Ragi Ambali : ಬೇಸಿಗೆಗೆ ತಂಪು, ಆರೋಗ್ಯಕ್ಕೆ ಶಕ್ತಿ ರಾಗಿ ಅಂಬಲಿ: ಕುಡಿದವರಿಗೆ ತಟ್ಟಲ್ಲ ಬೇಸಿಗೆಯ ಬಿಸಿ
ಬೇಸಿಗೆಕಾಲ ಇನ್ನೇನು ಶುರುವಾಗುತ್ತಿದೆ. ಅದಾಗಲೇ ಎಲ್ಲೆಡೆ ಬಿಸಿಲ ಬಿಸಿ ಹೆಚ್ಚಾಗುತ್ತಿದೆ. ಬೇಸಿಗೆ ಬಿಸಿಲಿಗೆ ನಿಮ್ಮನ್ನು ನೀವು ತಂಪಾಗಿಡಲು ಶೇಖರಿಸಿದ ತಂಪು ಪಾನೀಯಗಳ ಮೊರೆ ಹೋಗಬೇಡಿ. ಬದಲಿಗೆ ಮನೆಯಲ್ಲಿ ತಯಾರಿಸಿದ ಮಜ್ಜಿಗೆ, ಲಿಂಬೆ ಅಥವಾ ಹಣ್ಣಿನ ಜ್ಯೂಸ್ ಹಾಗೂ ರಾಗಿ ಅಂಬಲಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇದು ನಿಮ್ಮ ದೇಹವನ್ನು ತಂಪಾಗಿಡುವುದು ಮಾತ್ರವಲ್ಲದೆ ಆರೋಗ್ಯವನ್ನು ಕಾಪಾಡುತ್ತದೆ.
ಹೌದು.... ಬೇಸಿಗೆಕಾಲ ಆರಂಭವಾದರೆ ಸಾಕು ಐಸ್‌ಕ್ರೀಮ್, ಕೂಲ್ ಡ್ರಿಂಕ್ಸ್‌ಗಳಿಗೆ ಬೇಡಿಕೆ ಅಧಿಕವಾಗುತ್ತದೆ. ಆದರೆ ಅಂಗಡಿಯಲ್ಲಿ ಶೇಖರಿಸಿದ ತಂಪು ಪಾನೀಯಗಳು ಬೇಸಿಗೆ ಬಿಸಿಲಿನಿಂದ ನಿಮಗೆ ತಂಪಾದ ಅನುಭವ ನೀಡಬಹುದು. ಆದರೆ ಆರೋಗ್ಯ ದೃಷ್ಟಿಯಿಂದ ಇವು ನೀವು ಮನೆಯಲ್ಲಿ ಸಿದ್ಧಪಡಿಸಿದ ಪಾನೀಯಗಳಿಗೆ ಸರಿದೂಗುವುದಿಲ್ಲ. ಜೊತೆಗೆ ಇವುಗಳಿಗೆ ನೀಡಬೇಕಾದ ಹಣದ ಕಾಲು ಭಾಗ ಖರ್ಚು ಮಾಡಿದರೆ ಸಾಕು ನೀವು ಮನೆ ಮಂದಿಗೆಲ್ಲಾ ತಂಪು ಪಾನೀಯಗಳನ್ನು ಸಿದ್ಧಪಡಿಸಿಕೊಳ್ಳಬಹುದು.

ಹಾಗಾದರೆ ಮನೆಯಲ್ಲಿ ರಾಗಿ ಅಂಬಲಿ, ಮಜ್ಜಿಗೆ, ನಿಂಬೆ ಅಥವಾ ಇನ್ನಿತರ ಹಣ್ಣಿನ ಜ್ಯೋಸ್ ತಯಾರಿಸುವುದು ಹೇಗೆ..? ಇದರಲ್ಲಿ ಯಾವುದನ್ನು ನಿಮ್ಮೊಂದಿಗೆ ಕೊಂಡೊಯ್ಯಬಹುದು..? ಯಾವುದನ್ನು ಹೆಚ್ಚುಕಾಲ ಕೆಡದಂತೆ ನೋಡಿಕೊಳ್ಳಬಹುದು? ಎಲ್ಲವನ್ನೂ ನೋಡೋಣ. ಮೊದಲಿ ಬೇಸಿಗೆ ಕಾಲದಲ್ಲಿ ರಾಗಿ ಅಂಬಲಿ ತಯಾರಿಸುವ ವಿಧಾನ ಹೇಗೆ ಎಂದು ತಿಳಿಯೋಣ.
ರಾಗಿ ಅಂಬಲಿ ಮಾಡಲು ಬೇಕಾಗುವ ಪದಾರ್ಥಗಳು:-
* ರಾಗಿ ಒಂದು ಕಪ್
* ಈರುಳ್ಳಿ ಒಂದು
* ಹಸಿ ಮೆಣಸಿನಕಾಯಿ ಒಂದು
* ಕೊತ್ತೊಂಬರಿ ಸೊಪ್ಪು ಸ್ವಲ್ಪ
* ಉಪ್ಪು ರುಚಿಗೆ
* ಜೀರಿಗೆ
*ಮೊಸರು ಒಂದು ಟೀ ಗ್ಲಾಸ್
* ಬೆಳ್ಳುಳ್ಳಿ ಒಂದು ಎಸಳು

