7 Summer Kitchen Tips: ಬೇಸಿಗೆಯಲ್ಲಿ ಅಡುಗೆಮನೆ ತಂಪಾಗಿಡಲು 7 ಸುಲಭ ಸಲಹೆಗಳು
7 Summer Kitchen Tips: ಇತ್ತೀಚಿನ ದಿನಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಎಷ್ಟು ಹೆಚ್ಚಾಗಿದೆ ಎಂದರೆ, ಕೂಲರ್ ಅಥವಾ ಎಸಿ ಇಲ್ಲದೆ ಒಂದು ನಿಮಿಷವೂ ಇರಲು ಕಷ್ಟವಾಗುತ್ತದೆ. ಈ ಋತುವಿನಲ್ಲಿ ಮಹಿಳೆಯರಿಗೆ ಇದು ಇನ್ನಷ್ಟು ಕಷ್ಟಕರವಾದ ಸವಾಲಾಗಿದೆ. ಏಕೆಂದರೆ ಅವರು ಹಗಲು ಮತ್ತೆ ರಾತ್ರಿ ಅಡುಗೆಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕಾಗುತ್ತದೆ. ಬೇಸಿಗೆಯಲ್ಲಿ ಮನೆಯ ಇನ್ನುಳಿದ ಸದಸ್ಯರು ಅಡುಗೆಮನೆಯ ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಇದು ಮಹಿಳೆಯರಿಗೆ ಅಡುಗೆ ಮಾಡುವುದು ಅನಿವಾರ್ಯವಾಗಿರುತ್ತದೆ.
ಇದರಿಂದಾಗಿ ಅನೇಕ ಮಹಿಳೆಯರು ಬೇಸಿಗೆಯ ಬಿಸಿಗಾಳಿ ಜೊತೆಗೆ ಗ್ಯಾಸ್ ಸ್ಟೌವ್ ಮುಂದೆ ಗಂಟೆಗಳ ಕಾಲ ನಿಂತು ಬೆವರಿನಲ್ಲಿ ನೆನೆದು, ಅಯಾಸ ಮತ್ತು ದೇಹದ ದಣಿವು ಆದರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಡುಗೆಮನೆ ಒಂದು ಕುಲುಮೆಯಂತೆ ಬಿಸಿಯಾಗಿರುತ್ತದೆ. ಮನೆಯ ಉಳಿದ ಭಾಗಗಳಂತೆ ನಿಮ್ಮ ಅಡುಗೆಮನೆಯನ್ನು ತಂಪಾಗಿಯೂ ಮತ್ತು ಆರಾಮದಾಯಕವಾಗಿ ಇಟ್ಟುಕೊಳ್ಳಲು, ಬಿಸಿಯಾದ ತಾಪಮಾನ ಕಡಿಮೆ ಮಾಡಲು ಮತ್ತು ಅಡುಗೆ ಮಾಡುವಾಗ ಹೆಚ್ಚು ಆಯಾಸ ಆಗದಂತೆ ತಡೆಯಲು, ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.

1. ಬೆಳಿಗ್ಗೆ ಬೇಗ ಎದ್ದು ಅಡುಗೆ ಮಾಡಿ
ಬೇಸಿಗೆಯಲ್ಲಿ ಸೂರ್ಯನ ತಾಪಮಾನ ಬೆಳಿಗ್ಗೆ 10 ಗಂಟೆಯ ನಂತರ ಸಾಮಾನ್ಯವಾಗಿ ಹೆಚ್ಚಾಗುತ್ತದೆ, ಆದ್ದರಿಂದ ಸಾಧ್ಯವಾದಷ್ಟು ಬೆಳಿಗ್ಗೆ ಬೇಗನೆ ಎದ್ದು ಅಡುಗೆಯನ್ನು ತಯಾರಿಸುವುದು ಒಳ್ಳೆಯದು. ಉಪಹಾರ ತಯಾರಿಸುವಾಗ ಜೊತೆ ಜೊತೆಗೆ ಮಧ್ಯಾಹ್ನದ ಅಡುಗೆಯನ್ನು ಮುಂಚಿತವಾಗಿ ಮಾಡಿ ಮುಗಿಸಿದರೆ ಮಧ್ಯಾಹ್ನದ ಬೇಸಿಗೆಯ ಬಿಸಿಯಿಂದ ತಪ್ಪಿಸಿಕೊಳ್ಳಬಹುದು.
2. ಬೇಗನೆ ತಯಾರಾಗುವ ಆಹಾರ ಆಯ್ಕೆ ಮಾಡಿ
ಅಡುಗೆ ಮನೆಯಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳವಂತಹ ಅಥವಾ ಹೆಚ್ಚು ಮಸಾಲೆ, ಎಣ್ಣೆಗಳಿರುವ ಆಹಾರಗಳನ್ನು ಬೇಸಿಗೆಯಲ್ಲಿ ಮಾಡದೆ ಇರುವುದು ಒಳ್ಳೆಯದು. ಲಘು ಉಪಹಾರಗಳನ್ನು ಮಾಡಿದರೆ ಇದರಿಂದ ಅಡುಗೆ ಮಾಡುವ ಸಮಯ ಕಡಿಮೆ ಆಗುತ್ತದೆ ಮತ್ತು ಸ್ಟೌವ್ ಮುಂದೆ ಕಳೆಯುವ ಸಮಯ ಕೂಡ ಕಡಿಮೆ ಆಗುತ್ತದೆ.
