KPSC Recruitment; ಕೆಪಿಎಸ್‌ಸಿ ನೇಮಕಾತಿ, ವೇತನ 1,15,000 ರೂ.

ಬೆಂಗಳೂರು, ನವೆಂಬರ್ 27; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಕಾನೂನು ಸಲಹೆಗಾರರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಅಧಿಸೂಚನೆ ಪ್ರಕಟಿಸಿದೆ.

ಆಯೋಗದ ಆದೇಶದ ಮೇರೆಗೆ ಕೆ. ಎಸ್. ಲತಾ ಕುಮಾರಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಕಾನೂನು ಸಲಹೆಗಾರ (Legal Adviser) ಅನ್ನು ಸರ್ಕಾರದ ಆದೇಶ ದಿನಾಂಕ 21/07/1994ರ ಉಲ್ಲೇಖಿತ ಆದೇಶದ ಅನ್ವಯ ನೇಮಕ ಮಾಡಿಕೊಳ್ಳಲಾಗುತ್ತಿದೆ.

KPSC Recruitment Apply For Legal Adviser Post

ಹುದ್ದೆಯ ವಿವರಗಳು; ಸರ್ಕಾರದ ಆದೇಶದನ್ವಯ ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯ ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಎರಡು ವರ್ಷಗಳ ಅವಧಿಗೆ ಕಾನೂನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ, ಸೇವಾ ವಿಷಯಗಳಲ್ಲಿ ನುರಿತ ಹಾಗೂ ಹೆಚ್ಚಿನ ಅನುಭವವುಳ್ಳ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಯ್ಕೆಗೊಂಡವರಿಗೆ ಸಂಭಾವನೆ ಮಾಸಿಕ 1,15,000 ರೂ. ಹಾಗೂ ವಾಹನ ಭತ್ಯೆಯನ್ನು ಮಾಸಿಕ 35,000 ರೂ. ನಿಗದಿಪಡಿಸಲಾಗಿದೆ.

ಈ ಸೇವೆಯನ್ನು 2 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, 1 ವರ್ಷದ ನಂತರ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ನಂತರದ ಮುಂದಿನ 1 ವರ್ಷದವರೆಗೆ ಮುಂದುವರೆಸಲಾಗುವುದು. 1958ರ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಲ್ಲಿ ಸ್ಪಷ್ಟೀಕರಿಸಿರುವಂತೆ ಸದರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವ ನಿವೃತ್ತ ಸರ್ಕಾರಿ ನೌಕರರಿಗೆ ಲಭ್ಯವಾಗುವ ರಜಾ ಸೌಲಭ್ಯಗಳು ಸದರಿಯವರಿಗೂ ಅನ್ವಯವಾಗುತ್ತದೆ.

ನಿಬಂಧನೆಗಳು/ ಷರತ್ತುಗಳು

* ಸದರಿಯವರು ಕಛೇರಿಯ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಿರಬೇಕು ಹಾಗೂ ಆಯೋಗದ ಮಾನ್ಯ ಅಧ್ಯಕ್ಷರು, ಸದಸ್ಯರುಗಳು ಹಾಗೂ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆಗೆ ಲಭ್ಯವಿರತಕ್ಕದ್ದು.

* ಕಛೇರಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಾರ್ಯದರ್ಶಿಯಿಂದ ಬರುವ ಯಾವುದೇ ಕಡತಗಳಿಗೆ ಕಾನೂನು ಸಲಹೆ ನೀಡತಕ್ಕದ್ದು.

* ಆಯೋಗದಿಂದ ಹೂಡಲ್ಪಟ್ಟ ಅಥವಾ ಆಯೋಗದ ವಿರುದ್ಧದ ಎಲ್ಲ ಪ್ರಕರಣಗಳ ಸಂಕ್ಷಿಪ್ತ ಟಿಪ್ಪಣಿ ತಯಾರಿಸುವುದು ಹಾಗೂ ಅವುಗಳ ವಿಶ್ಲೇಷಣೆಯನ್ನು ಕಾಲಕಾಲಕ್ಕೆ ಕಾರ್ಯದರ್ಶಿಯವರಿಗೆ ಮಂಡಿಸತಕ್ಕದ್ದು.

