ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಖತ್ ಡಿಮ್ಯಾಂಡ್ ಗುರೂ!
ಬೆಂಗಳೂರು, ಜುಲೈ 8: ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಪ್ರಮಾಣದಲ್ಲಿ ಚುರುಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಲಾಭದಾಯಕವಾಗಿದ್ದು, ಪರಿಸ್ಥಿತಿ ಕೋವಿಡ್-19 ಸಾಂಕ್ರಾಮಿಕ ಪೂರ್ವ ಮಟ್ಟವನ್ನು ತಲುಪಿದಂತೆ ತೋರುತ್ತಿದೆ.
ಉದ್ಯೋಗಾವಕಾಶಗಳು ಮುಕ್ತಾಯಗೊಂಡ ಕಾಲೇಜುಗಳ ಪ್ರಕಾರ, ಅನೇಕ ಕಂಪನಿಗಳು ಈ ವರ್ಷ ಆನ್‌ಲೈನ್ ಮೂಲಕವೇ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿವೆ. 2022ರ ಬ್ಯಾಚ್ ಪದವೀಧರರು ತಮ್ಮ ಸೀನಿಯರ್ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ವೇತನವನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಹಿಂದಿನ ಬ್ಯಾಚ್ ವಿದ್ಯಾರ್ಥಿಗಳು ಮತ್ತು ಈ ಬ್ಯಾಚ್ ವಿದ್ಯಾರ್ಥಿಗಳ ವೇತನದಲ್ಲಿ ಐದು ಪಟ್ಟು ವ್ಯತ್ಯಾಸವಾಗಿರುವುದು ಕಂಡು ಬರುತ್ತಿದೆ. ಹೆಚ್ಚಿನ ಮಟ್ಟದಲ್ಲಿ ಒಂದು ವರ್ಷದ ಪ್ಯಾಕೇಜ್‌ಗಳು 14 ಲಕ್ಷದಿಂದ 65 ಲಕ್ಷದವರೆಗೆ ಇರುತ್ತವೆ.

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ವಿವಿ ವಿದ್ಯಾರ್ಥಿಗಳ ನೇಮಕಾತಿ
105 ವರ್ಷಗಳಷ್ಟು ಹಳೆಯದಾದ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯವು (UVCE), ಕರ್ನಾಟಕದ ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. "ನಮ್ಮ ವಿದ್ಯಾರ್ಥಿಗಳು ಕಳೆದ ವರ್ಷ 435 ಗೆ ಹೋಲಿಸಿದರೆ ಈ ಬಾರಿ 652 ಆಫರ್‌ಗಳನ್ನು ಪಡೆದಿದ್ದಾರೆ" ಎಂದು ಯುವಿಸಿಇ ಪ್ಲೇಸ್‌ಮೆಂಟ್ ಅಧಿಕಾರಿ ಬಿ. ಎಂ. ರಾಜಪ್ರಕಾಶ್ ಹೇಳಿದ್ದಾರೆ. ಇದು ಆರು ವರ್ಷಗಳಲ್ಲೇ ಗರಿಷ್ಠ ದಾಖಲೆ ಎಂದು ಅವರು ಉಲ್ಲೇಖಿಸಿದ್ದಾರೆ.

ಪಿಇಎಸ್ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಡಿಮ್ಯಾಂಡ್
ಬೆಂಗಳೂರಿನ PES ವಿಶ್ವವಿದ್ಯಾನಿಲಯದಲ್ಲಿ, ಕ್ಯಾಂಪಸ್‌ನಲ್ಲಿ ನೇಮಕ ಮಾಡಿಕೊಳ್ಳುವ ಕಂಪನಿಗಳ ಸಂಖ್ಯೆ ಹೆಚ್ಚಾಗಿದೆ. ಕ್ಯಾಂಪಸ್ ಆಯ್ಕೆಯಲ್ಲಿ ಉದ್ಯೋಗ ಪಡೆಯುತ್ತಿರುವ ವಿದ್ಯಾರ್ಥಿಗಳು ಸಹ ಹೆಚ್ಚಿನ ವೇತನ ಪಡೆದುಕೊಳ್ಳುತ್ತಿರುವುದು ಗೊತ್ತಾಗಿದೆ.
"ಈ ವರ್ಷ ಕ್ಯಾಂಪಸ್‌ಗೆ ಭೇಟಿ ನೀಡಿದ ಕಂಪನಿಗಳ ಸಂಖ್ಯೆ 42 ಪ್ರತಿಶತದಷ್ಟು ಹೆಚ್ಚಾಗಿದೆ. ಈ ವೇಳೆ ಉದ್ಯೋಗ ಪಡೆದ 1,315 ವಿದ್ಯಾರ್ಥಿಗಳ ಪೈಕಿ 538 ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಉದ್ಯೋಗದ ಆಯ್ಕೆಯನ್ನು ಪಡೆದುಕೊಂಡಿದ್ದಾರೆ. ಕುತೂಹಲಕಾರಿ ಎಂದರೆ ಕೆಲವು ಕಂಪನಿಗಳು ಪದೇ ಪದೇ ಭೇಟಿ ನೀಡಿವೆ" ಎಂದು ಪಿಇಎಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ. ಎಸ್. ಶ್ರೀಧರ್ ಹೇಳಿದ್ದಾರೆ.