ತಯಾರಿಸುವ ವಿಧಾನ:-
* ರಾಗಿ ಹಿಟ್ಟನ್ನು ಒಂದು ಪಾತ್ರೆಗೆ ಸ್ವಲ್ಪ ಸ್ವಲ್ಪ ಹಾಕಿ ಇದಕ್ಕೆ ನೀರು ಬೆರೆಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿಕೊಳ್ಳಿ. ಗಂಟಿರದಂತೆ ಚೆನ್ನಾಗಿ ಕಲಸಿ.
* ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಎರಡು ಕಪ್ ನೀರು ಹಾಕಿ ಸ್ವಲ್ಪ ಉಪ್ಪು, ಜಜ್ಜಿದ ಬೆಳ್ಳುಳ್ಳಿ ಹಾಕಿ ಕುದಿಯಲು ಬಿಡಿ
* ನೀರು ಕುದಿಯುವಾಗ ಕಲಸಿದ ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಲೇ ಇರಿ.
* ಇದು ತಳಹಿಡಿಯದಂತೆ ಆಗಾಗಾ ಕದಡುತ್ತಲೇ ಇರಬೇಕು.
* ಇದಕ್ಕೆ ಸ್ವಲ್ಪ ಜೀರಿಗೆ ಹಾಕಿ, ಸ್ವಲ್ಪ ಗಟ್ಟಿಯಾಗುವವರೆಗೂ ಕುದಿಸಿ
* ಇದು ಗಟ್ಟಿಯಾಗಿ ಬೆರಳುಗಳ ಮಧ್ಯೆ ಇಟ್ಟಾಗ ಅಂಟಬೇಕು. ಹೀಗಾದಮೇಲೆ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
* ಇದು ತಣ್ಣಗಾದ ಮೇಲೆ ಇದಕ್ಕೆ ಸಣ್ಣಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೊಸರು ಹಾಗೂ ಉಪ್ಪು ಹಾಕಿ ಕಲಸಿ ಕುಡಿಯಿರಿ
ಬೇಸಿಗೆಕಾಲಕ್ಕೆ ಇದು ದೇಹವನ್ನು ತಂಪಾಗಿರಿಸುತ್ತದೆ. ಜೊತೆಗೆ ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದನ್ನು ನಿಮ್ಮೊಂದಿಗೆ ಕೊಂಡೊಯ್ಯಬಹುದು. ನಿಮಗೆ ಬೇಕಾದಷ್ಟು ಇದಕ್ಕೆ ನೀರು ಬೆರೆಸಿ ಕುಡಿಯಬಹುದು.
ಮಜ್ಜಿಗೆ ಬೇಕಾಗುವ ಪದಾರ್ಥಗಳು:
*ಮೊಸರು ಒಂದು ಕಪ್
* ಜೀರಿಗೆ
*ಹಸಿ ಮೆಣಸಿನಕಾಯಿ
*ಉಪ್ಪು
ತಯಾರಿಸುವ ವಿಧಾನ:
*ಒಂದು ಕಪ್ ಮೊಸರನ್ನು ಚೆನ್ನಾಗಿ ಮಿಕ್ಸ್ ಮಾಡಿ ನೀರಿನಲ್ಲಿ ಕರಗಿಸಿ
*ಇದಕ್ಕೆ ಉಪ್ಪು, ಕುಟ್ಟಿ ಪುಡಿ ಮಾಡಿದ ಜೀರಿಗೆ, ಜಜ್ಜಿದ ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ.
* ರುಚಿ ರುಚಿಯಾದ ಮಜ್ಜಿಗೆ ಕುಡಿಯಲು ರೆಡಿ. ಇದು ಅಂಗಡಿಯಲ್ಲಿ ಕೊಂಡು ಕುಡಿಯುವ ಮಜ್ಜಿಗೆಯಂತೇ ಇರುತ್ತದೆ.
ಹಣ್ಣಿನ ಜ್ಯೂಸ್ ತಯಾರಿಕೆ:-
ಹಣ್ಣಿ ಜ್ಯೂಸ ತಯಾರಿಸಲು ಹೆಚ್ಚು ಶ್ರಮಿಸಬೇಕಾಗಿಲ್ಲ. ನೀವು ಇಷ್ಟ ಪಡುವ ಹಣ್ಣನ್ನು ಮಿಕ್ಸಿ ಜಾರ್‌ಗೆ ಹಾಕಿ ಅದಕ್ಕೆ ನೀರು ಹಾಕಿ ಸಕ್ಕರೆ ಹಾಕಿದರೆ ನಿಮಗಿಷ್ಟವಾಗುವ ಹಣ್ಣಿನ ಜ್ಯೂಸ್ ರೆಡಿಯಾಗುತ್ತದೆ.












Click it and Unblock the Notifications