* ಆಯೋಗದ ವಿರುದ್ಧದ ಅಥವಾ ಆಯೋಗದ ಹಿತಾಸಕ್ತಿಗೆ ಧಕ್ಕೆ ಬರುವಂತಹ ಯಾವುದೇ ಪ್ರಕರಣದ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡಬಾರದು.

* ಕಾಲಕಾಲಕ್ಕೆ ಅವರಿಗೆ ವಹಿಸಲಾಗುವ ಕಾನೂನು ಪ್ರಕರಣ ಅಥವಾ ಕಾನೂನಿಗೆ ಸಂಬಂಧಿಸಿದ ಇತರ ತೊಡಕುಗಳ ನಿವಾರಣೆಯಲ್ಲಿ ಸಹಕರಿಸತಕ್ಕದ್ದು.

* ಅವರಿಗೆ ವಹಿಸಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯೋಗವನ್ನು ಪ್ರತಿನಿಧಿಸುವ ವಕೀಲರುಗಳ ಮಾರ್ಗದರ್ಶನ ಮೇಲ್ವಿಚಾರಣೆ ನಡೆಸಿ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸತಕ್ಕದ್ದು.

* ಸದರಿಯವರು ಆಯೋಗವು ತಮಗೆ ನೀಡಲಾದ ಸಿಬ್ಬಂದಿ ವರ್ಗದವರ ಸಹಯೋಗದೊಂದಿಗೆ ಕಾನೂನು ಕೋಶದ ಸುಗಮ ನಿರ್ವಹಣೆಗಾಗಿ ಸಂಪೂರ್ಣ ಜವಾಬ್ದಾರಿ ಹೊರತಕ್ಕದ್ದು.

* ದಿನಾಂಕ 01/11/2023ಕ್ಕೆ 65 ವರ್ಷ ಮೀರದ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅರ್ಜಿ ಸಲ್ಲಿಸತಕ್ಕದ್ದು.

* ಆಯ್ಕೆ ಅಧಿಸೂಚನೆ ಹೊರಡಿಸಲ್ಪಟ್ಟು, ನೇಮಕಾತಿ ಆದೇಶ ತಲುಪಿದ 7 ದಿನಗಳೊಳಗೆ ಕರ್ತವ್ಯಕ್ಕೆ ವರದಿ
ಮಾಡಿಕೊಳ್ಳತಕ್ಕದ್ದು.

* ಸದರಿಯವರ ಅವಧಿ ಮುಗಿಯುವ 1 ತಿಂಗಳ ಮೊದಲು ನೋಟೀಸ್ ನೀಡುವ ಮೂಲಕ ಬಿಡುಗಡೆಗೊಳ್ಳಬಹುದು ಅಥವಾ ಆಯೋಗದಿಂದ ಬಿಡುಗಡೆ ಮಾಡಬಹುದು.

* ಅವಧಿ ಮುಗಿಯುವ 1 ತಿಂಗಳ ಮೊದಲು ನೋಟೀಸ್ ನೀಡದ ಸಂದರ್ಭದಲ್ಲಿ ಹಾಗೂ ತಕ್ಷಣವೇ ಬಿಡುಗಡೆಗೊಳಿಸುವಂತೆ ಕೋರಿದ ಸಂದರ್ಭದಲ್ಲಿ 1 ತಿಂಗಳ ವೇತನವನ್ನು ಬಿಟ್ಟು ಕೊಡತಕ್ಕದ್ದು.

* ಸದರಿ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವವರು ಹಿಂದಿನ ಸೇವೆಯಿಂದ ವಜಾಗೊಂಡಿರಬಾರದು ಹಾಗೂ ಯಾವುದೇ ಇಲಾಖಾ ವಿಚಾರಣೆ/ ಶಿಸ್ತು ಕ್ರಮಗಳಿಂದ ಹೊರತಾಗಿರಬೇಕು.

ಸೇವಾ ವಿಷಯಗಳಲ್ಲಿ ನುರಿತ ಹಾಗೂ ಹೆಚ್ಚಿನ ಅನುಭವ ಹಾಗೂ ಮಾಹಿತಿ ಉಳ್ಳ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಅರ್ಜಿಯನ್ನು ಆಹ್ವಾನಿಸುತ್ತಿದೆ. ಆಸಕ್ತರು ಅರ್ಜಿಯೊಂದಿಗೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿಯನ್ನು ಲಗತ್ತಿಸಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಮಾಡಲು ವಿಳಾಸ; ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+