3. ಅಡುಗೆ ಕಡಿಮೆ ಮಾಡಿ ತಯಾರಿಸಬಹುದಾದ ಆಹಾರಗಳು
ಸಲಾಡ್, ಮೊಸರಿನಿಂದ ಮಾಡಬಹುದಾದ ಆಹಾರಗಳು ಅಥವಾ ತಣ್ಣನೆಯ ಪಾನೀಯಗಳನ್ನು ಅಡುಗೆ ಮಾಡುವ ವಿಧಾನಗಳನ್ನು ಸೇರಿಸಿಕೊಳ್ಳಿ, ಇದು ನಿಮ್ಮ ದೇಹಕ್ಕೆ ತಂಪು ನಿಡುವುದಲ್ಲದೆ, ಅಡುಗೆ ಮನೆಯ ಬಿಸಿಯನ್ನು ಕೂಡ ಕಡಿಮೆ ಮಾಡುತ್ತದೆ.
4. ಆಹಾರದ ಪೂರ್ವಸಿದ್ಧತೆ
ರಾತ್ರಿ ಸಮಯದಲ್ಲೇ ತರಕಾರಿಗಳನ್ನು ತೊಳೆದು ಕತ್ತರಿಸುವುದು, ಹಿಟ್ಟು ರುಬ್ಬುವುದು, ಮಸಾಲೆ ಪದಾರ್ಥಗಳನ್ನು ತಯಾರಿಸುವುದು ಮುಂತಾದ ಕೆಲಸಗಳನ್ನು ಮಾಡಿಟ್ಟುಕೊಂಡರೆ ಹಗಲಿನಲ್ಲಿ ಅಡುಗೆ ಮನೆಯಲ್ಲಿ ಸಮಯ ಕಳೆಯುವುದು ತುಂಬಾ ಕಡಿಮೆಯಾಗುತ್ತದೆ. ಇದರಿಂದ ದೇಹದ ಆಯಾಸವು ಕಡಿಮೆಯಾಗುತ್ತದೆ.
5. ಕಿಟಕಿ ಮತ್ತು ಪರದೆ ಬಳಕೆ
ಹಗಲಿನಲ್ಲಿ ಬಿಸಿಲು ನೇರವಾಗಿ ಒಳಗೆ ಬಾರದಂತೆ ಕಿಟಕಿಗಳನ್ನು ಮುಚ್ಚಬೇಕು, ತಿಳಿ ಬಣ್ಣದ ಪರದೆಗಳನ್ನು ಬಳಸಿದರೆ ಒಳ್ಳೆಯದು. ಇವು ಬೇಸಿಗೆಯ ಬಿಸಿಯನ್ನು ಕಡಿಮೆ ಮಾಡುತ್ತವೆ. ರಾತ್ರಿ ವೇಳೆಯಲ್ಲಿ ಕಿಟಕಿಗಳನ್ನು ತೆರೆಯುವುದರಿಂದ ತಂಪು ಗಾಳಿ ಒಳಬರುತ್ತದೆ ಮತ್ತು ಅಡುಗೆಮನೆಯನ್ನು ತಂಪಾಗಿಡುವಲ್ಲಿ ಸಹಾಯ ಮಾಡುತ್ತದೆ.
6. ಎಕ್ಸಾಸ್ಟ್ ಫ್ಯಾನ್ ಮತ್ತು ಚಿಮಣಿ ಬಳಕೆ
ಅಡುಗೆ ಮಾಡುವಾಗ ಎಕ್ಸಾಸ್ಟ್ ಫ್ಯಾನ್ ಅಥವಾ ಚಿಮಣಿಯನ್ನು ಆನ್ ಮಾಡುವುದು ಬಹಳ ಮುಖ್ಯವಾಗಿದೆ. ಇವು ಅಡುಗೆಮನೆಯಲ್ಲಿರುವ ಉಗಿ, ಬಿಸಿಯಾದ ಹೊಗೆ ಮತ್ತು ತೇವಾಂಶವನ್ನು ಹೊರಗೆ ಹಾಕಲು ಸಹಾಯ ಮಾಡುತ್ತವೆ ಮತ್ತು ಒಳಗಿನ ಬಿಸಿಯಾದ ತಾಪಮಾನವನ್ನು ಕಡಿಮೆ ಮಾಡುತ್ತವೆ.
7. ಕೂಲರ್ ಅಥವಾ ಎಸಿ
ಸಾಧ್ಯವಾದರೆ ಅಡುಗೆಮನೆಯ ಹತ್ತಿರದ ಕೋಣೆಯಲ್ಲಿ ಕೂಲರ್ ಅಥವಾ ಎಸಿ ಆನ್ ಮಾಡಿ. ಈ ಸಣ್ಣ ಬದಲಾವಣೆ ನಿಮ್ಮ ಅಡುಗೆ ಮಾಡುವ ಸಮಯದಲ್ಲಿ ಹೆಚ್ಚಿನ ಆರಾಮವನ್ನು ನೀಡುತ್ತದೆ ಮತ್ತು ಬಿಸಿಯಾದ ತಾಪಮಾನವು ಸ್ವಲ್ಪ ಕಡಿಮೆಯಾಗುತ್ತದೆ.
ಬೇಸಿಗೆಯಲ್ಲಿ ಅಡುಗೆಮನೆಯನ್ನು ತಂಪಾಗಿಡುವುದು ಅಸಾಧ್ಯವಲ್ಲ. ಸರಿಯಾದ ಯೋಜನೆ, ಸಮಯ ನಿರ್ವಹಣೆ ಮತ್ತು ಈ ಸಣ್ಣ ಸಣ್ಣ ಬದಲಾವಣೆಗಳಿಂದ ನೀವು ಬಿಸಿಲಿನ ಮಧ್ಯೆಯೂ ಸುಲಭವಾಗಿ ಅಡುಗೆ ಮಾಡಬಹುದು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು ದಿನ ನಿತ್ಯದ ಕೆಲಸಗಳನ್ನು ಮಾಡಿಕೊಳ್ಳಬಹುದು.












Click it and Unblock the Notifications