ಪಿಎಸ್‌ಐ ನೇಮಕಾತಿ ಆಗುವ ತನಕ ಸ್ವತಂತ್ರ ಪ್ರಭಾರ ವ್ಯವಸ್ಥೆ, ಆದೇಶ
ಬೆಂಗಳೂರು, ಆಗಸ್ಟ್ 27: ಕರ್ನಾಟಕ ಪೊಲೀಸ್ ಇಲಾಖೆಯ ಪಿಎಸ್‌ಐ ವೃಂದದ ನೇಮಕಾತಿ ಪ್ರಕ್ರಿಯೆಯು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದ್ದರಿಂದ ಪೊಲೀಸ್ ಇಲಾಖೆ ಕೆ. ಸಿ. ಎಸ್. ಆರ್. ನಿಯಮ 32ರಡಿಯಲ್ಲಿ ಸ್ವತಂತ್ರ ಪ್ರಭಾರ ನೀಡುವ ಕುರಿತು ಆದೇಶ ಹೊರಡಿಸಿದೆ.
ಸೌಮೇಂದು ಮುಖರ್ಜಿ, ಐಪಿಎಸ್, ಎ. ಡಿ. ಜಿ. ಪಿ (ಆಡಳಿತ) ಅವರ ಪರವಾಗಿ ಈ ಆದೇಶ ಹೊರಡಿಸಲಾಗಿದೆ. ಡಿಜಿ ಮತ್ತು ಐಜಿಪಿ ಅವರಿಂದ ಈ ಆದೇಶ ಅನುಮೋದಿಸ್ಪಲ್ಟಟ್ಟಿದೆ ಎಂದು ತಿಳಿಸಲಾಗಿದೆ.

ಪಿಎಸ್‌ಐ ವೃಂದದ ನೇಮಕಾತಿ ಪ್ರಕ್ರಿಯೆಯು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಸರ್ಕಾರವು ಉಲ್ಲೇಖಿತ ಪತ್ರದಲ್ಲಿ ಅನುಮತಿಸಿರುವಂತೆ ಪ್ರಸ್ತುತ ಇಲಾಖೆಯಲ್ಲಿ ರಿಕ್ತವಿರುವ ನೇರ ನೇಮಕಾತಿ ಪಿ.ಎಸ್.ಐ ಹುದ್ದೆಗಳನ್ನು ಸರ್ಕಾರದ ಅಧಿಕೃತ ಜ್ಞಾಪನ ಪತ್ರ ದಿನಾಂಕ 10/12/2021ರಲ್ಲಿ ಕಲ್ಪಿಸಿರುವ ಅವಕಾಶದಡಿ ತಾಕ್ಕಾಲಿಕವಾಗಿ 6 ತಿಂಗಳವರೆಗೆ ಷರತ್ತಿಗೊಳಪಟ್ಟು ನೇಮಕಾತಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮ 32ರ ಅಡಿಯಲ್ಲಿ ಕಮೀಷನರೇಟ್/ ವಲಯದಲ್ಲಿನ ನೇರ ನೇಮಕಾತಿ ಹುದ್ದೆಗಳ ಎದುರಾಗಿ ಸ್ವತಂತ್ರ ಪ್ರಭಾರ ವ್ಯವಸ್ಥೆ ಮುಖಾಂತರ ಭರ್ತಿ ಮಾಡಲು ಸೂಚಿಸಲಾಗಿದೆ ಎಂದು ಆದೇಶ ಹೇಳಿದೆ. ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಎಂದು ವಿವರಣೆ ನೀಡಲಾಗಿದೆ.
ಎಷ್ಟು ಹುದ್ದೆಗಳು?; ಸರ್ಕಾರದ ಆದೇಶದಲ್ಲಿ ಒಟ್ಟು 577 ಹುದ್ದೆಗಳನ್ನು ಸ್ವತಂತ್ರ ಪ್ರಭಾರ ವ್ಯವಸ್ಥೆ ಮೂಲಕ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಇವುಗಳಲ್ಲಿ ಬೆಂಗಳೂರು ನಗರ 153, ಮಂಗಳೂರು ನಗರ 16, ಬೆಳಗಾವಿ ನಗರ 4, ಕಲಬುರಗಿ ನಗರ 15 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.
