ಕೊಪ್ಪಳದಲ್ಲಿ ಮೇ 8ರಂದು ವಾಕ್ ಇನ್ ಸಂದರ್ಶನ
ಕೊಪ್ಪಳ, ಮೇ 04: ಕೊಪ್ಪಳದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಮೇ 8ರಂದು ವಾಕ್ ಇನ್ ಸಂದರ್ಶನ ಆಯೋಜನೆ ಮಾಡಲಾಗಿದೆ. ನಿರುದ್ಯೋಗಿ ಯುವಕ/ ಯುವತಿಯರು ವಾಕ್ ಇನ್ ಸಂದರ್ಶನದಲ್ಲಿ ಅಗತ್ಯ ದಾಖಲೆಗಳ ಜೊತೆ ಪಾಲ್ಗೊಳ್ಳಬಹುದು. ಇದರಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.
ವಾಕ್ ಇನ್ ಸಂದರ್ಶನ ಮೇ 8ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ. ಈ ವಾಕ್ ಇನ್ ಸಂದರ್ಶನದಲ್ಲಿ ವಿವಿಧ ಖಾಸಗಿ ಸಂಸ್ಥೆಗಳು ತಮ್ಮಲ್ಲಿನ ಖಾಲಿ ಹುದ್ದೆಗಳಿಗೆ ಎಸ್ಎಸ್‌ಎಲ್‌ಸಿ, ಪಿಯುಸಿ, ತತ್ಸಮಾನ, ಡಿಪ್ಲೋಮಾ, ಐಟಿಐ ಹಾಗೂ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳನ್ನ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ವಾಕ್ ಇನ್ ಸಂದರ್ಶನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅರ್ಹ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಯುವಕ ಮತ್ತು ಯುವತಿಯರು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ 3 ಪ್ರತಿ, ಆಧಾರ್ ಕಾರ್ಡ್ ಪ್ರತಿ, ರೆಸ್ಯೂಮ್ ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಪಾಲ್ಗೊಳ್ಳಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ.
ಯುವನಿಧಿ ಫಲಾನುಭವಿಗಳ ಗಮನಕ್ಕೆ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪೈಕಿ ಯುವನಿಧಿ ಸಹ ಒಂದಾಗಿದೆ. ಈಗ ಸರ್ಕಾರ ಯುವನಿಧಿ ಯೋಜನೆಯಡಿ ನೋಂದಣಿಯಾಗಿರುವ ಅರ್ಹ ಫಲಾನುಭವಿಗಳಿಗೆ ಪ್ರಮುಖ ಸೂಚನೆಯೊಂದನ್ನು ನೀಡಿದೆ.
ಜನವರಿ 2024 ರಿಂದ ಯುವನಿಧಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಈ ಸಂಬಂಧ ಮೇ 1 ರಿಂದ 20ರೊಳಗೆ ಯುವನಿಧಿ ಫಲಾನುಭವಿಗಳು ಸ್ವಯಂ ಘೋಷಣೆ ಪತ್ರ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಯೋಜನೆಯ ಫಲಾನುಭವಿಗಳು ಯೋಜನೆ ಸೌಲಭ್ಯವನ್ನು ಮುಂದುವರಿಸಬೇಕಾದಲ್ಲಿ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲ ಎಂದು ಹಾಗೂ ಸ್ವಯಂ ಉದ್ಯೋಗಿಯಲ್ಲ ಎಂದು ಸ್ವಯಂ ಘೋಷಣೆಯನ್ನು ಮಾಡಬೇಕಾಗಿದೆ.
ಯುವನಿಧಿ ಯೋಜನೆಯಡಿ ಹಣಕಾಸಿನ ನೆರವು ಪಡೆಯಲು ಅಭ್ಯರ್ಥಿ ನಿರುದ್ಯೋಗಿಯಾಗಿರಬೇಕು. ಉನ್ನತ ಶಿಕ್ಷಣವನ್ನು ಮಾಡುತ್ತಿರಬಾರದು ಹಾಗೂ ಸ್ವಯಂ ಉದ್ಯೋಗವನ್ನು ಕೈಗೊಂಡಿರಬಾರದು. ಈ ಷರತ್ತುಗಳ ಆಧಾರದ ಮೇಲೆಯೇ ನೆರವು ನೀಡಲಾಗುತ್ತಿದೆ.
ಸ್ವಯಂ ಘೋಷಣೆ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಅಥವಾ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.
ಯುವನಿಧಿ ಯೋಜನೆಯಡಿ 2023-24 ಮತ್ತು 2024-25ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕೋರ್ಸ್‌ಗಳಲ್ಲಿ ಉತ್ತೀರ್ಣರಾಗಿರುವ ಎಲ್ಲಾ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೋಮಾ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾಸಿಕ 1,500 ರೂ. ಗಳನ್ನು ರಾಜ್ಯ ಸರ್ಕಾರವು ನಿರುದ್ಯೋಗ ಭತ್ಯೆಯಾಗಿ ನೀಡುತ್ತಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications