ಬಳ್ಳಾರಿ; ಮಾರ್ಚ್ 3ರಂದು ವಿವಿಧ ಹುದ್ದೆಗೆ ನೇರ ಸಂದರ್ಶನ
ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಇಲಾಖೆಯ ಬಳ್ಳಾರಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ.
ಬಳ್ಳಾರಿ, ಫೆಬ್ರವರಿ 26; ಬಳ್ಳಾರಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಮಾರ್ಚ್ 3ರ ಶುಕ್ರವಾರ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ. ಕೆ. ಈ ಕುರಿತು ಮಾಹಿತಿ ನೀಡಿದ್ದಾರೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು, ಅರ್ಹರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಇಲಾಖೆಯ ಬಳ್ಳಾರಿ ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಸಿ. ಪಿ. ಹೆಚ್. ಸಿ-ಯು. ಹೆಚ್. ಸಿ ಮತ್ತು ಎನ್. ಪಿ. ಪಿ. ಸಿ ಕಾರ್ಯಕ್ರಮದಡಿ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ.
ಹುದ್ದೆಗಳ ವಿವರಗಳು; ಬಳ್ಳಾರಿ ಜಿಲ್ಲಾ ಹೆಲ್ತ್ ಅಂಡ್ ವೆಲ್‍ನೆಸ್ ಸೆಂಟರ್ ಕೋ-ಆರ್ಡಿನೇಟರ್ ಹುದ್ದೆ 1, ಫೀಜಿಷಿಯನ್ 2, ಸ್ಟಾಫ್ ನರ್ಸ್ 8 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಅನುಭವ ಹೊಂದಿರಬೇಕು ಎಂದು ನೇಮಕಾತಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಈ ಹುದ್ದೆಯು ಒಂದು ವರ್ಷ ಅವಧಿಗೆ ಅಥವಾ ಈ ಕಚೇರಿಯ ಮುಂದಿನ ಆದೇಶದವರಿಗೆ ಸೀಮಿತವಿರುತ್ತವೆ ಹಾಗೂ ಸದರಿ ಹುದ್ದೆಯು ಯಾವುದೇ ಕಾರಣಕ್ಕೂ ಸರ್ಕಾರಿ ಸೇವೆಯಲ್ಲಿ ಸಕ್ರಮಗೊಳಿಸಲಾಗುವುದಿಲ್ಲ. ಅಭ್ಯರ್ಥಿಗಳ ಆಯ್ಕೆಯು ಮೀಸಲಾತಿ ಹಾಗೂ ಗಳಿಸಿದ ಅಂಕಗಳ ಆಧಾರದ ಮೇಲೆ ನಡೆಯಲಿದೆ.
ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಹುದ್ದೆಯ ಕುರಿತು ತಮ್ಮ ಬಯೋಡಾಟಾದಲ್ಲಿ ಮಾಹಿತಿ ನೀಡಬೇಕು. ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಅಗತ್ಯ ವಿದ್ಯಾರ್ಹತೆ, ಅನುಭವ, ಜಾತಿ ಪ್ರಮಾಣ ಪತ್ರ ಮತ್ತು ಇತರೆ ದೃಢಿಕೃತ ನಕಲು ದಾಖಲಾತಿಗಳ ಪ್ರತಿಗಳ ಒಂದು ಸೆಟ್ ಹಾಗೂ ತಾವು ಸಲ್ಲಿಸುವ ದಾಖಲಾತಿಗಳ ಮೂಲ ದಾಖಲಾತಿಗಳನ್ನು ತರಬೇಕು.
ನೇರ ಸಂದರ್ಶನವು ಮಾರ್ಚ್ 3ರಂದು ಬಳ್ಳಾರಿ ನಗರದ ಅನಂತಪುರ ರಸ್ತೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ [email protected] ವಿಳಾಸಕ್ಕೆ ಇ-ಮೇಲ್ ಮಾಡಬಹುದು ಅಥವಾ 08392- 274031 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಅರ್ಜಿ ಆಹ್ವಾನ; ಭಾರತ ಸರ್ಕಾರದ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರದಿಂದ 2022-23ನೇ ಸಾಲಿಗಾಗಿ ರಾಷ್ಟ್ರೀಯ ಯುವ ಸ್ವಯಂ ಕಾರ್ಯಕರ್ತರ ತಾತ್ಕಾಲಿಕ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಯುವ ಜನರಿಗಾಗಿ ಕೇಂದ್ರ ಸರ್ಕಾರದ ಯುವ ಪರ ಕಾರ್ಯಕ್ರಮಗಳನ್ನು ಸಂಘಟಿಸುವುದು ಹಾಗೂ ಯುವಕ-ಯುವತಿ, ಮಹಿಳಾ ಮಂಡಳಿಗಳನ್ನು ರಚಿಸುವುದು ಕಾರ್ಯಕರ್ತರ ಕೆಲಸವಾಗಿದೆ.
ಅರ್ಜಿ ಸಲ್ಲಿಕೆ ಮಾಡುವವರು 29 ವರ್ಷದೊಳಗಿನವರಾಗಿರಬೇಕು. ಆಯಾ ತಾಲೂಕಿನವರು ತಮ್ಮ ತಾಲೂಕಿಗೆ ಮಾತ್ರ ಕೆಲಸ ನಿರ್ವಹಿಸಲು ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 5 ಸಾವಿರ ಗೌರವಧನ (ಪ್ರವಾಸ ಭತ್ಯೆ ಸೇರಿ) ನೀಡಲಾಗುವುದು. ಹುದ್ದೆಯು 1 ವರ್ಷದ ಅವಧಿಗೆ ಮಾತ್ರ ಸೀಮಿತವಾಗಿದ್ದು, ಗ್ರಾಮೀಣ ಪ್ರದೇಶ, ಯುವತಿ, ಯುವಕ, ಮಹಿಳಾ ಮಂಡಳಿ ಸದಸ್ಯರಿಗೆ, ಎನ್‍ಸಿಸಿ, ಎನ್‍ಎಸ್‍ಎಸ್, ಕ್ರೀಡೆ, ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿದ್ದವರಿಗೆ ಹಾಗೂ ಪದವೀಧರರಿಗೆ ಆದ್ಯತೆ ನೀಡಲಾಗುತ್ತದೆ.
ಆಸಕ್ತರು ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 9 ಆಗಿರುತ್ತದೆ. ಅರ್ಜಿಯನ್ನು ಆನ್‍ಲೈನ್ ಮೂಲಕ www.nvks.org ನಲ್ಲಿ ಸಲ್ಲಿಸಬೇಕು. ನಕಲು ಪ್ರತಿಯನ್ನು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-276839ಗೆ ಸಂಪರ್ಕಿಸಬಹುದು.












Click it and Unblock the Notifications