ಪರೀಕ್ಷೆ ಪಾಸಾಗಲು ಏನು ಬೇಕಾದ್ರೂ ಮಾಡಲು ಸಿದ್ಧ!
ಪ್ರೊಫೆಸರೊಬ್ರು ತಮ್ಮ ಚೇಂಬರಿನಲ್ಲಿ ಅಧ್ಯಯನದಲ್ಲಿ ಮುಳುಗಿರುತ್ತಾರೆ. ಅಧ್ಯಯನ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎಂಬಷ್ಟರಲ್ಲಿ ಕದ ಬಡಿದಂತಾಗುತ್ತದೆ. ತೆರೆದು ನೋಡಿದರೆ ರಂಭೆ, ಮೇನಕೆ, ಅಪ್ಸರೆ, ತಿಲೋತ್ತಮೆ, ಊರ್ವಶಿಯರು ಕೂಡ ನಾಚಬೇಕು ಅಂತಹ ಹದಿಹರೆಯದ ಸುಂದರಿಯೊಬ್ಬಳು ವೈಯಾರದಿಂದ ನಿಂತಿರುತ್ತಾಳೆ.
ಜೀವಮಾನ ಪೂರ್ತಿ ಪಾಠ ಮಾಡುವುದರಲ್ಲೇ ಕಳೆದ, ಜೀವನಪೂರ್ತಿ ಅಂತಹ ಸುಂದರಿಯನ್ನೇ ನೋಡದ ಪ್ರೊಫೆಸರ್ ಸ್ತಂಭೀಭೂತನಂತೆ ನಿಂತುಬಿಡುತ್ತಾನೆ. "ಮೇ ಐ ಕಮಿನ್ ಸರ್" ಎಂದು ಹೇಳಿ ಪ್ರೊಫೆಸರ್ ಉತ್ತರಕ್ಕೂ ಕಾಯದೆ, ಸಿಂಹಕಟಿ ಸೌಂದರ್ಯ ಸೂಸುವಂತೆ ಸೀರೆಯುಟ್ಟಿದ್ದ ಸುಂದರಿ ಚೇಂಬರ್ ಒಳಬರುತ್ತಾಳೆ.
ಏನು ಸಮಾಚಾರ ಎಂಬಂತೆ ಪ್ರೊಫೆಸರ್ ಮೂಗಿನ ಮೇಲೆ ಕನ್ನಡಕವನ್ನು ಏರಿಸಿಕೊಳ್ಳುತ್ತಾರೆ. ಚೆಂದುಟಿಯ ಮೇಲೆ ಕೆಂಪನೆಯ ನಾಲಿಗೆಯನ್ನು ಒಮ್ಮೆ ಆಡಿಸಿದ ಸುಂದರಿ ಟೇಬಲ್ ಮೇಲೊರಗಿ, "ಸರ್, ನಾನು ಪರೀಕ್ಷೆ ಪಾಸ್ ಮಾಡಲು ನೀವು ಏನು ಹೇಳುತ್ತೀರೋ, ಏನನ್ನು ಇಚ್ಛಿಸುತ್ತೀರೋ ಅದನ್ನೆಲ್ಲ ಮಾಡಲು ರೆಡಿಯಾಗಿದ್ದೇನೆ" ಎಂದು ಹೇಳುತ್ತಾಳೆ.
ಇಂಥದೊಂದು ಸಂದರ್ಭ ಪ್ರೊಫೆಸರ್ ಜೀವನದಲ್ಲಿ ಎಂದೂ ಬಂದಿರಲಿಲ್ಲ, ಇಂಥ ಹುಡುಗಿಯನ್ನು ಎಂದೂ ನೋಡಿರಲಿಲ್ಲ. "ಹಮ್, ನಿಜವಾಗ್ಲೂ? ನಾನೇನು ಹೇಳ್ತೇನೋ ಅದನ್ನೆಲ್ಲ?" ಎಂದು ಪ್ರೊಫೆಸರ್ ಪ್ರಶ್ನಿಸುತ್ತಾರೆ. ಇಷ್ಟು ಹೇಳುವಷ್ಟರಲ್ಲಿ ಪ್ರೊಫೆಸರ್ ನಾಲಿಗೆಯ ಮೇಲಿನ ಪಸೆಯೆಲ್ಲ ಆರಿಹೋಗಿರುತ್ತದೆ.
"ನಿಜವಾಗ್ಲೂ" ಎಂದು ಆಕೆ ಮತ್ತೆ ಒತ್ತಿ ಹೇಳುತ್ತಾಳೆ.
"ಓಕೆ. ಅದು ನಿನಗೇ ಒಳ್ಳೆಯದು. ನಾನೇನೂ ಬಲವಂತ ಮಾಡಲು ಹೋಗುವುದಿಲ್ಲ. ಆದ್ರೆ, ನಾನಿಷ್ಟಪಟ್ಟಂತೆ ನೀನು ಮಾಡಲೇಬೇಕು" ಎಂದು ಪ್ರೊಫೆಸರ್ ಸುಂದರಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಾರೆ.
"ಡನ್ ಸರ್. ಸರಿ ಏನು ಮಾಡಬೇಕೆಂದು ಹೇಳಿ" ಎಂದು ಚಾಲೇಂಜ್ ಸ್ವೀಕರಿಸಿದವರಂತೆ ಆಕೆ ಕೇಳುತ್ತಾಳೆ.
"ಫೈನ್. ಪರೀಕ್ಷೆ ಪಾಸು ಮಾಡಬೇಕೆಂದರೆ ನೀನು ಕಷ್ಟಪಟ್ಟು ಓದಲೇಬೇಕು!" ಹುಡುಗಿಯ ತಲೆ ಗಿರ್ರನೆ ತಿರುಗಿದಂತಾಗಿ ದಬಾರನೆ ಬಿದ್ದುಬಿಡುತ್ತಾಳೆ.












Click it and Unblock the Notifications