ಇನ್ಸುಲಿನ್ ಕೆಲಸ ಮಾಡೋದ್ಹೇಗೆ? ರಕ್ತದ ಸಕ್ಕರೆ ನಿಯಂತ್ರಿಸುವ ಹಾರ್ಮೋನ್ ಬಗ್ಗೆ ಗೊತ್ತಿರಲಿ
ಶ್ರಾವಣ ಮಾಸ ಬಂತು ಅಂದ್ರೆ ಸಾಕು, ಸಾಲು ಸಾಲು ಹಬ್ಬಗಳು ಬಂದವು ಎಂದೇ ಅರ್ಥ. ಈ ಹಬ್ಬದ ಸಮಯದಲ್ಲಿ ಭಾರತದ ಪ್ರತಿಯೊಂದೂ ಮನೆಯಲ್ಲಿಯೂ ನಾಗ ಪಂಚಮಿಯಲ್ಲಿ ಮಾಡುವ ಎಳ್ಳಂಡೆ, ತಂಬಿಟ್ಟಿನಿಂದ ಹಿಡಿದು, ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿಯ ಕರಿಗಡುಬಿನವರೆಗೂ - ಎಲ್ಲರಿಗಿಂತ ಹೆಚ್ಚು ಕೆಲಸ ಮಾಡೋ ಒಬ್ಬ "ಅದೃಶ್ಯ ನಾಯಕ"ನಿದ್ದಾನೆ. ಅವನೊಬ್ಬ ಕರೆಯದೇ ಬರೋ ಅತಿಥಿ. ಆದರೆ, ಅವನು ಏನಾದ್ರೂ ಎಡವಟ್ಟು ಮಾಡಿದರೆ ನಮ್ಮ ಆರೋಗ್ಯದ ಮೇಲೆ ಬೀರೋ ಪರಿಣಾಮ ಒಂದೆರಡಲ್ಲ.

ನೀವು ತಿನ್ನುವ ಪ್ರತಿಯೊಂದೂ ಗುಲಾಬ್ ಜಾಮೂನು, ಕಾಜು ಕಟ್ಲಿ ಅಥವಾ ಲಡ್ಡುವನ್ನು ದೇಹ ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸುವುದು ಇನ್ಸುಲಿನ್. ಅದು ಆಹಾರವನ್ನು ಶಕ್ತಿಯಾಗಿ ಬಳಸಬೇಕೇ, ನಂತರದ ಅಗತ್ಯಕ್ಕಾಗಿ ಸಂಗ್ರಹಿಸಬೇಕೇ ಅಥವಾ ರಕ್ತದಲ್ಲೇ ಉಳಿದು ಆರೋಗ್ಯ ಸಮಸ್ಯೆಗೆ ಕಾರಣವಾಗಬೇಕೇ ಎಂಬುದನ್ನು ಇನ್ಸುಲಿನ್ ನಿರ್ಧರಿಸುತ್ತದೆ.
ಭಾರತದ ಹಬ್ಬಗಳೆಂದರೆ ಸಿಹಿತಿಂಡಿಗಳು ಮತ್ತು ರುಚಿ ರುಚಿಯಾದ ಆಹಾರಗಳ ಸಂಭ್ರಮ, ಸಡಗರ. ಇಂಥ ಟೈಮಲ್ಲಿ ಇನ್ಸುಲಿನ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದು ಭಾರತದಲ್ಲಿ 10.1 ಕೋಟಿಗೂ ಹೆಚ್ಚು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇದಕ್ಕೆ ಇನ್ಸುಲಿನ್ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
'ಗ್ಯಾನ್ ಬೈ ಗಣೇಶ್ - ಮೇಕಿಂಗ್ ಇಂಡಿಯಾ ವಿನ್ ಓವರ್ ಡಯಾಬಿಟೀಸ್' ಎಂಬುದು ಸನ್ ಫಾರ್ಮಾ ಸಂಸ್ಥೆಯು ಅಮೆರಿಕನ್ ಡಯಾಬಿಟೀಸ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಸುತ್ತಿರುವ ಜಾಗೃತಿ ಅಭಿಯಾನ. ತಜ್ಞರ ಮಾಹಿತಿಯ ಮೂಲಕ ಭಾರತೀಯರು ಮಧುಮೇಹವನ್ನು ಅರ್ಥಮಾಡಿಕೊಳ್ಳಲು, ತಡೆಗಟ್ಟಲು ಮತ್ತು ಸಮರ್ಥವಾಗಿ ನಿಯಂತ್ರಿಸಲು ನೆರವಾಗುವುದು ಈ ಅಭಿಯಾನದ ಉದ್ದೇಶ.
