ಹೇಳಲಾಗುತ್ತದೆ. ಬಾಯಾರಿದಾಗ, ರೋಗಿಗಳು ಶುದ್ಧ ನೀರನ್ನು ಮಾತ್ರ ಕುಡಿಯಬೇಕು. ಸೋಂಕನ್ನು ತಪ್ಪಿಸಲು ಅತಿಸಾರ, ವಾಂತಿ ಅಥವಾ ಹೊಟ್ಟೆ ಸೆಳೆತದಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಯಾವಾಗಲೂ ಕುದಿಸಿ ಆರಿಸಿದ ಅಥವಾ ಫಿಲ್ಟರ್ ಮಾಡಿದ ನೀರನ್ನು ಮಾತ್ರ ಕುಡಿಯಬೇಕು. ಕತ್ತರಿಸಿದ ಹಣ್ಣುಗಳನ್ನು ಅಥವಾ ಹೊರಗಿನ ಆಹಾರವನ್ನು ಎಂದಿಗೂ ಸೇವಿಸಬಾರದು.

ಬಿಸಿಲು ಜಾಸ್ತಿಯಾಗಿರುವಾಗ ಐಸ್‌ ಕ್ರೀಂ ಸೇರಿದಂತೆ ಈ ಆಹಾರಗಳನ್ನು ಯಾವ ಕಾರಣಕ್ಕೂ ಸೇವಿಸಬಾರದು!
ಬಿಸಿಲು ಜಾಸ್ತಿಯಾಗಿರುವಾಗ ಐಸ್‌ ಕ್ರೀಂ ಸೇರಿದಂತೆ ಈ ಆಹಾರಗಳನ್ನು ಯಾವ ಕಾರಣಕ್ಕೂ ಸೇವಿಸಬಾರದು!

3.ಬೆವರುವುದು ಮತ್ತು ಚರ್ಮದ ಸೋಂಕುಗಳು:

ಅತಿಯಾದ ಶಾಖವು ಚರ್ಮದ ದದ್ದುಗಳು ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಹೆಚ್ಚಿನ ಯೂರಿಯಾ ಮಟ್ಟದಿಂದಾಗಿ ಡಯಾಲಿಸಿಸ್ ರೋಗಿಗಳಲ್ಲಿ ಹೆಚ್ಚಾಗಿ ತುರಿಕೆ ಕಾಣಿಸಿಕೊಳ್ಳುತ್ತದೆ. ಚರ್ಮದ ಮೇಲೆ ಗೀರು ಹಾಕುವುದರಿಂದ ಗಾಯಗಳು ಉಂಟಾಗಬಹುದು. ಇದು ನಂತರ ಗಂಭೀರ ಬ್ಯಾಕ್ಟೀರಿಯಾದ ಸೋಂಕಾಗಿ ಬೆಳೆಯಬಹುದು . ಇದನ್ನು ನಿಭಾಯಿಸಲು, ಮೊದಲು ಅರ್ಹ ವೈದ್ಯರನ್ನು ಸಂಪರ್ಕಿಸಬೇಕು. ಮನೆಮದ್ದುಗಳನ್ನು ಪ್ರಯತ್ನಿಸುವುದಾದರೆ ಬೇವಿನ ನೀರಿನಿಂದ ಸ್ನಾನ ಮಾಡಿ ನಿಮ್ಮ ಚರ್ಮವನ್ನು ತೇವಾಂಶದಿಂದ ಇಡಬಹುದು.

4.ಮೂತ್ರನಾಳದ ಸೋಂಕು:

ಕಡಿಮೆ ನೀರು ಕುಡಿಯುವುದರಿಂದ ಅಥವಾ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಮೂತ್ರನಾಳದ ಸೋಂಕು ಉಂಟಾಗುವ ಅಪಾಯ ಹೆಚ್ಚಾಗುತ್ತದೆ. ಡಯಾಲಿಸಿಸ್ ರೋಗಿಗಳು ಮೊದಲೇ ಕಡಿಮೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದ್ದರಿಂದ ಸೋಂಕುಗಳು ವೇಗವಾಗಿ ಹರಡಬಹುದು. ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಜ್ವರ ಅಥವಾ ಬೆನ್ನು ನೋವು ಮುಂತಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಬೇಸಿಗೆಯಲ್ಲಿ ಕಾಡುವ ಕಣ್ಣಿನ ಅಲರ್ಜಿ, ಶುಷ್ಕತೆಯ ಲಕ್ಷಣಗಳು ಮತ್ತು ಪರಿಹಾರ ಮಾರ್ಗ ಇಲ್ಲಿದೆ
ಬೇಸಿಗೆಯಲ್ಲಿ ಕಾಡುವ ಕಣ್ಣಿನ ಅಲರ್ಜಿ, ಶುಷ್ಕತೆಯ ಲಕ್ಷಣಗಳು ಮತ್ತು ಪರಿಹಾರ ಮಾರ್ಗ ಇಲ್ಲಿದೆ

