ಬೇಸಿಗೆಯಲ್ಲಿ ಈ 5 ಈ ತಪ್ಪುಗಳನ್ನು ಮಾಡಬೇಡಿ: ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು
ಬೇಸಿಗೆಯ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವ ಅಗತ್ಯ ಎದುರಾಗಿದೆ. ಸಾಮಾನ್ಯವಾಗಿ ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡುವ ಕೆಲವು ದೈನಂದಿನ ಅಭ್ಯಾಸಗಳು ತೀವ್ರ ಬಿಸಿಲಿನ ಸಮಯದಲ್ಲಿ ಹೀಟ್ ಎಕ್ಸಾಸ್ಷನ್ ಅಥವಾ ಹೀಟ್‌ಸ್ಟ್ರೋಕ್ ಅಪಾಯವನ್ನು ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಹೀಗಾಗಿ ಬೇಸಿಗೆಯಲ್ಲಿ ನಾವು ಮಾಡುವಂತಹ ಈ 5 ಸಾಮಾನ್ಯ ತಪ್ಪುಗಳು ಇಲ್ಲಿವೆ.
1. ಸಾಕಷ್ಟು ನೀರು ಕುಡಿಯದೇ ಇರುವುದು
ಬೇಸಿಗೆಯಲ್ಲಿ ಜನರು ಸಾಮಾನ್ಯವಾಗಿ ಮಾಡುವ ದೊಡ್ಡ ತಪ್ಪು ಎಂದರೆ ಸಾಕಷ್ಟು ನೀರು ಕುಡಿಯದೇ ಇರುವುದು. ಹೆಚ್ಚು ಬೆವರು ಬೀಳುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ತಲೆನೋವು, ದೌರ್ಬಲ್ಯ, ತಲೆಸುತ್ತು, ಬಾಯಿ ಒಣಗುವುದು ಮತ್ತು ಏಕಾಗ್ರತೆಯ ತೊಂದರೆಗಳು ಮತ್ತು ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಆರೋಗ್ಯ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ದಿನಕ್ಕೆ ಕನಿಷ್ಠ ಎಂದರು 10 ರಿಂದ 12 ಗ್ಲಾಸ್ ನೀರು ಕುಡಿಯುವುದು ಉತ್ತಮ.

2. ಗಾಢ ಬಣ್ಣದ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು
ಗಾಢವಾದ ಬಣ್ಣದ ಬಟ್ಟೆಗಳು ಹೆಚ್ಚು ಬಿಸಿಯನ್ನು ಹೀರಿಕೊಳ್ಳುತ್ತವೆ. ಹಾಗೆಯೇ ಬಿಗಿಯಾದ ಬಟ್ಟೆಗಳು ಗಾಳಿಯ ಹರಿವನ್ನು ಕಡಿಮೆ ಮಾಡುತ್ತವೆ. ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ದೇಹದಲ್ಲಿ ತೊಂದರೆ ಉಂಟಾಗಬಹುದು.
ಹೀಗಾಗಿ ಬೇಸಿಗೆಯಲ್ಲಿ ಸಡಿಲ ಹಾಗೂ ಹಗುರ ಬಣ್ಣದ ಕಾಟನ್ ಬಟ್ಟೆ ಧರಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
3. ಹೀಟ್ ಎಕ್ಸಾಸ್ಷನ್ ಲಕ್ಷಣಗಳನ್ನು ನಿರ್ಲಕ್ಷಿಸುವುದು
ಅತಿಯಾಗಿ ಬೆವರುವುದು, ತಲೆ ಸುತ್ತುವುದು, ವಾಂತಿ ಭಾವನೆ, ಸ್ನಾಯು ನೋವು, ದೌರ್ಬಲ್ಯ ಇವುಗಳು ಹೀಟ್ ಎಕ್ಸಾಸ್ಷನ್‌ನ ಆರಂಭಿಕ ಲಕ್ಷಣಗಳಾಗಿರಬಹುದು. ಇವುಗಳನ್ನು ನಿರ್ಲಕ್ಷಿಸಿದರೆ ಹೀಟ್‌ಸ್ಟ್ರೋಕ್ ಅಪಾಯ ಹೆಚ್ಚಾಗಬಹುದು.
ಇಂತಹ ಲಕ್ಷಣಗಳು ಕಂಡುಬಂದ ಕೂಡಲೇ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಮತ್ತು ನೀರು ಕುಡಿಯುವುದು ಮುಖ್ಯ.

4. ಹೆಚ್ಚು ಕಾಫೀನ್ ಅಥವಾ ಮದ್ಯ ಸೇವನೆ
ಬೇಸಿಗೆಯಲ್ಲಿ ಹೆಚ್ಚು ಕಾಫಿ, ಟೀ ಅಥವಾ ಮದ್ಯ ಸೇವಿಸುವುದರಿಂದ ದೇಹದಲ್ಲಿ ನೀರಿನ ಕೊರತೆ ಹೆಚ್ಚಾಗಬಹುದು. ಇವು ದೇಹವನ್ನು ಇನ್ನಷ್ಟು ಡಿಹೈಡ್ರೇಟ್ ಮಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಹೀಗಾಗಿ ತಂಪು ಪಾನೀಯಗಳಿಗಿಂತ ಹೆಚ್ಚು ನೀರು ಮತ್ತು ನೈಸರ್ಗಿಕ ಹಣ್ಣಿನ ರಸ ಸೇವಿಸುವುದು ಉತ್ತಮ.
5. ಭಾರವಾದ ಆಹಾರ ಸೇವಿಸುವುದು
ಬೇಸಿಗೆಯಲ್ಲಿ ಹೆಚ್ಚು ಎಣ್ಣೆಯುಕ್ತ ಅಥವಾ ಭಾರವಾದ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಹೆಚ್ಚು ಶಕ್ತಿ ಬೇಕಾಗುತ್ತದೆ. ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ಸುಸ್ತು ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.
ಹೀಗಾಗಿ ಹಣ್ಣುಗಳು, ತರಕಾರಿಗಳು ಮತ್ತು ನೀರಿನ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯಲ್ಲಿ ಕೇವಲ ತಂಪಾಗಿರುವುದು ಮಾತ್ರವಲ್ಲ. ಸರಿಯಾದ ಆಹಾರ, ಸಾಕಷ್ಟು ನೀರು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದರ ಮೂಲಕ ಮಾತ್ರ ತೀವ್ರ ಬಿಸಿಲಿನ ತಾಪಮಾನದಿಂದ ಸುರಕ್ಷಿತವಾಗಿರಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.














Click it and Unblock the Notifications