ಪ್ರವೀಣ್ ನೆಟ್ಟಾರು ಪತ್ನಿ ಮರು ನೇಮಕ; ಸಿದ್ದರಾಮಯ್ಯ ಟ್ವೀಟ್
ಬೆಂಗಳೂರು, ಮೇ 28; ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯನ್ನು ಮರು ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ. ನೂತನ ಕುಮಾರಿ ಸೇವೆಯಿಂದ ವಜಾಗೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ನೂತನ ಕುಮಾರಿ ಅವರನ್ನು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವಾಲಯದಲ್ಲಿ ಹಿರಿಯ ಸಹಾಯಕಿ (ಗ್ರೂಪ್ ಸಿ) ಹುದ್ದೆಗೆ 2022ರ ಸೆಪ್ಟೆಂಬರ್ 22ರಂದು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಟ್ವೀಟ್ ಮಾಡಿದ್ದಾರೆ. 'ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ' ಎಂದು ಹೇಳಿದ್ದಾರೆ.
ಕೆಲಸದ ಭರವಸೆ; ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ, 'ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು' ಎಂದು ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.

ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಭಾರೀ ವಾಕ್ಸಮರ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಕಾಂಗ್ರೆಸ್, ಹೊಸ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಪ್ರವೀಣ್ ನೆಟ್ಟಾರು ಅವರ ಪತ್ನಿ ಕೆಲಸದಿಂದ ವಜಾಗೊಂಡ ಬಳಿಕ ಕರ್ನಾಟಕ ಬಿಜೆಪಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಆಗ ಟ್ವೀಟ್ ಮೂಲಕ ತಿರಗೇಟು ನೀಡಿದ್ದ ಕಾಂಗ್ರೆಸ್ ಪಕ್ಷ, 'ಪ್ರವೀಣ್ ನೆಟ್ಟಾರು ಬಿಜೆಪಿ ಕಾರ್ಯಕರ್ತ, ಬಿಜೆಪಿಗೆ ನಿಜಕ್ಕೂ ಆತನ ಕುಟುಂಬದ ಮೇಲೆ ಕಾಳಜಿ ಇದ್ದಿದ್ದೇ ಆದರೆ ತಾತ್ಕಾಲಿಕ ಕೆಲಸ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ @BJP4Karnataka ಕಛೇರಿಯಲ್ಲೆ ಉತ್ತಮ ವೇತನದೊಂದಿಗೆ ಶಾಶ್ವತ ಉದ್ಯೋಗ ಕಲ್ಪಿಸಲಿ. ಬಿಜೆಪಿ ತನ್ನ ಭದ್ದತೆಯನ್ನು ಪ್ರದರ್ಶಿಸಲಿ' ಎಂದು ಸವಾಲು ಹಾಕಿತ್ತು.
ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, 'ಭ್ರಷ್ಟಾಚಾರವೇ ಕುಲದೈವ ಎಂದು ನಂಬಿರುವ @BJP4Karnataka ಗೆ ನೀತಿ ನಿಯಮಗಳನ್ನು ಅಧ್ಯಯನ ಮಾಡಲು ಆಸಕ್ತಿ & ಸಮಯ ಇರಲು ಸಾಧ್ಯವೇ?. ನಿಯಮದ ಪ್ರಕಾರ ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ, ಬದುಕಿಗೆ ಶಾಶ್ವತ ದಾರಿ ತೋರಿಸದೆ ಇಂತಹ ಪೇಪರ್ ಚಾಕ್ಲೆಟ್ ನೀಡುವ ಮೂಲಕ ಬಿಜೆಪಿ ಪ್ರವೀಣ್ ಪತ್ನಿಗೆ ದ್ರೋಹವೆಸಗಿದೆ' ಎಂದು ಆರೋಪ ಮಾಡಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ದುಷ್ಕರ್ಮಿಗಳಿಂದ ಕೊಲೆಯಾಗಿರುವ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ನೀಡಿದ್ದ ಗುತ್ತಿಗೆ ಆಧಾರಿತ ನೌಕರಿಯನ್ನು ಮುಂದುವರೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿ ಮಾಡುತ್ತೇನೆ" ಎಂದು ಹೇಳಿದ್ದರು.
"ನೂತನ ಕುಮಾರಿ ಅವರಿಗೆ ಅನುಕಂಪದ ಆಧಾರದಲ್ಲಿ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನೌಕರಿ ನೀಡಲಾಗಿತ್ತು. ಆ ನೌಕರಿಯಲ್ಲಿಯೇ ಅವರನ್ನು ಮುಂದುವರೆಸುವಂತೆ ಮುಖ್ಯಮಂತ್ರಿಗಳನ್ನು ವಿನಂತಿಸುತ್ತೇವೆ. ರಾಜ್ಯ ಸರ್ಕಾರ ಒಪ್ಪದಿದ್ದರೆ ಕೇಂದ್ರ ಸರ್ಕಾರದ ಅಧೀನದ ಯಾವುದಾದರೂ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುತ್ತೇವೆ" ಎಂದು ತಿಳಿಸಿದ್ದರು.












Click it and Unblock the Notifications