ದೇಹದ ಜೀವಕೋಶದ ಬಾಗಿಲು ತೆರೆಯೋ "ಕೀಲಿ ಕೈ" Insulin
ಇನ್ಸುಲಿನ್ ಎನ್ನುವುದು ಮೇದೋಜೀರಕ ಗ್ರಂಥಿ (Pancrease)ಯಲ್ಲಿರುವ ಬೀಟಾ ಜೀವಕೋಶಗಳು ಉತ್ಪಾದಿಸುವ ಒಂದು ಹಾರ್ಮೋನ್. ಇದು ಮಾಡೋ ಕೆಲಸ ಸಿಂಪಲ್ ಅಂತೆನಿಸಿದರೂ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಒಂದು "ಕೀಲಿ ಕೈ"ಗೆ ಹೋಲಿಸಬಹುದು. ಇದು ರಕ್ತದಲ್ಲಿರುವ ಗ್ಲೂಕೋಸ್ (ಸಕ್ಕರೆ) ಅನ್ನು ದೇಹದ ಜೀವಕೋಶಗಳೊಳಗೆ ಪ್ರವೇಶಿಸುವಂತೆ ಮಾಡುತ್ತದೆ. ಅಲ್ಲಿಯೇ ಅದು ದೇಹಕ್ಕೆ ಬೇಕಾದ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.
ಹಬ್ಬದ ಊಟ ಮಾಡಿದ ನಂತರ ದೇಹದಲ್ಲಿ ಆಗೋದೇನು?
ನಾವು ತಿನ್ನುವ ಅನ್ನ, ಸಿಹಿ ತಿಂಡಿ, ಕರಿದ ತಿಂಡಿಗಳು ಮುಂತಾದ ಕಾರ್ಬೋಹೈಡ್ರೇಟ್‌ಗಳು ಜೀರ್ಣವಾಗಿ ಗ್ಲೂಕೋಸ್ ಆಗಿ ಪರಿವರ್ತನೆಗೊಳ್ಳುತ್ತವೆ. ಈ ಗ್ಲೂಕೋಸ್ ರಕ್ತಕ್ಕೆ ಸೇರಿ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಈ ಮಾರ್ಪಾಟನ್ನು ಪ್ಯಾನ್‌ಕ್ರಿಯಾಸ್ ತಕ್ಷಣವೇ ಗುರುತಿಸಿ ಇನ್ಸುಲಿನ್‌ನನ್ನು ಬಿಡುಗಡೆ ಮಾಡುತ್ತದೆ. ನಂತರ ಇನ್ಸುಲಿನ್ ರಕ್ತದ ಮೂಲಕ ಸ್ನಾಯುಗಳು, ಕೊಬ್ಬಿನ ಜೀವಕೋಶಗಳು ಮತ್ತು ಯಕೃತ್ತಿನ (ಲಿವರ್) ಜೀವಕೋಶಗಳಿಗೆ ತಲುಪುತ್ತದೆ. ಅಲ್ಲಿನ ಗ್ರಾಹಕಗಳೊಂದಿಗೆ (ರಿಸೆಪ್ಟರ್‌ಗಳು) ಸೇರಿ ಬಾಗಿಲು ತೆಗೆಯುವಂತೆ ಸಂದೇಶ ರವಾನಿಸುತ್ತದೆ. ಆಗ ಜೀವಕೋಶಗಳು ರಕ್ತದ ಗ್ಲೂಕೋಸ್ ಅನ್ನು ಒಳಗೆಳೆದುಕೊಳ್ಳುತ್ತವೆ.
