ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಕೇಳರಿಯದ ವಿಸ್ಮಯ

ಕಲಿಯುಗದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವವರು ಬಹಳಷ್ಟು ಮಂದಿ, ಯಾಕೆಂದರೆ ಕಣಕಣದಲ್ಲೂ ದೇವರನ್ನೇ ನಂಬುವ ಆಸ್ತಿಕ ಮಹಾಶಯರ ವರ್ಗ ಬಹು ದೊಡ್ಡದು. ಈ ಲೇಖನದಲ್ಲಿರುವ ಚಿತ್ರವನ್ನು ಒಂದು ಸಲ ತದೇಕಚಿತ್ತದಿಂದ ನೋಡಿ, ಹಿಮಾಲಯದ ಒಂದು ಕೋನದಲ್ಲಿ ಸಾಕ್ಷಾತ್ ಶಿವ ನಿಂತಿರುವ ಭಂಗಿಯಲ್ಲಿ ಭಕ್ತರಿಗೆ ದರುಶನ ನೀಡುತ್ತಿದ್ದಾನೆ.
ಬೇಸಿಗೆ ರಜೆ ಹತ್ತಿರ ಬರುತ್ತಿದೆ. ಬದರಿನಾಥ್, ಕೇದಾರನಾಥ್ ಗೆ ಧಾರ್ಮಿಕ ಟ್ರಿಪ್ ಹೊಡೆದು ಶಿವನನ್ನು ಒಂದು ಸಲ ಕಣ್ಣಾರೆ ಕಂಡು ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಟಿಕೆಟ್ ಬುಕ್ ಮಾಡುವ ಆಲೋಚನೆ ಮಾಡಿದ್ದೀರಾ? ಆಲೋಚನೆ ಏನೋ ಒಳ್ಳೆಯದ್ದೆ ಆದರೆ ಕೆಳಗಿನ ವಾಕ್ಯವನ್ನು ಒಂದು ಸಲ ಓದಿ ಆಮೇಲೆ ನಿಮ್ಮ ನಿರ್ಧಾರ ನಿಮಗೆ ಬಿಟ್ಟಿದ್ದು.
ಇದು ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ಚಿತ್ರ ಸ್ವಾಮಿ. ಚಿತ್ರ ನೋಡಿದ ಕೂಡಲೇ ಒಂದು ಸಲ ನಿಮ್ಮನ್ನು ಆಕರ್ಷಿಸುವ ಶಿವನ ಭಂಗಿಯಿದು. ನನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಈ ಇಮೇಜ್ ಜೊತೆ ಈ ಸಂದೇಶ ಬಂದಿತ್ತು "ಇದನ್ನು ನಿಮ್ಮ ಮನೆಮಂದಿ, ಸ್ನೇಹಿತರಿಗೆ ಫಾರ್ವರ್ಡ್ ಮಾಡಿದರೆ ವರ್ಷ ಪೂರ್ತಿ ನಿಮಗೆ ಲಕ್ಕಿಯೋ ಲಕ್ಕಿ" ಎಂದು.
ಇಂತಹ ಬಹಳಷ್ಟು ಎಸ್ಎಂಎಸ್ ನನಗೂ, ನಿಮಗೂ ಈ ಹಿಂದೆ ಬಹಳಷ್ಟು ಬಂದಿರುತ್ತದೆ . ಈ ಮೆಸೇಜ್ ಅನ್ನು 21 ಜನರಿಗೆ ಫಾರ್ವರ್ಡ್ ಮಾಡಿ, 21 ದಿನಗಳಲ್ಲಿ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ, ಈ ಮೆಸೇಜ್ ಅನ್ನು ಇಗ್ನೋರ್ ಮಾಡಿದರೆ ನಿಮಗೆ ಕಷ್ಟ ತಪ್ಪಿದಲ್ಲ ಮುಂತಾದ.. ಮೆಸೇಜ್ ಗಳು ನಾವು ಕಂಡಿದ್ದೇವೆ, ಓದಿದ್ದೇವೆ.
ಕೆಲವರು ಅದನ್ನು ಫಾರ್ವರ್ಡ್ ಮಾಡಿದರೆ, ಇಂತಹ ಸಂದೇಶಗಳನ್ನು ಡಿಲಿಟ್ ಮಾಡುವವರ ಸಂಖ್ಯೆ ಕಮ್ಮಿಯೇನೂ ಇಲ್ಲ. ಒಟ್ಟಿನಲ್ಲಿ ಯಾರಿಗೆ ಒಳ್ಳೆದಾಗಿದೆಯೋ ಇಲ್ಲವೋ ಆ ಶಿವನೆ ಬಲ್ಲ, ಮೊಬೈಲ್ ಕಂಪೆನಿಗಳ ಟರ್ನ್ ಓವರ್ ಹೆಚ್ಚಾಗಿರುವುದಂತೂ ಎಲ್ಲರೂ ಒಪ್ಪಿಕೊಳ್ಳ ಬೇಕಾದ ಸತ್ಯ.
ತಂತ್ರಜ್ಞಾನ ಬದಲಾದಂತೆ ಎಸ್ಎಂಎಸ್ ಬದಲು ಫೇಸ್ ಬುಕ್ ನಲ್ಲಿ ಇಂತಹ ಮೆಸೇಜ್ ಗಳು ಹರಿದಾಡುತ್ತಿವೆ. ಹಾಗಾಗಿ ನಮ್ಮ ಒನ್ ಇಂಡಿಯಾ ಕನ್ನಡ ಓದುಗರಿಗೂ ಈ ಬಗ್ಗೆ ತಿಳಿಸುವುದು ನನ್ನ ಜನ್ಮ ಸಿದ್ದ ಹಕ್ಕು ಎಂಬ ಧನ್ಯತಾ ಭಾವದಿಂದ ಈ ಲೇಖನದ ಮೂಲಕ ತಮಗೆ ತಿಳಿಸುತ್ತಿದ್ದೇನೆ.
ನೀವು ಈ ಇಮೇಜ್ ಅನ್ನು ಸೇವ್ ಮಾಡ್ಕೊಂಡು ನಿಮ್ಮವರಿಗೆ ಕಳುಹಿಸುತ್ತಿರೋ, ಇಲ್ಲವೋ ಆದರೆ ಈ ಲೇಖನವನ್ನು 21, 48 ಜನರಿಗೋ ನಿಮ್ಮ ಶಕ್ತ್ಯಾನುಸಾರ ಫಾರ್ವರ್ಡ್ ಮಾಡಲು ಮರೀಬೀಡಿ, ಮರೆತು ನಿರಾಶರಾಗಬೇಡಿ.












Click it and Unblock the Notifications