KAS Recruitment: ಕೆಎಎಸ್ ನೇಮಕಾತಿ ಅಭ್ಯರ್ಥಿಗಳಿಗೆ ಸಿಗಲಿದೆ ಸಿಹಿಸುದ್ದಿ
ಬೆಂಗಳೂರು, ಫೆಬ್ರವರಿ 20: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದ (ಕೆಎಎಸ್ ನೇಮಕಾತಿ) ಪೂರ್ವಭಾವಿ ಪರೀಕ್ಷೆ ಭಾರೀ ಚರ್ಚೆಗೆ ಕಾರಣವಾಗಿದೆ. ಪೂರ್ವಭಾವಿ ಪರೀಕ್ಷೆ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದರೆ ಇದರ ಬಗ್ಗೆಯೂ ಆಕ್ಷೇಪಣೆಗಳು ಕೇಳಿ ಬರುತ್ತಿವೆ. ಅಭ್ಯರ್ಥಿಗಳಿಗೆ ಶೀಘ್ರವೇ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ.
ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈಗ ಈ ಅನುಪಾತವನ್ನು ಹೆಚ್ಚಳ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರದ ಯಡವಟ್ಟು ಭಾರೀ ಸುದ್ದಿಯಾಗಿತ್ತು. ಆಗಸ್ಟ್ 2024, ಡಿಸೆಂಬರ್ 29 ಎರಡು ಬಾರಿ ಪರೀಕ್ಷೆ ನಡೆಸಿದರೂ ಸಹ ಕನ್ನಡ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿದೆ.
ಅನುಪಾತ ಹೆಚ್ಚಳದ ನಿರೀಕ್ಷೆ: ಆದರೆ ಈಗ ಮರು ಪರೀಕ್ಷೆ ನಡೆಸುವ ಬದಲು ಮುಖ್ಯ ಪರೀಕ್ಷೆಯ 1:15ರ ಅನುಪಾತವನ್ನು ಹೆಚ್ಚಳ ಮಾಡಲು ಕೆಪಿಎಸ್‌ಸಿ ಚಿಂತನೆ ನಡೆಸಿದೆ. ಇಂತಹ ತೀರ್ಮಾನಕ್ಕೆ ಸರ್ಕಾರ ಒಪ್ಪಿಗೆ ನೀಡಿದರೆ ಈ ಅನುಪಾತ1:20 ಅಥವ 1:25 ಆಗುವ ಸಾಧ್ಯತೆ ಇದೆ. ಅನುಪಾತ ಹೆಚ್ಚಳವಾದರೆ ಇನ್ನಷ್ಟು ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ.
ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದ ಕೆಪಿಎಸ್‌ಸಿ ಆಯೋಗದ ಅಧಿಸೂಚನೆ ದಿನಾಂಕ 26-02-2024ರಲ್ಲಿ ಹಾಗೂ ತಿದ್ದುಪಡಿ ಅಧಿಸೂಚನೆಗಳನ್ವಯ ಅಧಿಸೂಚಿಸಲಾದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ 384 ಹುದ್ದೆಗಳಿಗೆ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳನ್ವಯ ಪೂರ್ವಭಾವಿ ಮರುಪರೀಕ್ಷೆಯನ್ನು ದಿನಾಂಕ 29-12-2024ರಂದು ನಡೆಸಲಾಗಿತ್ತು ಎಂದು ತಿಳಿಸಿತ್ತು.
ಈ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಹೇಳಿತ್ತು. ಈಗಾಗಲೇ ಪೂರ್ವಭಾವಿ ಮರು ಪರೀಕ್ಷೆ ಮಾಡುವ ಬೇಡಿಕೆಯನ್ನು ಕೆಪಿಎಸ್‌ಸಿ ತಳ್ಳಿ ಹಾಕಿದೆ. ಮರು ಪರೀಕ್ಷೆ ಬದಲು ಅನುಪಾತ ಹೆಚ್ಚಿಸುವ ನಿರೀಕ್ಷೆ ಇದೆ.
