Bonus: ₹70 ಕೋಟಿ ಬೋನಸ್ ಕೊಟ್ಟ ಕಂಪನಿ ಉದ್ಯೋಗಿಗಳಿಗೆ ಹಾಕಿದ್ದು ಒಂದೇ ಷರತ್ತು!
ಉದ್ಯೋಗಿಗಳ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಲು ಕಂಪನಿಯು ಬೋನಸ್ ಕೊಟ್ಟು ಧನ್ಯವಾದ ಹೇಳುತ್ತದೆ. ಇದು ಉದ್ಯೋಗಿಗಳಿಗೆ ಕೆಲಸ ಮಾಡಲು ಮತ್ತಷ್ಟು ಉತ್ತೇಜನ ಕೊಡುತ್ತದೆ. ಬೋನಸ್ ಕೊಡಲು ಹಲವು ಮಾನದಂಡಗಳಿರುತ್ತವೆ. ಆದರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ಭರ್ಜರಿ ಆಫರ್ ಕೊಟ್ಟಿದೆ. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಚೀನಾದ ಕ್ರೇನ್ ಕಂಪನಿಯೊಂದು ಉದ್ಯೋಗಿಗಳಿಗೆ ವರ್ಷಾಂತ್ಯದ ಬೋನಸ್ ಆಗಿ $11 ಮಿಲಿಯನ್ ಅಂದರೆ ಸುಮಾರು 70 ಕೋಟಿ ರೂಪಾಯಿ ನೀಡಿದೆ. ಆದರೆ ಬೋನಸ್ ಕೊಡಲು ಒಂದು ಷರತ್ತು ವಿಧಿಸಿದೆ. ಅಷ್ಟೊಂದು ದುಡ್ಡು ಮುಂದಿಟ್ಟು ನಿಮಗೆ ಎಣಿಸಲು ಆಗುವಷ್ಟನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಹೇಳಿದೆ.

ಚೀನಾದ ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ಲಿಮಿಟೆಡ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ಭರ್ಜರಿ ಆಫರ್ ಸಿಕ್ಕಿದೆ. ₹70 ಕೋಟಿ ರೂಪಾಯಿ ಹಣವನ್ನು ಮೇಜಿನ ಮೇಲೆ ಇಟ್ಟಿದ್ದು, ಉದ್ಯೋಗಿಗಳು ತಮ್ಮ ವರ್ಷಾಂತ್ಯದ ಬೋನಸ್ ಅನ್ನು ಪಡೆಯಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. 15 ನಿಮಿಷಗಳಲ್ಲಿ ಉದ್ಯೋಗಿಗಳು ಎಣಿಸಿಕೊಳ್ಳುವಷ್ಟು ಹಣವನ್ನು ಅವರಿಗೆ ಬೋನಸ್ ಆಗಿ ನೀಡಲಾಗಿದೆ.
ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕಗಳಾದ ಡೌಯಿನ್ ಮತ್ತು ವೀಬೋದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಳಿಕ ಜಗತ್ತಿನ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಹಂಚಿಕೊಳ್ಳಲಾಗಿದೆ. ದೊಡ್ಡ ಮೇಜಿನ ಮೇಲೆ ಹಣದ ರಾಶಿಯನ್ನು ಹರಡಲಾಗಿದ್ದು ಉದ್ಯೋಗಿಗಳು ಸಾಧ್ಯವಾದಷ್ಟು ಹಣವನ್ನು ಎಣಿಸಿಕೊಳ್ಳುವುದನ್ನು ನೋಡಬಹುದು.
ಒಬ್ಬ ಉದ್ಯೋಗಿ 15 ನಿಮಿಷಗಳಲ್ಲಿ 100,000 ಯುವಾನ್‌ಗಳನ್ನು (ಭಾರತೀಯ ಕರೆನ್ಸಿಯಲ್ಲಿ 12.07 ಲಕ್ಷ ರೂಪಾಯಿ) ಎಣಿಸಿಕೊಳ್ಳುವ ಮೂಲಕ ಭರ್ಜರಿ ಬೋನಸ್ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೆನಾನ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವರ್ಷಾಂತ್ಯದ ಬೋನಸ್ ಆಗಿ ನೀಡುತ್ತಿದೆ. ನೌಕರರು ತಾವು ಎಣಿಸಲು ಸಾಧ್ಯವಾಗುವಷ್ಟು ಹಣವನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂದು ಆಫರ್ ಕೊಟ್ಟಿದೆ ಎಂದು ವಿಡಿಯೋ ಹಂಚಿಕೊಂಡಿರುವ ಟಿಪ್ಪಣಿಯಲ್ಲಿ ಬರೆಯಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್‌ಗಳು ಬಂದಿವೆ. ಹಲವರು ಇದನ್ನು ನೋಡಿ ಆಘಾತಗೊಂಡರೆ ಇನ್ನೂ ಕೆಲವು ಈ ರೀತಿ ಬೋನಸ್ ಕೊಡುವುದನ್ನು ಟೀಕಿಸಿದರು. ಇನ್ನೂ ಕೆಲವರು ಕಂಪನಿಯ ಔದಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆನಾನ್ ಮೈನಿಂಗ್ ಕ್ರೇನ್ ಕಂಪನಿಯು ಉದ್ಯೋಗಿಗಳ ವಿಚಾರದಲ್ಲಿ ಔದಾರ್ಯತೆ ತೋರಿರುವುದು ಇದೇ ಮೊದಲನೇನಲ್ಲ. 2023ರಲ್ಲಿ ಕೂಡ ಉದ್ಯೋಗಳಿಗೆ ವಾರ್ಷಿಕ ಭೋಜನದ ಸಮಯದಲ್ಲಿ ಹಣವನ್ನು ವಿತರಣೆ ಮಾಡುವ ಮೂಲಕ ಗಮನ ಸೆಳೆದಿತ್ತು.












Click it and Unblock the Notifications