ನರೇಗಾ ಯೋಜನೆಯಡಿ ಯಾವ ಕಾಮಗಾರಿಗೆ ಆದ್ಯತೆ ಸಿಗಲಿದೆ?
ಕೊಪ್ಪಳ, ಏಪ್ರಿಲ್ 04; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾರ್ಗಸೂಚಿಯ ಅನ್ವಯ ಒಂದು ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿದೆ. 2023ರ ಏಪ್ರಿಲ್ 1ರಿಂದ ಒಂದು ದಿನಕ್ಕೆ 316 ರೂ. ಕೂಲಿಯನ್ನು ನಿಗದಿಪಡಿಸಲಾಗಿದೆ. ಈ ಕೂಲಿ ಹಣವನ್ನು ಇ-ಎಫ್‌ಎಂಎಸ್ ಮುಖಾಂತರ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ 7 ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಜನರು ಉದ್ಯೋಗದ ಬೇಡಿಕೆ ನೀಡಿದ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿ ಪಾವತಿ ಮಾಡಲು ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೂಲಿಕಾರರು ನರೇಗಾ ಯೋಜನೆಯಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ಉತ್ತಮ ಮಾನವ ದಿನಗಳನ್ನು ಸೃಜಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ಮತ್ತು ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಅರ್ಹ ನೋಂದಾಯಿತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಕೂಲಿ ದರವನ್ನು 309 ರೂ.ಗಳಿಂದ 316 ರೂ.ಗಳಿಗೆ ಹೆಚ್ಚಿಸಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೋಂದಾಯಿತ ಅರ್ಹಕೂಲಿಕಾರರು ಈ ಸೌಲಭ್ಯವನ್ನು ಏಪ್ರಿಲ್ 1ರಿಂದ ಪಡೆಯಲು ಅರ್ಹರಿರುತ್ತಾರೆ.
ಯೋಜನೆಯಡಿ ಕಾಮಗಾರಿಗಳು; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು, ನೈಸರ್ಗಿಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆರ್ಥಿಕ ಭದ್ರತೆ ಒದಗಿಸುವುದು ಆಗಿದೆ. ಈ ನಿಟ್ಟಿನಲ್ಲಿ ಪ್ರತಿಗ್ರಾಮ ಪಂಚಾಯತಿಯಲ್ಲಿ ಕನಿಷ್ಟ ಒಂದರಿಂದ ಎರಡು ಸಮುದಾಯ ಆಧಾರಿತ ಮತ್ತು ಕನಿಷ್ಟ 50 ವೈಯಕ್ತಿಕ ಕಾಮಗಾರಿಗಳಲ್ಲಿ ಕೂಲಿಕಾರರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಗ್ರಾಮೀಣ ಜನರಿಗೆ ಕೆರೆ ಹೂಳೆತ್ತುವ, ಅಮೃತ ಸರೋವರ, ವೈಜ್ಞಾನಿಕ ಉಪಚಾರದ ಮುಖಾಂತರ ಜಲಸಂಜೀವಿನಿ ಯೋಜನೆಯ ಕಾಮಗಾರಿಗಳು, ಕೃಷಿ ಹೊಂಡ, ಬದು ನಿರ್ಮಾಣ, ಕೊಳವೆ ಬಾವಿ ಮರು ಪೂರಣ ಘಟಕ, ನಾಲಾ ಅಭಿವೃದ್ಧಿ, ಅರಣ್ಯೀಕರಣ, ರೇಷ್ಮೆ ಬೆಳೆ, ತೋಟಗಾರಿಕೆ, ಗೋಕಟ್ಟೆ ನಿರ್ಮಾಣ ಇನ್ನು ಹಲವು ಕಾಮಗಾರಿಗಳನ್ನು ಕೈಗೊಂಡು ಕೆಲಸ ನೀಡಲಾಗುತ್ತಿದೆ.
ಯೋಜನೆಯ ಮಾರ್ಗಸೂಚಿಯಂತೆ ಒಂದು ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿದೆ. ಈ ಕೂಲಿ ಹಣವನ್ನು ಇ-ಎಫ್‌ಎಂಎಸ್ ಮುಖಾಂತರ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ಉದ್ಯೋಗ ಚೀಟಿಗಳನ್ನು ಗ್ರಾಮ ಪಂಚಾಯತಿಗಳಲ್ಲಿ ಪಡೆಯಬೇಕು. ಕೂಲಿಕಾರರು ಉದ್ಯೋಗಕ್ಕಾಗಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಕೆಲಸವನ್ನು ಒದಿಗಿಸಲಾಗುತ್ತಿದೆ.
ನರೇಗಾ ಯೋಜನೆಯಿಂದ ದುಡಿಯೋಣ ಬಾ ಅಭಿಯಾನ ಹಾಗೂ ಮಹಿಳಾ ಕಾಯಕೋತ್ಸ ಅಭಿಯಾನಗಳನ್ನು ಏಪ್ರಿಲ್ ಮಾಹೆಯಿಂದ ಐಇಸಿ ಚಟುವಟಿಕೆಗಳ ಮುಖಾಂತರ ಹಮ್ಮಿಕೊಳ್ಳಲಾಗುತ್ತಿದ್ದು ಜಿಲ್ಲೆಯ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮ ಪಂಚಾಯತಿಗಳಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೂಲಿಕಾರರನ್ನು ಸಂಘಟಿಸಲಾಗಿದ್ದು, 40 ರಿಂದ 50 ಕೂಲಿಕಾರರಿರುವ ಕಾರ್ಮಿಕ ಸಂಘಗಳನ್ನು ರಚಿಸಿ ಆ ಸಂಘಕ್ಕೆ ಒಬ್ಬಕಾಯಕ ಬಂಧುವನ್ನು ನೇಮಿಸಲಾಗಿದೆ. ಕೂಲಿ ಬೇಡಿಕೆ ಪಡೆಯಲು ಗ್ರಾಮ ಪಂಚಾಯತಿಗಳ ವಾರ್ಡಗಳಲ್ಲಿ, ಎಸ್.ಸಿ ಅಥವಾ ಎಸ್.ಟಿ ಕಾಲೋನಿಗಳಲ್ಲಿ, ಸಣ್ಣ, ಅತಿ ಸಣ್ಣರೈತರ ಓಣಿಗಳಲ್ಲಿ ರೋಜ್‌ಗಾರ್ ದಿವಸ್‌ಗಳನ್ನು ಆಚರಿಸಿ ಕೂಲಿಕಾರರಿಂದ ಬೇಡಿಕೆಗಳನ್ನು ಪಡೆದು ಕೂಲಿಯನ್ನು ನೀಡಲಾಗುತ್ತಿದೆ.












Click it and Unblock the Notifications