KSET 2024: ಕೆಸೆಟ್ ಪರೀಕ್ಷೆ ವೇಳಾಪಟ್ಟಿ ಪ್ರಕಟ, ಶುಲ್ಕ, ಅರ್ಹತೆ ವಿವರ
ಬೆಂಗಳೂರು, ಜುಲೈ 13: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್)-2024ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ತಾತ್ಕಾಲಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಶನಿವಾರ ಘೋಷಣೆ ಮಾಡಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಕೆಸೆಟ್-2024ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು. ಬಳಿಕ ಕೆಇಎ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಜುಲೈ 13ರ ಶನಿವಾರವೇ ಅಧಿಸೂಚನೆ ಪ್ರಕಟವಾಗಿದೆ. ಅರ್ಜಿ ಸಲ್ಲಿಕೆ ಮಾಡಲು 22/8/2024 ಕೊನೆಯ ದಿನವಾಗಿದೆ.

ವೇಳಾಪಟ್ಟಿ ವಿವರ, ಅರ್ಹತೆಗಳು: ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024 (ಕೆಸೆಟ್ 2024) ಅನ್ನು 24ನೇ ನವೆಂಬರ್ 2024ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಕೆಸೆಟ್-2024ರ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯಂತೆ ಅಧಿಸೂಚನೆ ಹೊರಡಿಸಲಾಗುವ ದಿನಾಂಕ 13/07/2024. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 22/07/2024. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 22/08/2024. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 26/08/2024 ಮತ್ತು ಪರೀಕ್ಷಾ ದಿನಾಂಕ 24/11/2024 ಆಗಿದೆ.
ಅಭ್ಯರ್ಥಿಗಳು ಕೆಸೆಟ್-2024ಕ್ಕೆ Online ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. KEA ವೆಬ್‌ಸೈಟ್ http://kea.kar.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಗಮನವಿಟ್ಟು ಓದಿ ನಂತರ ಅರ್ಜಿಯನ್ನು ಭರ್ತಿಮಾಡಬೇಕು ಎಂದು ತಿಳಿಸಿದೆ.
ಕೆಸೆಟ್-2024ರ ಪರೀಕ್ಷೆಯನ್ನು 41 ವಿಷಯಗಳಲ್ಲಿ ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳ ವಿವರಗಳನ್ನು ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ/ ಪ್ರಥಮ ದರ್ಜೆ ಪದವಿ ಕಾಲೇಜು/ ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ.
ವಿಕಲಚೇತನ, ತೃತೀಯ ಲಿಂಗ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರೆ ಹಿಂದುಳಿದ ವರ್ಗದ (ಪ್ರವರ್ಗ-I, IIA, IIB, IIIA, ಮತ್ತು IIIB) ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದವರ ಪಟ್ಟಿಯಲ್ಲಿರುವಂತಿರಬೇಕು.
ಅರ್ಹತಾ ನಿಬಂಧನೆಗಳು
* ಅಭ್ಯರ್ಥಿಗಳು ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯ/ ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ 55ರಷ್ಟು ಅಂಕಗಳನ್ನು (ಪೂರ್ಣಾಂಕಿತ ಗೊಳಿಸಿರಬಾರದು) ಪಡೆದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಇತರೆ ಹಿಂದುಳಿದ ಅಭ್ಯರ್ಥಿಗಳು (ಪ್ರವರ್ಗ-I, IIA, IIB, IIIA, IIIB), ವಿಕಲಚೇತನರು ಮತ್ತು ತೃತೀಯ ಲಿಂಗ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇ 50ರಷ್ಟು (ಪೂರ್ಣಾಂಕಿತ ಗೊಳಿಸಿರಬಾರದು) ಅಂಕಗಳನ್ನು ಪಡೆದಿರಬೇಕು.
* ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಪ್ರಸ್ತುತ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕವಾಗಿ ಮಾತ್ರ ಪ್ರವೇಶ ನೀಡಲಾಗುವುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಯನ್ನು, ಸಾಮಾನ್ಯ ವರ್ಗದವರು ಶೇ 55ರಷ್ಟು ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-I, IIA, IIB, IIIA, ಮತ್ತು IIIB, ವಿಕಲಚೇತನರು, ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು, ಶೇ 50ರಷ್ಟು ಅಂಕ ಪಡೆದು, ಅರ್ಹತೆ ಹೊಂದಿ ಕೆಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷದೊಳಗಾಗಿ ಅವರ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಿದರೆ ಮಾತ್ರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. ಇಲ್ಲವಾದಲ್ಲಿ ಅಂತಹವರ ಅರ್ಹತೆಯನ್ನು ರದ್ದುಪಡಿಸಲಾಗುವುದು.
* ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಅಭ್ಯರ್ಥಿಗಳು ಕೆಸೆಟ್ (KSET) ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಪ್ರಸ್ತುತ ಕೆಸೆಟ್ ಪ್ರಕಟಣೆಯಲ್ಲಿ ಇಲ್ಲದಿರುವ ವಿಷಯಗಳಿಗೆ, ಅಭ್ಯರ್ಥಿಗಳು ವರ್ಷದಲ್ಲಿ ಎರಡು ಬಾರಿ ನಡೆಯುವ ಯು.ಜಿ.ಸಿ, ಎನ್.ಇ.ಟಿ ಅಥವಾ ಯು.ಜಿ.ಸಿ-ಸಿ.ಎಸ್.ಐ.ಆರ್-ಎನ್.ಇ.ಟಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
* ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಹೊರತುಪಡಿಸಿ, ಮೀಸಲಾತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿಯೇ ಸ್ಪಷ್ಟವಾಗಿ ನಮೂದಿಸಬೇಕು. SC, ST, CAT-1, IIA, IIB, IIIA, ಮತ್ತು IIIB ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರಗಳು ನೀಡುವ ಪ್ರವರ್ಗ ಪ್ರಮಾಣಪತ್ರಗಳನ್ನು ಲಗತ್ತಿಸಬೇಕು. ಈ ಅಭ್ಯರ್ಥಿಗಳ ಪ್ರಮಾಣ ಪತ್ರಗಳು ಯಾವುದೇ ಹಂತದಲ್ಲಾದರೂ, ಸುಳ್ಳು ಎಂದು ಸಾಬೀತಾದರೆ ಅವರ ಅಭ್ಯರ್ಥಿತ್ವವನ್ನು ಮುನ್ಸೂಚನೆ ಇಲ್ಲದೆ ರದ್ದುಗೊಳಿಸಲಾಗುತ್ತದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
* ಹೊರರಾಜ್ಯದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮೀಸಲಾತಿ ಇರುವುದಿಲ್ಲ. ಅವರು ಸ್ನಾತಕೋತ್ತರ ಪರೀಕ್ಷೆಯಲ್ಲಿ ನಿಗಧಿತ ಕನಿಷ್ಟ ಶೇ 55 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ ಸಾಮಾನ್ಯ ವರ್ಗದಡಿಯಲ್ಲಿ ಪ್ರವೇಶಾತಿಗೆ ನೋಂದಾಯಿಸಬಹುದು. SC/ ST/OBC ಅರ್ಹತೆಯ ನಿಯಮವು ಕೇವಲ ಕರ್ನಾಟಕದ SC/ST/OBC ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.
* ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.
* ಪರೀಕ್ಷಾ ಶುಲ್ಕ. ಸಾಮಾನ್ಯ ವರ್ಗ, ಪ್ರವರ್ಗ II-A, II-B, III-A, III-B ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆ 1,000 ರೂ.ಗಳು. ಪ್ರವರ್ಗ-I, SC, ST, PwD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ 700 ರೂ.ಗಳು.
ಹೆಚ್ಚಿನ ಮಾಹಿತಿ, ಅಧಿಸೂಚನೆ ಸಂಪೂರ್ಣ ವಿವರಗಳಿಗೆ http://kea.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.












Click it and Unblock the Notifications