ಅದರ ಒಂದು ಭಾಗವನ್ನು ಸ್ನಾಯುಗಳು ತಕ್ಷಣವೇ ಶಕ್ತಿಯಾಗಿ ಬಳಸಿಕೊಂಡರೆ, ಯಕೃತ್ತು ಉಳಿದ ಭಾಗವನ್ನು ಗ್ಲೈಕೋಜನ್ ರೂಪದಲ್ಲಿ ಸಂಗ್ರಹಿಸಿ, ಅಗತ್ಯವಿದ್ದಾಗ ಮತ್ತೆ ಶಕ್ತಿಯಾಗಿ ಬಳಸುತ್ತದೆ. ಇನ್ನೂ ಹೆಚ್ಚಾಗಿ ಉಳಿಯುವ ಗ್ಲೂಕೋಸ್ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ.
ಈ ಪ್ರಕ್ರಿಯೆ ನಡೆಯದಿದ್ದರೆ ಏನಾಗುತ್ತದೆ?
ಇನ್ಸುಲಿನ್ ಎಂಬ "ಕೀಲಿ ಕೈ" ತನ್ನ ಕೆಲಸ ಮಾಡದಿದ್ದರೆ, ಗ್ಲೂಕೋಸ್ ಜೀವಕೋಶಗಳೊಳಗೆ ಪ್ರವೇಶಿಸುವುದೇ ಇಲ್ಲ. ಪರಿಣಾಮವಾಗಿ ಅದು ರಕ್ತದಲ್ಲೇ ಉಳಿದುಕೊಂಡು, ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಸಾಮಾನ್ಯ ದಿನಗಳಲ್ಲಿ ಈ ವ್ಯವಸ್ಥೆ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಹಬ್ಬದ ದಿನಗಳಲ್ಲಿ ಮಿತಿ ಮೀರಿ ತಿನ್ನುವ ಸಿಹಿಯಿಂದ ಪರಿಸ್ಥಿತಿ ಬದಲಾಗಬಹುದು.
Applied Physiology, Nutrition, and Metabolism ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಆರೋಗ್ಯವಂತ ವಯಸ್ಕರು ಕೇವಲ ಎರಡು ವಾರಗಳ ಕಾಲ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಿದರೂ, ಅವರ ದೇಹದ ಇನ್ಸುಲಿನ್ ಸಂವೇದನಾಶೀಲತೆ (Insulin Sensitivity) ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅಂದರೆ, ದೇಹ ತನ್ನದೇ ಇನ್ಸುಲಿನ್‌ಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವೇ ಕುಂಠಿತವಾಗುತ್ತದೆ. ಈ ಬದಲಾವಣೆ ದೇಹದ ತೂಕ ಹೆಚ್ಚುವ ಮುನ್ನವೂ ಕಾಣಿಸಿಕೊಳ್ಳಬಹುದು. ಹೆಚ್ಚು ಕ್ಯಾಲೊರಿ ಮತ್ತು ಸಕ್ಕರೆಯುಕ್ತ ಆಹಾರ ಸೇವಿಸುವುದೇ ಇದಕ್ಕೆ ಮುಖ್ಯ ಕಾರಣ.
"ಪ್ರತಿ ಬಾರಿ ನೀವು ಹೆಚ್ಚು ಸಕ್ಕರೆ ಇರುವ ಆಹಾರ ಸೇವಿಸಿದಾಗ ರಕ್ತದ ಗ್ಲೂಕೋಸ್ ಮಟ್ಟ ಸಹಜ ಸ್ಥಿತಿಗೆ ಮರಳಲು ಪ್ಯಾನ್‌ಕ್ರಿಯಾಸ್ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ. ಹಬ್ಬ ಅಥವಾ ಇತರೆ ಶುಭ ಸಂದರ್ಭದಲ್ಲಿ ಪದೆ ಪದೇ ಸ್ವೀಟ್ಸ್ ತಿಂದರೆ ಇದೇ ಪರಿಸ್ಥಿತಿ ಮರುಕಳಿಸುತ್ತದೆ. ಕೆಲವೇ ದಿನಗಳಲ್ಲಿ ದೇಹದ ಇನ್ಸುಲಿನ್‌ಗೆ ಪ್ರತಿಕ್ರಿಯಿಸುವ ಸಾಮರ್ಥ್ಯವೇ ಕುಂಠಿತವಾಗಬಹುದು. ಇದು ಮತ್ತೆ ಸಹಜ ಸ್ಥಿತಿಗೆ ಬರಲು ತಿಂಗಳ ಕಾಲ ತೆಗೆದುಕೊಳ್ಳಬಹುದು, ಇಲ್ಲವೇ ಬಾರದಿರಬಹುದು."
Dr. Divya C. Ragate, Consultant - Adult and Pediatric Endocrinologist, Bengaluru

ಆರೋಗ್ಯಕರ ಮೇದೋಜಿಕ ಗ್ರಂಥಿ ಹೊಂದಿರುವ ವ್ಯಕ್ತಿಯಲ್ಲಿ ಈ ಬದಲಾವಣೆ ತಾತ್ಕಾಲಿಕ. ಆದರೆ ಈಗಾಗಲೇ ಪ್ರೀಡಯಾಬಿಟಿಸ್ ಅಥವಾ ಇನ್ಸುಲಿನ್ ಪ್ರತಿರೋಧ (Insulin Resistance) ಇರುವವರಲ್ಲಿ, ಹಬ್ಬದ ಸಮಯದಲ್ಲಿ ಪದೆ ಪದೇ ರಕ್ತದ ಸಕ್ಕರೆ ಮಟ್ಟ ಏರುಪೇರಾಗುವುದು ಮಧುಮೇಹದ ಅಪಾಯ ಹೆಚ್ಚಿಸುತ್ತದೆ.
ಕೀಲಿ ಕೈ ಹಾಳಾದಾಗ ಅಥವಾ ಬೀಗವೇ ಬದಲಾದರೆ?
ಮುಖ್ಯವಾಗಿ ಎರಡು ರೀತಿಯಲ್ಲಿ ಮಧುಮೇಹ ಉಂಟಾಗುತ್ತದೆ. ಎರಡರ ಕೇಂದ್ರದಲ್ಲೂ ಇನ್ಸುಲಿನ್ ಪ್ರಮುಖ ಪಾತ್ರ ವಹಿಸುತ್ತದೆ.
ಟೈಪ್-1 ಮಧುಮೇಹ: ದೇಹದ ರೋಗನಿರೋಧಕ ವ್ಯವಸ್ಥೆಯೇ ಇನ್ಸುಲಿನ್ ಉತ್ಪಾದಿಸುವ ಮೇದೋಜಿಕ ಗ್ರಂಥಿ ಬೀಟಾ ಜೀವಕೋಶಗಳನ್ನು ನಾಶಮಾಡುತ್ತದೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಅತಿ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ ಅಥವಾ ಸಂಪೂರ್ಣವಾಗಿ ನಿಲ್ಲುತ್ತದೆ. ಇನ್ಸುಲಿನ್ ಇಲ್ಲದಿದ್ದರೆ ಗ್ಲುಕೋಸ್ ಜೀವಕೋಶಗಳೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ರಕ್ತದ ಸಕ್ಕರೆ ಮಟ್ಟ ಮಿತಿಮೀರಿ ಹೆಚ್ಚುತ್ತದೆ.
