Healthy Diwali Sweets: ದೀಪಾವಳಿಗೆ ಆರೋಗ್ಯಕರ ಈ ಸಿಹಿ ತಿನಿಸುಗಳನ್ನು ಮನೆಯಲ್ಲೇ ಮಾಡಿ...
ದೀಪಾವಳಿ ಅಂದರೆ ದೀಪಗಳ ಹೊರತಾಗಿ ಪಟಾಕಿ ಹಾಗೂ ಸಿಹಿತಿನಿಸುಗಳು ನೆನಪಿಗೆ ಬರುತ್ತವೆ. ಈ ಬಾರಿ ಬಗೆ ಬಗೆಯ ಸಿಹಿ ತಿನಿಸುಗಳನ್ನು ಮನೆಯಲ್ಲಿ ತಯಾರಿಸಲು ಹಲವಾರು ಮಹಿಳೆಯರು ಯೋಚನೆ ಮಾಡಿರುತ್ತಾರೆ. ಕೆಲವರು ಇದನ್ನು ಪ್ರಾರಂಭ ಕೂಡ ಮಾಡಿರಬಹುದು.
ಇತ್ತೀಚೆಗೆ ಮನೆಯಲ್ಲಿ ಹಬ್ಬದ ಸಿಹಿತಿನಿಸುಗಳನ್ನು ತಯಾರಿಸುವುದಕ್ಕಿಂತ ಕೊಂಡು ತರುವುದು ಹೆಚ್ಚಾಗಿ ರೂಢಿಯಾಗುತ್ತಿದೆ. ಆದರೆ ಮನೆಯಲ್ಲಿ ಮಾಡಿ ತಿನ್ನುವ ಸಿಹಿತಿನಿಸುಗಳ ರುಚಿ ಮಾತ್ರವಲ್ಲದೆ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಯಾಕೆಂದರೆ ಮನೆಯಲ್ಲಿ ಯಾವುದೇ ಹಾನಿಕಾರಕವಲ್ಲದ ಪದಾರ್ಥಗಳನ್ನು ಬಳಕೆ ಮಾಡಿ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ಆಗ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ತಿನ್ನಬಹುದು. ಮಧುಮೇಹಿಗಳು ಸಹ ಇದನ್ನು ಮಿತವಾಗಿ ಸೇವಿಸಬಹುದು.

ಅಂದಹಾಗೆ ಭಾರತದ ಅತ್ಯಂತ ಜನಪ್ರಿಯ ಹಬ್ಬವಾದ ದೀಪಾವಳಿ ಕೆಲವೇ ದಿನಗಳಲ್ಲಿ ಬರಲಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನು ಪ್ರೀತಿ ಬೆರೆಸಿ ಮತ್ತು ಆರೋಗ್ಯಕರ ಪದಾರ್ಥಗಳಿಂದ ಮಾಡಲಾಗಿರುತ್ತದೆ. ಈ ಸಿಹಿತಿಂಡಿಗಳನ್ನು ಮನಸ್ಸು ಬಯಸುವಷ್ಟು ಯಾವುದೇ ಭಯವಿಲ್ಲದೆ ಸೇವಿಸಬಹುದು.
ಹಾಗಂತ ಮನೆಯಲ್ಲಿ ಇದನ್ನು ತಯಾರಿಸುವುದು ಸುಲಭವಲ್ಲ. ಇದೊಂದು ಕಠಿಣ ಕೆಲಸವೇ ಸರಿ. ಆದರೆ ಗುಣಮಟ್ಟದಲ್ಲಿ ಇವುಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಿಲ್ಲ. ಈ ಸಿಹಿತಿಂಡಿಗಳು ದೀಪಾವಳಿಯ ಆಚರಣೆಯನ್ನು ದ್ವಿಗುಣಗೊಳಿಸುತ್ತವೆ. ಹಾಗಾದರೆ ನೀವು ಮನೆಯಲ್ಲಿ ಮಾಡಬಹುದಾದ ಆರೋಗ್ಯಕರ ಸಿಹಿತಿಂಡಿಗಳ ಬಗ್ಗೆ ಇಲ್ಲಿ ತಿಳಿಯೋಣ.
ಲಡ್ಡು
ಯಾವುದೇ ಹಬ್ಬ ಅಥವಾ ಶುಭ ಸಮಾರಂಭಗಳು ಗಣೇಶನ ಪೂಜೆ ಇಲ್ಲದೆ ಆರಂಭವಾಗುವುದಿಲ್ಲ. ಯಾವದೇ ಹಬ್ಬ ಇರಲಿ ಮೊದಲ ಪ್ರಾರ್ಥನೆ ಗಣೇಶನಿಗೆ ಸಲ್ಲುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಗಣೇಶನಿಗೆ ಪ್ರಿಯವಾದ ಲಡ್ಡು ಇರಲೇ ಬೇಕು. ದೀಪಾವಳಿಗೆ ನೀವು ತಯಾರಿಸುವ ಸಿಹಿತಿಂಡಿಗಳಲ್ಲಿ ಲಡ್ಡು ತಯಾರಿಸುವುದನ್ನು ಮರೆಯಬೇಡಿ.
