Avalakki Puliogare Recipe: ಬೆಳಿಗ್ಗೆಗೆ ತಿಂಡಿ ಏನ್ ಮಾಡ್ಬೇಕು ಅಂತ ಈಗಲೇ ಯೋಚನೆ ಮಾಡ್ತಾಯಿದಿರಾ? ಹೀಗೆ ಮಾಡಿ..
ಅದೆಷ್ಟೋ ಗೃಹಿಣಿಯರು ಬೆಳಗ್ಗೆ ತಿಂಡಿ ಏನು ಮಾಡೋದು ಅಂತ ರಾತ್ರಿಯಿಂದಲೇ ಯೋಚನೆ ಮಾಡಲು ಶುರು ಮಾಡಿರುತ್ತಾರೆ. ನೀವೇನಾದ್ರು ಹೀಗೆ ಯೋಚನೆ ಮಾಡ್ತಾಯಿದ್ದರೆ ನಾವು ನಿಮಗೆ ಒಂದು ಸುಲಭವಾಗಿ ತಯಾರಿಸಬಹುದಾದ ತಿಂಡಿಯನ್ನು ಹೇಳಿಕೊಡುತ್ತೇವೆ. ಇದನ್ನು ಮನೆಯಲ್ಲಿ ಟ್ರೈ ಮಾಡಿ.
ಅದುವೇ ಅವಲಕ್ಕಿ ಪುಳಿಯೊಗರೆ. ಸಾಮಾನ್ಯವಾಗಿ ನಾವು ಅನ್ನದಿಂದ ಪುಳಿಯೊಗರೆ ತಯಾರಿಸುತ್ತೇವೆ. ಆದರೆ ನಾವು ಈಗ ನಿಮಗೆ ಹೇಳಲು ಹೊರಟಿರುವ ರೆಸಿಪಿ ಅವಲಕ್ಕಿ ಪುಳಿಯೊಗರೆ ಪಾಕವಿಧಾನದ ಬಗ್ಗೆ. ಉತ್ತರ ಕರ್ನಾಟಕದ ಜನರಿಗೆ ಅವಲಕ್ಕಿ ಪುಳಿಯೊಗರೆ ಬಗ್ಗೆ ಹೆಚ್ಚಾಗಿ ಮಾಹಿತಿ ಇರುವುದಿಲ್ಲ. ಹೀಗಾಗಿ ಬೆಳಗ್ಗೆ ಸುಲಭವಾಗಿ ಬಹುಬೇಗ ಯಾವ ತಿಂಡಿ ತಯಾರಿಸಬಹುದು ಎಂದು ಯೋಚನೆ ಮಾಡುವವರಿಗೆ ಅವಲಕ್ಕಿ ಪುಳಿಯೊಗರೆ ತುಂಬಾ ಸುಲಭ.

ಹಾಗಾದರೆ ತಡ ಮಾಡುವುದು ಬೇಡ ಅವಲಕ್ಕಿ ಪುಳಿಯೊಗರೆ ಹೇಗೆ ತಯಾರಿಸಬೇಕು ಎನ್ನುವುದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಇದನ್ನ ಒಮ್ಮೆ ಟ್ರೈ ಮಾಡಿ. ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ತಯಾರಿಸಲು ಬೇಕಾಗುವ ಪದಾರ್ಥಗಳು:-
* ಅವಲಕ್ಕಿ ಒಂದು ಕಪ್
* ಈರುಳ್ಳಿ 1
* ಟೆಮೊಟೊ 2
* ಹಸಿ ಮೆಣಸಿನಕಾಯಿ 5
* ಪುಳಿಯೊಗರೆ ಪೌಡರ್ ಸಣ್ಣ ಪಾಕೇಟ್
* ಶೆಂಗಾ ಬೀಜ ಸ್ವಲ್ಪ
* ಕಡಲೆಬೇಳೆ 1 ಟೀ ಸ್ಪೂನ್
* ಎಣ್ಣೆ
* ಕರಿಬೇವು ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಸ್ವಲ್ಪ
*ಕೊತ್ತಂಬರಿ ಸ್ವಲ್ಪ
* ಕಾಯಿ ತುರಿ ಸ್ವಲ್ಪ

ತಯಾರಿಸುವ ವಿಧಾನ:-
* ಅವಲಕ್ಕಿಯನ್ನು ತೊಳೆದು ಒಂದು ಪಾತ್ರೆಯಲ್ಲಿ ಮುಚ್ಚಿಡಿ
* ಒಂದು ಪಾತ್ರೆಯಲ್ಲಿ ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ.
* ಬಳಿಕ ಇದಕ್ಕೆ ಶೆಂಗಾ ಬೀಜ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು ನಂತರ ಚಿಕ್ಕದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿಯನ್ನು ಹಾಕಿ ಬಾಡಿಸಿ.
* ಬಳಿಕ ಇದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಟೊಮೆಟೊ ಹಾಕಿ ಬಾಡಿಸಿ.
* ಬಳಿಕ ಇದಕ್ಕೆ ಕಡಲೆಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಸ್ವಲ್ಪ ಕರಿಬೇವು ಹಾಕಿ ಚೆನ್ನಾಗಿ ಕಲಸಿ.
* ಎಣ್ಣೆ ತೇಲುವಾಗ ಪುಳಿಯೊಗರೆ ಪೌಡರ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ
* ಬಳಿಕ ಇದಕ್ಕೆ ನೆನಸಿದ ಅವಲಕ್ಕಿ ಜೊತೆಗೆ ಸಣ್ಣಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಸ್ವಲ್ಪ ಕಾಯಿ ತುರಿ ಮೇಲೆ ಉದುರಿಸಿದರೆ ರುಚಿ ರುಚಿಯಾದ ಅವಲಕ್ಕಿ ಪುಳಿಯೊಗರೆ ಸವಿಯಲು ಸಿದ್ದ.












Click it and Unblock the Notifications