ಮೋಟಾರು ವಾಹನ ನಿರೀಕ್ಷಕ ನೇಮಕಾತಿ: ಅಭ್ಯರ್ಥಿಗಳಿಗೆ ಸಿಹಿಸುದ್ದಿ
ಬೆಂಗಳೂರು, ಜುಲೈ 08: ಕರ್ನಾಟಕದ ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕ ಹುದ್ದೆಗಳ ನೇಮಕಾತಿ ಕುರಿತು ಅಭ್ಯರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ಇಲಾಖೆಯು ಇನ್ನೂ 110 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಪತ್ರಿಕಾ ಪ್ರಕಟಣೆ ಮೂಲಕ ಸಾರಿಗೆ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ದಿನಾಂಕ 4/02/2016ರಲ್ಲಿ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ 150 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು ಎಂದು ತಿಳಿಸಿದೆ.

ಸದರಿ ಆಯ್ಕೆ ಪ್ರಕ್ರಿಯೆಯನ್ನು ವಿವಿಧ ನ್ಯಾಯಾಲಯಗಳಲ್ಲಿ ಪಶ್ನಿಸಲಾಗಿದ್ದು, ದಿನಾಂಕ 25/8/2021ರಂದು ಕರ್ನಾಟಕ ಹೈಕೋರ್ಟ್ ಅಂತಿಮ ತೀರ್ಪು ನೀಡಿದ್ದು, ಅದರಂತೆ ಕರ್ನಾಟಕ ಲೋಕಸೇವಾ ಅಯೋಗವು ದಿನಾಂಕ 22/07/2022 ಮತ್ತು ದಿನಾಂಕ 26/10/2023ರಲ್ಲಿ 141 (122 ಉಳಿಕೆ ಮೂಲ ವೃಂದ + 19 ಕಲ್ಯಾಣ ಕರ್ನಾಟಕ ವೃಂದ) ಅಭ್ಯರ್ಥಿಗಳ ಅಂತಿಮ/ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಈ ಆಯ್ಕೆ ಪಟ್ಟಿಗಳನ್ನು ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯ ನಂತರ ನೇಮಕಾತಿ ಆದೇಶ ಹೊರಡಿಸಲು ಇಲಾಖೆಗೆ ಕಳುಹಿಸಿಕೊಡಲಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶಗಳಂತೆ ಅಭ್ಯರ್ಥಿಗಳ ಮೂಲ ಗ್ಯಾರೇಜ್ ಸೇವಾನುಭವ ಪ್ರಮಾಣ ಪತ್ರಗಳನ್ನು ಜಿಲ್ಲಾಧಿಕಾರಿಗಳು ದೃಢೀಕರಿಸುವುದು ಕಡ್ಡಾಯವಾಗಿದ್ದು, ಅದರಂತೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು ಗ್ಯಾರೇಜ್ ಸೇವಾನುಭವ ಪ್ರಮಾಣ ಪತ್ರದ ನೈಜತೆಯ ಬಗ್ಗೆ ವರದಿ ನೀಡಿರುತ್ತಾರೆ.
ಅದರಂತೆ ವರದಿಗಳನ್ನು ಹಾಗೂ ಅಭ್ಯರ್ಥಿಗಳ ಸೇವಾನುಭವ ಪ್ರಮಾಣ ಪತ್ರಗಳು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಇರುವುದನ್ನು ಖಚಿತಪಡಿಸಿಕೊಂಡು ಹಾಗೂ ನೇಮಕಾತಿಗೆ ಸಂಬಂಧಿಸಿದ ಉಳಿದ ಎಲ್ಲಾ ಮೂಲ ದಾಖಲಾತಿಗಳ ನೈಜತೆಯ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪರಿಶೀಲಿಸಿ ಒಟ್ಟು 84 ಅಭ್ಯರ್ಥಿಗಳಿಗೆ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ನೇಮಕ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಎಷ್ಟು ಹುದ್ದೆಗಳು ಖಾಲಿ ಇವೆ?; ಸಾರಿಗೆ ಇಲಾಖೆಯಲ್ಲಿ ಇನ್ನು 286 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳು ಖಾಲಿ ಇದ್ದು, ಆ ಪೈಕಿ 76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆಯೋಗವು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಿದ್ದು, ಆಯ್ಕೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಉಳಿದಂತೆ 110 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಒಪ್ಪಿಗೆ ಸಿಕ್ಕ ಬಳಿಕ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗುತ್ತದೆ.
ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ವೇತನ 33,450-62,600 ರೂ.ಗಳು. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆ 35 ವರ್ಷಗಳು. ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ) ಅಭ್ಯರ್ಥಿಗಳಿಗೆ 38 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು.












Click it and Unblock the Notifications