ಡ್ರೈ ಫ್ರೂಟ್ಸ್ ಲಡ್ಡು
ಹಬ್ಬದ ಸಮಯದಲ್ಲಿ ಡ್ರೈ ಫ್ರೂಟ್ಸ್ಗಳನ್ನು ಬಳಕೆ ಮಾಡಿ ಲಡ್ಡುಗಳನ್ನು ತಯಾರಿಸಿ. ಇದು ನಿಮ್ಮ ಮನೆಗೆ ಬರುವ ಅತಿಥಿಗಳ ಹಾಗೂ ಸಂಬಂಧಿಕರ ಮೆಚ್ಚುಗೆಯನ್ನು ಪಡೆಯುವುದರಲ್ಲಿ ಅನುಮಾನವಿಲ್ಲ. ರುಚಿಕರವಾದ ಡ್ರೈ ಫ್ರೂಟ್ ಲಡ್ಡುಗಳನ್ನು ತಯಾರಿಸಲು ಗೋಡಂಬಿ, ಬಾದಾಮಿ ಮತ್ತು ಪಿಸ್ತಾಗಳನ್ನು ಮಿಶ್ರಣ ಮಾಡಿ.
ನಂತರ ಈ ಮಿಶ್ರಣವನ್ನು ಖರ್ಜೂರ, ಅಂಜೂರದ ಹಣ್ಣುಗಳು ಮತ್ತು ತುಪ್ಪದೊಂದಿಗೆ ಸೇರಿಸಿ ಉಂಡೆಗಳನ್ನಾಗಿ ಮಾಡಿದರೆ ಆಹಾ... ಅದನ್ನು ತಿನ್ನುವುದರಲ್ಲಿರುವ ಮಜಾನೇ ಬೇರೆ. ಖರ್ಜೂರದಿಂದ ಮಾಡಿದ ಸಿಹಿತಿಂಡಿಗಳು ವಿಭಿನ್ನ ರುಚಿಯನ್ನು ನೀಡುತ್ತವೆ.
ಕಡಲೆ ಲಡ್ಡು
ಈ ಬಾಯಲ್ಲಿ ನೀರೂರಿಸುವ ಕಡಲೆ ಹಿಟ್ಟಿನ ಲಡ್ಡುಗಳನ್ನು ನೀವು ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸಿರುತ್ತೀರಿ. ಇದನ್ನು ತಯಾರಿಸುವ ಮೊದಲು ಕಡಲೆ ಹಿಟ್ಟನ್ನು ತೆಗೆದುಕೊಳ್ಳಬೇಕು. ಗೋಲ್ಡನ್ ಬ್ರೌನ್ ಆಗುವವರೆಗೆ ಇದನ್ನು ಹುರಿಯಬೇಕು. ಇದು ಪರಿಮಳವನ್ನು ಪಡೆಯುವವರೆಗೆ ಅದನ್ನು ತುಪ್ಪದಲ್ಲಿ ಹುರಿಯಬೇಕು.
ಬಳಿಕ ಈ ಹಿಟ್ಟಿನಲ್ಲಿ ಪುಡಿಮಾಡಿದ ಸಕ್ಕರೆ, ಏಲಕ್ಕಿ ಮತ್ತು ಪಾಯಿಸಕ್ಕೆ ಹಾಕುವ ಬೀಜಗಳನ್ನು ಮಿಶ್ರಣ ಮಾಡಿ. ಇದನ್ನು ಉಂಡೆ ಮಾಡುವ ಬದಲು ಚೌಕಾರಾದಲ್ಲೂ ಮಾಡಬಹುದು. ಈ ಸಿಹಿತಿಂಡಿಗಳು ನಿಮ್ಮ ಸಾಂಪ್ರದಾಯಿಕ ರುಚಿಯೊಂದಿಗೆ ಸವಿಯಲು ಸಿದ್ಧವಾಗುತ್ತವೆ.
ಕಾಜು ಬರ್ಫಿ
ಕಾಜು ಬರ್ಫಿಯು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಸಿಹಿಯಾಗಿದೆ. ಮನೆಯಲ್ಲಿ ಕಾಜು ಬರ್ಫಿ ಮಾಡಲು ಗೋಡಂಬಿಯನ್ನು ನುಣ್ಣಗೆ ಪುಡಿಮಾಡಿ ನಂತರ ಸಕ್ಕರೆ ಪಾಕದೊಂದಿಗೆ ದಪ್ಪವಾಗುವವರೆಗೆ ಬೇಯಿಸಿ. ಮಿಶ್ರಣವನ್ನು ತೆಳುವಾಗಿ ರೋಲ್ ಮಾಡಿ, ಅದನ್ನು ಡೈಮಂಡ್ ಆಕಾರದಲ್ಲಿ ಕತ್ತರಿಸಬೇಕು. ನಂತರ ಬೆಳ್ಳಿಯ ಎಲೆಗಳಿಂದ ಅಲಂಕರಿಸಿದರೆ ರುಚಿಕರವಾದ ಕಾಜು ಬರ್ಫಿ ಸವಿಯಲು ಸಿದ್ಧ. ಈ ದೀಪಾವಳಿಗೆ ಸರಳ ಹಾಗೂ ಸುಲಭವಾದ ಬರ್ಫಿಯನ್ನು ತಯಾರಿಸಲು ನೀವು ಕೂಡ ಟ್ರೈ ಮಾಡಿ.












Click it and Unblock the Notifications