ಟೈಪ್-2 ಮಧುಮೇಹ: ಇದು ಭಾರತದಲ್ಲಿ ಕಂಡುಬ ರುವ ಬಹುಪಾಲು ಮಧುಮೇಹದ ಪ್ರಕರಣಗಳಿಗೆ ಕಾರಣವಾಗಿರುವ ರೂಪ. ಈ ಸಂದರ್ಭದಲ್ಲಿ ಮೇದೋಜಿಕ ಗ್ರಂಥಿಯೂ ಇನ್ಸುಲಿನ್ ಅನ್ನು ಉತ್ಪಾದಿಸುತ್ತಲೇ ಇರುತ್ತದೆ. ಆದರೆ ದೇಹದ ಜೀವಕೋಶಗಳು ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆಸುವಲ್ಲಿ ವಿಫಲವಾಗುತ್ತದೆ. ಇದನ್ನು ಇನ್ಸುಲಿನ್ ಪ್ರತಿರೋಧ ಎನ್ನುತ್ತಾರೆ.
ಇದನ್ನು ಸರಿದೂಗಿಸಲು ಹೆಚ್ಚು ಇನ್ಸುಲಿನ್ ಉತ್ಪಾದಿಸಲು ಮೇದೋಜಿಕ ಗ್ರಂಥಿ ಹೆಚ್ಚು ಹೆಚ್ಚು ಶ್ರಮ ಹಾಕುತ್ತದೆ. ಆದರೆ ಒಂದು ಹಂತದಲ್ಲಿ ಅದರ ಸಾಮರ್ಥ್ಯ ಕುಗ್ಗಿ, ದೇಹದ ಅಗತ್ಯಕ್ಕೆ ತಕ್ಕಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ.
ಇನ್ಸುಲಿನ್ ಉತ್ಪಾದನೆ ಹೆಚ್ಚು ಕಡಿಮೆಯಾಗದಂತೆ ಏನು ಮಾಡಬೇಕು?
ಸಿಹಿ ತಿಂಡಿಗಳನ್ನು ಸಂಪೂರ್ಣವಾಗಿ ಬಿಡೋ ಅಗತ್ಯವೇನೂ ಇಲ್ಲ. ಆದರೆ, ಬೇಕಾಬಿಟ್ಟಿ ಹೊಟ್ಟೆ ಬಿರಿ ಅದನ್ನೇ ತಿನ್ನೋದನ್ನು ಅವೈಡ್ ಮಾಡಿ ಅಂತಾರೆ ತಜ್ಞರು. ಹಾಗೆಯೇ ಇನ್ಸುಲಿನ್ ಉತ್ಪಾದಿಸುವ ಮೇದೋಜಿಕ ಗ್ರಂಥಿ ಮೇಲೆ ಅನಗತ್ಯ ಒತ್ತಡ ಬೀಳದಂತೆ ಕೆಲವು ಸರಳ ಕ್ರಮಗಳನ್ನು ಅನುಸರಿಸಲು ಹೇಳುತ್ತಾರೆ.
- ಸ್ವೀಟ್ಸ್ ಅನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ, ಊಟದ ಜೊತೆ ಸೇವಿಸಿ. ಆಹಾರದಲ್ಲಿನ ಪ್ರೋಟೀನ್ ಮತ್ತು ನಾರಿನಾಂಶ (ಫೈಬರ್) ರಕ್ತದಲ್ಲಿ ಸಕ್ಕರೆ ಮಟ್ಟ ತೀವ್ರವಾಗಿ ಏರದಂತೆ ನೋಡಿಕೊಳ್ಳುತ್ತದೆ.
- ಭಾರೀ ಊಟದ ನಂತರ 15-20 ನಿಮಿಷ ನಡೆದರೆ, ಸ್ನಾಯುಗಳು ಹೆಚ್ಚುವರಿ ಇನ್ಸುಲಿನ್ ಅಗತ್ಯವಿಲ್ಲದೆಯೂ ಗ್ಲೂಕೋಸ್ ಅನ್ನು ಬಳಸಿಕೊಳ್ಳುತ್ತದೆ.
- ಹಬ್ಬದ ದಿನಗಳಲ್ಲಿಯೂ ಸಾಧ್ಯವಾದಷ್ಟು ನಿಯಮಿತ ಸಮಯಕ್ಕೆ ಊಟ ಮಾಡಿ.
- ಸಾಕಷ್ಟು ನೀರು ಕುಡಿಯಿರಿ. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ರಕ್ತದಲ್ಲಿನ ಸಕ್ಕರೆಯ ಸಾಂದ್ರತೆ ಹೆಚ್ಚಬಹುದು.
