KEA Recruitment: ಅರ್ಜಿ ಶುಲ್ಕ ಇಳಿಕೆಯಾಗಲಿದೆಯೇ?
ಬೆಂಗಳೂರು, ಫೆಬ್ರವರಿ 26; ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗ್ರಾಮ ಆಡಳಿತಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ವಾಪಸ್ ನೀಡಲಾಗುವುದಿಲ್ಲ.
ವಿವಿಧ ಹುದ್ದೆಗಳಿಗೆ ಕೆಇಎ ನಿಗದಿಪಡಿಸಿರುವ ಅರ್ಜಿ ಶುಲ್ಕಗಳು ಹೆಚ್ಚಾಗಿವೆ. ಇವುಗಳನ್ನು ಕಡಿಮೆ ಮಾಡಿ ಬಡ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ. ಎಸ್. ಅರುಣ್ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್‌ಗೆ ಮನವಿ ಸಲ್ಲಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವರು ಈ ಮನವಿಗೆ ಸ್ಪಂದಿಸಿದ್ದು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಈ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಅಭ್ಯರ್ಥಿಗಳು ಪಾವತಿ ಮಾಡಬೇಕಾದ ಅರ್ಜಿ ಶುಲ್ಕ ಕಡಿಮೆಯಾಗಲಿದೆಯೇ? ಎಂದು ಕಾದು ನೋಡಬೇಕಿದೆ.
ಮನವಿಯಲ್ಲಿರುವ ಅಂಶಗಳು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗ್ರಾಮ ಆಡಳಿತಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳ ಅರ್ಜಿ ಶುಲ್ಕಗಳು ಹೆಚ್ಚಾಗಿವೆ. ಅರ್ಜಿ ಸಲ್ಲಿಸುವವರಲ್ಲಿ ಬಡ ಅಭ್ಯರ್ಥಿಗಳಿದ್ದು, ಇದರಿಂದಾಗಿ ಅವರಿಗೆ ತೊಂದರೆ ಉಂಟಾಗುತ್ತದೆ.
ಸಾಲ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ಬಡ ಅಭ್ಯರ್ಥಿಗಳು ಹೆಚ್ಚಿನ ಶುಲ್ಕದ ಹೊರೆಯಿಂದಾಗಿ ಕಂಗಾಲಾಗಿದ್ದಾರೆ. ಆದ್ದರಿಂದ ಶುಲ್ಕವನ್ನು ಪರಿಷ್ಕರಣೆ ಮಾಡಿ ಇನ್ನಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಅನುಕೂಲವಾಗುವಂತೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಸಾಮಾನ್ಯ ಮತ್ತು ಇತರೆ ಪ್ರವರ್ಗಗಳಿಗೆ 750 ರೂ., ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಈ ಶುಲ್ಕ ತುಂಬಲು ಕಷ್ಟವಾಗುತ್ತಿದೆ ಎಂದು ಅಭ್ಯರ್ಥಿಗಳು ತಮ್ಮ ಬಳಿ ಮನವಿ ಮಾಡಿದ್ದಾರೆ ಎಂದು ಪರಿಷತ್ ಸದಸ್ಯರು ಸಚಿವರಿಗೆ ವಿವರಣೆ ನೀಡಿದ್ದಾರೆ.
ಮಾರ್ಚ್ 4ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅದಕ್ಕೂ ಮೊದಲು ಶುಲ್ಕವನ್ನು ಪರಿಷ್ಕರಣೆ ಮಾಡಬೇಕು. ಸಾಮಾನ್ಯ ವರ್ಗಕ್ಕೆ 400 ರೂ., ಇತರ ಪ್ರವರ್ಗದ ಅಭ್ಯರ್ಥಿಗಳಿಗೆ 300 ರೂ. ಮತ್ತು ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ 150 ರೂ. ನಂತೆ ಶುಲ್ಕ ನಿಗದಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕದ ಕಂದಾಯ ಇಲಾಖೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆದಿದೆ. ಮಾರ್ಚ್ 4ರಿಂದ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಕಲ್ಯಾಣ ಕರ್ನಾಟಕ ಮತ್ತು ಸ್ಥಳೀಯ ವೃಂದ ಸೇರಿ ಒಟ್ಟು ಹುದ್ದೆಗಳು 1000. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ 21,400-42,0000 ರೂ. ನಿಗದಿ ಮಾಡಲಾಗಿದೆ.
ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ದ್ವಿತೀಯ ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ, ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ನೇ ಪರೀಕ್ಷೆ ಎನ್‌ಐಓಎಸ್ ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಕೋರ್ಸ್/ ಹೆಚ್ ಎಸ್‌ಸಿ. ಮೂರು ವರ್ಷಗಳ ಡಿಪ್ಲೊಮಾ ಅಥವ ಎರಡು ವರ್ಷಗಳ ಐಟಿಐ ಕೋರ್ಸ್ ಅಥವ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾ ತತ್ಸಮಾನ ವಿದ್ಯಾರ್ಹತೆ ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.












Click it and Unblock the Notifications