ಸೋಂಕು ಬರದಂತೆ ಏನು ಮಾಡಬೇಕು ಮತ್ತು ಏನು ಮಾಡಬಾರದು?:

* ಡಯಾಲಿಸಿಸ್ ಪ್ರವೇಶವನ್ನು ಯಾವಾಗಲೂ ಒಣಗಿಸಿ ಮತ್ತು ಸ್ವಚ್ಛವಾಗಿಡಿ.
* ಒದ್ದೆಯಾದ ಕೈಗಳಿಂದ ಅಥವಾ ಕೊಳಕು ಬಟ್ಟೆಗಳಿಂದ ಫಿಸ್ಟುಲಾ ಅಥವಾ ಕ್ಯಾತಿಟರ್ ಸ್ಥಳವನ್ನು ಮುಟ್ಟಬೇಡಿ.
* ಬೆವರಿನಿಂದ ಒದ್ದೆಯಾದ ಬ್ಯಾಂಡೇಜ್‌ಗಳನ್ನು ತಕ್ಷಣ ಬದಲಾಯಿಸಿ.
* ತುರಿಕೆ ಉಂಟಾದರೆ, ಆ ಪ್ರದೇಶವನ್ನು ನಿಮ್ಮ ಉಗುರುಗಳಿಂದ ಸ್ಕ್ರಾಚ್ ಮಾಡಬೇಡಿ.
* ಕುದಿಸಿದ ಅಥವಾ ಫಿಲ್ಟರ್ ಮಾಡಿದ ಶುದ್ಧ ನೀರನ್ನು ಮಾತ್ರ ಕುಡಿಯಿರಿ.
* ದಿನವಿಡೀ ಮಧ್ಯಂತರದಲ್ಲಿ ನೀರು ಕುಡಿಯುತ್ತಾ ಇರಿ. ಬಾಯಾರಿಕೆ ಆದಾಗ ಒಮ್ಮೆಲೇ ಹೆಚ್ಚು ನೀರು ಕುಡಿಯಬೇಡಿ.
* ಬೆವರುವಿಕೆಯನ್ನು ಕಡಿಮೆ ಮಾಡಲು ಸಡಿಲವಾದ, ಹತ್ತಿ ಮತ್ತು ಆರಾಮದಾಯಕ ಬಟ್ಟೆಗಳನ್ನು ಧರಿಸಿ.
* ವೈದ್ಯರನ್ನು ಸಂಪರ್ಕಿಸದೆ ಡಯಾಲಿಸಿಸ್ ಸೈಟ್‌ನಲ್ಲಿ ಯಾವುದೇ ರೀತಿಯ ಲೋಷನ್ ಅಥವಾ ಪೌಡರ್ ಅನ್ನು ಹಚ್ಚಬೇಡಿ.
* ಜ್ವರ ಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸೋಂಕಿನ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

* ರೋಗಿಯಲ್ಲಿ ಈ ಕೆಳಗಿನ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.
* ತೀವ್ರ ಜ್ವರ ಅಥವಾ ನಡುಕ ಇದ್ದಾಗ ವೈದ್ಯರನ್ನು ಕಾಣಬೇಕು.
* ಡಯಾಲಿಸಿಸ್ ಜಾಗದಲ್ಲಿ ಕೀವು ಬರುತ್ತಿದ್ದರೆ
* ಹಠಾತ್ ತೂಕ ಹೆಚ್ಚಾಗುವುದು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ
* ರಕ್ತದೊತ್ತಡದಲ್ಲಿ ಏರುಪೇರಾದಾಗ ಆಸ್ಪತ್ರೆಗೆ ಹೋಗಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+