ವಿದ್ಯಾರ್ಥಿಗಳ ಸಿಟಿಸಿ ಪ್ರಮಾಣದಲ್ಲಿ ಶೇ.20ರಷ್ಟು ಹೆಚ್ಚಿನ ಆಫರ್
ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ (DSCE) ವಿದ್ಯಾರ್ಥಿಗಳು ಹೆಚ್ಚಿನ ವೇತನವನ್ನು ಪಡೆದುಕೊಳ್ಳುತ್ತಿದ್ದಾರೆ. ಕ್ಯಾಂಪಸ್ ಆಯ್ಕೆಯಲ್ಲಿಯೇ ಶೇ.20ರಷ್ಟು ಹೆಚ್ಚಿನ ವೇತನವನ್ನು ನೀಡಲಾಗುತ್ತಿದೆ. "ಇದು ಕೋವಿಡ್ ನಂತರದ ಮೊದಲ ನೇಮಕಾತಿ ಆಗಿರುವುದರಿಂದ ಕಂಪನಿಗಳು ಕ್ಯಾಂಪಸ್‌ಗೆ ಭೌತಿಕವಾಗಿ ಭೇಟಿ ನೀಡುವುದನ್ನು ಶುರು ಮಾಡಿವೆ. ಆದರೆ ನಾವು ಕಡಿಮೆ CTC ಅನ್ನು ನಿರೀಕ್ಷಿಸುತ್ತಿದ್ದೇವೆ. ಆಶ್ಚರ್ಯಕರ ಎಂದರೆ ಸಿಟಿಸಿಗಳು ಕೂಡಾ ಹೆಚ್ಚಾಗಿವೆ," ಎಂದು ಡಿಎಸ್‌ಸಿಇ ಪ್ಲೇಸ್‌ಮೆಂಟ್ ಮುಖ್ಯಸ್ಥ ಗುರು ವೆಂಕಟೇಶ್ ಎಂ. ಎನ್. ಹೇಳಿದ್ದಾರೆ.

ಕೋವಿಡ್-19 ಸಂದರ್ಭದಲ್ಲಿ ವರ್ಚುವಲ್ ನೇಮಕಾತಿ
ಕೋವಿಡ್-19 ಸಾಂಕ್ರಾಮಿಕ ರೋಗವು ಕಳೆದ ಎರಡು ವರ್ಷಗಳಲ್ಲಿ ಕ್ಯಾಂಪಸ್ ನೇಮಕಾತಿಗಳಿಗೆ ಭಾರೀ ಹೊಡೆತ ಕೊಟ್ಟಿತ್ತು. ಈ ಹಿಂದೆ ವರ್ಚುವಲ್ ನೇಮಕಾತಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಪಾಲಿಗೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ಕಂಪನಿಗಳಿಂದ ವರ್ಚುವಲ್ ನೇಮಕಾತಿ ಪ್ರಕ್ರಿಯೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಆ ನಿಟ್ಟಿನಲ್ಲಿ ಸಿದ್ಧಪಡಿಸಲಾಯಿತು. ವರ್ಚುವಲ್ ಆಯ್ಕೆ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವುದಕ್ಕೆ ಆರಂಭಿಸಿದೆವು ಎಂದು ಪ್ಲೇಸ್‌ಮೆಂಟ್ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ 2023ರ ಬ್ಯಾಚ್‌ಗೆ ನೇಮಕಾತಿ ಬೇಡಿಕೆಯು ಶೇಕಡಾ 10ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್ ಮತ್ತು ಆಟೊಮೇಷನ್, ಡೇಟಾ ಅನಾಲಿಟಿಕ್ಸ್, ಪೆಗಾ, ಐಒಟಿ, ಬ್ಲಾಕ್ ಚೈನ್‌ನಂತಹ ಸ್ಥಾಪಿತ ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಪ್ಲೇಸ್‌ಮೆಂಟ್ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications