KPSC Recruitment: ಕೃಷಿ ಇಲಾಖೆಯ 672 ಹುದ್ದೆಗೆ ಅರ್ಜಿ ಆಹ್ವಾನ, ವೇತನ ವಿವರ
ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕೃಷಿ ಇಲಾಖೆಯ ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 7/10/2024 ರಿಂದ ಆನ್‌ಲೈನ್ ಮೂಲಕ ಮಾತ್ರ 7/11/2024ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕನ್ನಡ ಭಾಷಾ ಪರೀಕ್ಷೆ/ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಗವು ನಿಗದಿಪಡಿಸುವ ಯಾವುದೇ ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು ಹಾಗೂ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಆಯ್ಕೆಯಲ್ಲಿ ಅವಕಾಶವಿಲ್ಲ.
ಕೆಪಿಎಸ್‌ಸಿ ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು 86, ಸಹಾಯಕ ಕೃಷಿ ಅಧಿಕಾರಿಗಳು 586 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಅನ್ವಯ ಉಳಿಕೆ ಮೂಲ ವೃಂದದಲ್ಲಿ ಗ್ರೂಪ್- 'ಬಿ' ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಅರ್ಜಿ ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ. ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ ಅಥವ ಅದನ್ನು ಆಯೋಗ ನಡೆಸುವ ಇತರ ಪರೀಕ್ಷೆಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.
ಅರ್ಜಿ ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ., ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.
ವಯೋಮಿತಿ, ವೇತನ ಮಾಹಿತಿ: ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು. ರಾಜ್ಯ ಸರ್ಕಾರ 10/9/2024ರದು ಜಾರಿ ಮಾಡಿರುವ ಆದೇಶದಲ್ಲಿ ಎಲ್ಲಾ ಪ್ರವರ್ಗಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ. ಅದನ್ನು ಅಳವಡಿಸಿಕೊಂಡ ಬಳಿಕ ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆ 38 ವರ್ಷ, ಪ್ರವರ್ಗ 2ಎ/ 2ಬಿ/ 3ಎ/ 3ಬಿ 41 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 43 ವರ್ಷಗಳು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕೃಷಿ ಅಧಿಕಾರಿಗಳು ವೇತ ಶ್ರೇಣಿ 43,100 ರಿಂದ 83,900 ರೂ. ಮತ್ತು ಸಹಾಯಕ ಕೃಷಿ ಅಧಿಕಾರಿಗಳು 40,900 ರಿಂದ 78,200 ರೂ.ಗಳು.
ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು
* ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆ ನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ಸ್ವೀಕಾರ ಮಾಡುವುದಿಲ್ಲ.
* ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ/ ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದು, (ದಾಖಲೆಗಳು ಸ್ಪಷ್ಟವಾಗಿರುಬೇಕು) ತಪ್ಪಿದಲ್ಲಿ ಅವರ ಮೀಸಲಾತಿ/ ಅಭ್ಯರ್ಥಿತ್ವವನ್ನು ತಿರಸ್ಕರಿಸಲಾಗುವುದು.
* ಅರ್ಜಿ ಸಲ್ಲಿಸುವ ಸಮಯದಲ್ಲಿ ಮೀಸಲಾತಿಯನ್ನು ಕೋರದೆ ತದನಂತರದಲ್ಲಿ ಮೀಸಲಾತಿಯನ್ನು ಪರಿಗಣಿಸುವಂತೆ ಕೋರಿ ಸಲ್ಲಿಸುವ ಮನವಿ/ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.
* ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ ಸಹಿ /ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ UPI ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು ಭಾವಚಿತ್ರ ಸಹಿಯನ್ನು ಅಪ್ಲೋಡ್ ಮಾಡದೇ ಇರುವ/ ಅಸ್ಪಷ್ಟ ದಾಖಲೆ ಅಪ್‌ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ವಿದ್ಯಾರ್ಹತೆಯ ವಿವರ, ಹೆಚ್ಚಿನ ಮಾಹಿತಿ, ಅಧಿಸೂಚನೆಗಾಗಿ ಅಭ್ಯರ್ಥಿಗಳು https://kpsc.kar.nic.in/ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ವಿಭಾಗದಲ್ಲಿ notification for the post of AO and AAo In the department of Agriculture(RPC) ಮೇಲೆ ಕ್ಲಿಕ್ ಮಾಡಿ.












Click it and Unblock the Notifications