ಹಲವು ಅಭ್ಯರ್ಥಿಗಳು ಕೆಪಿಎಸ್‌ಸಿ ನಡೆಸಿದ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಪೂರ್ವಭಾವಿ ಪರೀಕ್ಷೆಯನ್ನು ಪ್ರಶ್ನೆ ಮಾಡಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಮೊರೆ ಹೋಗಿದ್ದಾರೆ. ಅಲ್ಲದೇ ಪ್ರತಿಪಕ್ಷ ಬಿಜೆಪಿ ಕೆಪಿಎಸ್‌ಸಿ ಪರೀಕ್ಷೆ ವಿಚಾರ ಮುಂದಿಟ್ಟುಕೊಂಡು ಸರ್ಕಾರವನ್ನು ಟೀಕಿಸುತ್ತಿದೆ.
ಅಭ್ಯರ್ಥಿಗಳಿಗೆ ಅನ್ಯಾಯವಾಗಿಲ್ಲ: ಪ್ರಶ್ನೆ ಪತ್ರಿಕೆ ಯಡವಟ್ಟು ಕಾರಣ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಈ ಕುರಿತು ಕೆಪಿಎಸ್‌ಸಿ ಸ್ಪಷ್ಟನೆಯನ್ನು ನೀಡಿತ್ತು. 2023-24ನೇ ಸಾಲಿನಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವುದಿಲ್ಲವೆಂದು ಆಯೋಗವು ಸ್ಪಷ್ಟಪಡಿಸುತ್ತದೆ ಎಂದು ಹೇಳಿತ್ತು.
ಆಯೋಗ ಪ್ರಕಟಿಸಿರುವ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆಯೆಂದು ಸಮಾಜದ ಕೆಲವೊಂದು ವರ್ಗಗಳು ಆರೋಪಿಸಿದ್ದು, ಈ ವಿಷಯದ ಕುರಿತು ಕರ್ನಾಟಕ ಲೋಕಸೇವಾ ಆಯೋಗವು ಹಿಂದಿನ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಗಳ ಮಾಹಿತಿಯನ್ನು ಪರಿಶೀಲಿಸಿದೆ.
2017-18ರಲ್ಲಿ ಒಟ್ಟು 106 ಹುದ್ದೆಗಳು ಮತ್ತು 2023-24ರಲ್ಲಿ 384 ಹುದ್ದೆಗಳಿದ್ದು, ಇದಕ್ಕೆ ಸಂಬಂಧಿಸಿದಂತೆ ಈ ಹುದ್ದೆಗಳಿಗೆ 2017-18ರಲ್ಲಿ ಅನುಪಾತ 1:20 ಇದ್ದು, 2023-24ರ ಹುದ್ದೆಗಳಿಗೆ ಅನುಪಾತ 1:15 ಇರುತ್ತದೆ. ಮುಂದುವರೆದು, ಈ ವಿಷಯದ ಬಗ್ಗೆ ತುಲನಾತ್ಮಕ ದತ್ತಾಂಶ ವಿಶ್ಲೇಷಣೆಯನ್ನು ನಡೆಸಿದ ನಂತರ 2023-24ರಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯನ್ನು ತೆಗೆದುಕೊಂಡು ಮುಖ್ಯ ಪರೀಕ್ಷೆಗೆ ಅರ್ಹರಾದ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಸಂಖ್ಯೆಗೂ, ಗೆಜೆಟೆಡ್ ಪ್ರೊಬೇಷನರ್ 2017-18ರಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯನ್ನು ತೆಗೆದುಕೊಂಡು ಅರ್ಹರಾಗಿದ್ದವರ ಸಂಖ್ಯೆಗೂ ಹೋಲಿಸಿದಲ್ಲಿ 2023-24ರಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಆಯ್ಕೆ ಅನುಪಾತವು ಶೇ 6.50ರಷ್ಟು ಹೆಚ್ಚಳವಾಗಿರುವುದು ಕಂಡು ಬಂದಿರುತ್ತದೆ ಎಂದು ಹೇಳಿತ್ತು.












Click it and Unblock the Notifications