Gari Gari Gobi Manchuri Recipe: ಗರಿ ಗರಿ ಗೋಬಿ ಮಂಚೂರಿ: ಬಣ್ಣ ಹಾಕದೆ ಮಾಡಿ ಕರುಂ ಕುರುಂ ಅಂತ ತಿನ್ನಿ
ಗೋಬಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಂಜೆ ಆದರೆ ಸಾಕು ಇದೊಂದು ಖಾದ್ಯ ನೆನಪಿಗೆ ಬಾರದೇ ಇರದು. ಆದರೆ ಇದನ್ನು ಹೊರಗಡೆ ಕೊಂಡು ತಿನ್ನುವುದಕ್ಕಿಂತ ಮನೆಯಲ್ಲಿ ತಯಾರಿಸಿ ತಿಂದರೆ ಸಖತ್ ಟೇಸ್ಟಿ ಇರುತ್ತೆ. ಅಷ್ಟೇ ಅಲ್ಲ ಗರಿಗರಿಯಾಗಿ ಕೂಡ ಮಾಡಬಹುದು.
ಗೋಬಿಯನ್ನು ಹೂಕೋಸಿನಿಂದ ಮಾಡಲಾಗುತ್ತದೆ. ಕೆಲವೊಮ್ಮೆ ಇದು ಮೆತ್ತಗಾಗುತ್ತದೆ. ಇದು ಕೆಲವರಿಗೆ ಇಷ್ಟವಾಗುವುದಿಲ್ಲ. ಜೊತೆಗೆ ಇದರಲ್ಲಿ ಹಾಕುವ ಬಣ್ಣ ಕೂಡ ಸೇವಿಸಲು ಯೋಗ್ಯವಲ್ಲ ಎಂದು ಹೇಳಲಾಗುತ್ತದೆ. ಆದರೆ ಗೋಬಿಯನ್ನು ತಯಾರಿಸುವಾಗ ಕೆಲ ಟಿಪ್ಸ್ ಅನುಸರಿಸುವುದರಿಂದಬಣ್ಣ ಹಾಕದೆ ಗರಿಗರಿಯಾಗಿ ಗೋಬಿಯನ್ನು ತಯಾರಿಸಬಹುದು. ಇದನ್ನು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಜನ ಇಷ್ಟಪಟ್ಟು ತಿಂತಾರೆ.

ಹಾಗಾದರೆ ತಡ ಮಾಡುವುದು ಬೇಡ ರುಚಿಯಾಗಿ ಶುಚಿಯಾಗಿ ಗರಿಗರಿಯಾಗಿ ಗೋಬಿ ತಯಾರಿಸುವುದು ಹೇಗೆ ಅನ್ನೋದನ್ನು ನೋಡೋಣ. ನೀವು ಕೂಡ ಮನೆಯಲ್ಲಿ ಒಂದು ಬಾರಿ ಇದನ್ನು ಟ್ರೈ ಮಾಡಿ ಟೇಸ್ಟ್ ಮಾಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಗರಿಗರಿ ಗೋಬಿ ತಯಾರಿಸುವ ವಿಧಾನ:
* ಹೂಕೋಸು ಒಂದು ಬಟ್ಟಲು
* ಕಾರ್ನ್ ಫ್ಲೋರ್ ಅರ್ಧ ಬಟ್ಟಲು
* ದಪ್ಪ ಮೆಣಸಿನಕಾಯಿ ಒಂದು (ಉದ್ದ ಹೆಚ್ಚಿದ)
* ಈರುಳ್ಳಿ ಎರಡು (ಉದ್ದ ಹೆಚ್ಚಿದ)
* ಟೊಮೆಟೊ ಮೂರು(ರುಬ್ಬಿದ)
* ಖಾರದ ಪುಡಿ 1 tbs
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ
*ಕೊತ್ತಂಬರಿ ಸೊಪ್ಪು
* ಕಾಳುಮೆಣಸಿನ ಪುಡಿ
ತಯಾರಿಸುವ ವಿಧಾನ:
* ಮೊದಲು ಹೋಕೋಸನ್ನು ಗೋಲಿ ಗಾತ್ರದಲ್ಲಿ ಬಿಡಿಸಿಕೊಂಡು ಚೆನ್ನಾಗಿ ತೊಳೆದು ಎರಡು ನಿಮಿಷ ಬಿಸಿ ನೀರಿನಲ್ಲಿ ಹಾಕಿ ಕುದಿಸಿ.
* ನಂತರ ಇದನ್ನು ಒಂದು ದೊಡ್ಡ ಪಾತ್ರೆಯಲ್ಲಿ ತೆಗೆದು ಅರ್ಧ ಗಂಟೆ ಒಣಗಲು ಬಿಡಿ
* ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು

* ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್ ಹಾಕಿಕೊಂಡು ಇದಕ್ಕೆ ಉಪ್ಪು, ಖಾರದ ಪುಡಿ ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಿಸಿಕೊಳ್ಳಿ. ಹಿಟ್ಟು ತುಂಬಾ ತೆಳ್ಳಗೆ ಆಗುವುದು ಬೇಡ, ತುಂಬಾ ಗಟ್ಟಿ ಆಗುವುದು ಬೇಡ.
* ಬಳಿಕ ಹೂಕೋಸನ್ನು ಇದರಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ಕಡಿಮೆ ಉರಿಯಲ್ಲಿ ಡೀಪ್ ಫ್ರೈ ಮಾಡಿ. ಎಣ್ಣೆಯನ್ನು ಹೆಚ್ಚು ಬಿಸಿ ಮಾಡಬೇಡಿ. ಹುರಿದ ಗೋಬಿಯನ್ನು ಒಂದು ಪಾತ್ರೆಯಲ್ಲಿ ಸಂಪೂರ್ಣವಾಗಿ ಆರಲು ಬಿಡಿ. ಆಗ ಇದು ಗರಿಗರಿಯಾಗುತ್ತದೆ.
* ಬಳಿಕ ಪ್ರತ್ಯೇಕ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಬಿಸಿ ಆದ ಬಳಿಕ ಇದಕ್ಕೆ ಟೊಮೆಟೋವನ್ನು ಹಾಕಿ ಚೆನ್ನಾಗಿ ಬಾಡಿಸಿ. ಇದು ಪೇಸ್ಟ್ ಆಗುವವರೆಗೂ ಅಂದರೆ ಟೊಮೆಟೊ ಮೇಲೆ ಎಣ್ಣೆ ತೇಲುವವರೆಗೂ ಟೊಮೆಟೊವನ್ನು ಹುರಿಯಿರಿ.
* ಬಳಿಕ ಇದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ಬಳಿಕ ದಪ್ಪ ಮೆಣಸಿನಕಾಯಿ ಹಾಕಿ ಸ್ವಲ್ಪ ಮಾತ್ರ ಬಾಡಿಸಿ.
* ಬಳಿಕ ಇದಕ್ಕೆ ಉಪ್ಪು, ಖಾರದ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ. ಗ್ಯಾಸ್ ಆಫ್ ಮಾಡಿದ ನಂತರ ಗೋಬಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಗರಿಗರಿಯಾದ ಗೋಬಿ ಮಂಚೂರಿ ರೆಡಿ.












Click it and Unblock the Notifications