- ಸಮರ್ಪಕವಾಗಿ ನಿದ್ರಿಸಿ. ಕೇವಲ ಒಂದು ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೂ, ಮರುದಿನ ದೇಹದ ಇನ್ಸುಲಿನ್‌ಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ಕಡಿಮೆಯಾಗಬಹುದು.
ಕೊನೇ ಮಾತು
ಹಬ್ಬದ ಸಂಭ್ರಮದಂತೆ ಇನ್ಸುಲಿನ್ ತನ್ನ ಕೆಲಸವನ್ನು ಜಗಜ್ಜಾಹೀರಗೊಳಿಸುವುದಿಲ್ಲ. ಅದು ಮೌನವಾಗಿ, ಪ್ರತಿಯೊಂದೂ ಊಟದ ನಂತರವೂ ತನ್ನ ಕೆಲಸವನ್ನು ಸೈಲಂಟ್ ಆಗಿ ಮಾಡುತ್ತಿರುತ್ತದೆ. ನೀವು ಸೇವಿಸುವ ಸಕ್ಕರೆ ದೇಹಕ್ಕೆ ಶಕ್ತಿಯಾಗಬೇಕೋ ಅಥವಾ ಮುಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗಬೇಕೋ ಎಂಬುದನ್ನು ನಿರ್ಧರಿಸುತ್ತದೆ. ಬಹುತೇಕ ಜನರು ಸಮಸ್ಯೆ ಕಾಣಿಸಿಕೊಂಡ ನಂತರವೇ ಇನ್ಸುಲಿನ್ ಬಗ್ಗೆ ಯೋಚಿಸುತ್ತಾರೆ. ಆದರೆ ಲಡ್ಡು, ಸಿಹಿತಿಂಡಿಗಳು ನಮ್ಮ ದೇಹದ ಕೆಲಸದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಹಬ್ಬವನ್ನು ಯಾವುದೇ ಅಪಾಯವಿಲ್ಲದಂತೆ ಸಂಭ್ರಮಿಸಬಹುದು.
SPI-IN-CVD-ZT---08-20260331
Disclaimer: ಈ ಮಾಹಿತಿ ಕೇವಲ ರೋಗಿಗಳ ಶಿಕ್ಷಣ/ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯರ ಅಥವಾ ವೈದ್ಯಕೀಯ ವೃತ್ತಿಪರರ ಸಲಹೆಗೆ ಪರ್ಯಾಯವಲ್ಲ. ಸನ್ ಫಾರ್ಮಾಸಿಟಿಕಲ್ಸ್ ಲ್ಯಾಬೊರೇಟರೀಸ್ ಲಿಮಿಟೆಡ್ (SPLL) ನಿಖರ ಮತ್ತು ಸಮಯೋಚಿತ ಮಾಹಿತಿ ಒದಗಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತದೆ. ಆದರೆ ಈ ವಿಷಯದಲ್ಲಿ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ನೀವು ನಿಮ್ಮ ವೈದ್ಯರು ಅಥವಾ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಮಾತ್ರ ನಂಬಬೇಕು. ಸನ್ ಫಾರ್ಮಾಸಿಟಿಕಲ್ಸ್ ಲ್ಯಾಬೊರೇಟರೀಸ್ ಲಿಮಿಟೆಡ್ (SPLL) ಪೂರ್ವ ಅನುಮತಿಯಿಲ್ಲದೆ ಇದರ ಯಾವುದೇ ಭಾಗವನ್ನು ಯಾಂತ್ರಿಕವಾಗಿ ಅಥವಾ ಎಲೆಕ್ಟ್ರಾನಿಕ್ ಆಗಿ ಪುನರುತ್ಪಾದಿಸಲು, ರವಾನಿಸಲು ಅಥವಾ ಸಂಗ್ರಹಿಸಲು ಅವಕಾಶ ಇರುವುದಿಲ್ಲ.


Click it and Unblock the Notifications