ಉಳಿದಂತೆ ಕೇಂದ್ರ ವಲಯ 125, ಪೂರ್ವ ವಲಯ 47, ಪಶ್ಚಿಮ ವಲಯ 4, ಆಗ್ನೇಯ ವಲಯ 21, ದಕ್ಷಿಣ ವಲಯಕ್ಕೆ 93 ಹುದ್ದೆಗಳು. ಎನ್‌ಸಿಆರ್, ಕಲಬುರಗಿ 13, ಬಳ್ಳಾರಿ 61 ಮತ್ತು ರೈಲ್ವೇ 15 ಹುದ್ದೆಗಳಿಗೆ ಅನುಮತಿ ಕೊಡಲಾಗಿದೆ.
ನಿಯಮ 32ರಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸುವ ಮುನ್ನ ಪರಿಗಣಿಸಬೇಕಾದ ಷರತ್ತುಗಳ ಮಾಹಿತಿಯನ್ನು ಸಹ ನೀಡಲಾಗಿದೆ.
* ಸ್ವತಂತ್ರ ಪ್ರಭಾರದಲ್ಲಿರಿಸಲು ಪರಿಗಣಿಸುವ ಸಿಬ್ಬಂದಿಯು ಜೇಷ್ಟತೆಗೆ ಅನುಗುಣವಾಗಿ ಮುಂಬಡ್ತಿಗೆ ಅರ್ಹರಿರಬೇಕು.
* ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಮುಂಬಡ್ತಿಗೆ ನಿಗದಿಪಡಿಸಿರುವ ಅರ್ಹತೆಯನ್ನು ಪೂರೈಸಿರಬೇಕು.
* ಸದರಿ ಸ್ವತಂತ್ರ ಪ್ರಭಾರ ವ್ಯವಸ್ಥೆಯನ್ನು ಮುಂಬಡ್ತಿ ನೀಡುವ ಸಕ್ಷಮ ಪ್ರಾಧಿಕಾರವೇ ಹೊರಡಿಸತಕ್ಕದ್ದು.
* ಸದರಿ ನಿಯಮ 32ರಡಿ ಮಾಡಲಾಗುವ ಸ್ವತಂತ್ರ ಪ್ರಭಾರ ವ್ಯವಸ್ಥೆಯು ಕ್ರಮಬದ್ಧ ಮುಂಬಡ್ತಿಗೆ ಬದಲಿ ಮಾಡುವ ಒಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಅದು ಮುಂಬಡ್ತಿ ಅಲ್ಲ. ಸ್ವತಂತ್ರ ಪ್ರಭಾರದಲ್ಲಿರಿಸುವ ಅದೇಶವನ್ನು ಯಾವುದೇ ಸಂದರ್ಭದಲ್ಲಾದರೂ ಹಿಂದಕ್ಕೆ ಪಡೆಯಲು ಆಸ್ಪದವಿರುತ್ತದೆ.
* ನೇರ ನೇಮಕಾತಿ ಹುದ್ದೆಗಳ ಎದುರಾಗಿ ಸ್ವತಂತ್ರ ಪ್ರಚಾರ ವ್ಯವಸ್ಥೆ ಮುಖಾಂತರ ಭರ್ತಿ ಮಾಡಲಾದ ಹುದ್ದೆಗಳಿಗೆ ನೇರ ನೇಮಕಾತಿ ಮುಖಾಂತರ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿದ ತಕ್ಷಣ ಸದರಿ ಸ್ವತಂತ್ರ ಪ್ರಭಾರ ವ್ಯವಸ್ಥೆ ರದ್ದುಗೊಳ್ಳುತ್ತದೆ.
* ಸ್ವತಂತ್ರ ಪ್ರಭಾರದ ಸೇವೆಯನ್ನು ಪ್ರಭಾರದಲ್ಲಿರಿಸಿದ ವೃಂದದ ಜೇಷ್ಟತೆಯಲ್ಲಿ ಪರಿಗಣಿಸಲು ನಿಯಮಗಳಲ್ಲಿ ಅವಕಾಶಗಳಿರುವುದಿಲ್ಲ.
* ನೇರ ನೇಮಕಾತಿ ಹುದ್ದೆಗಳ ಎದುರಾಗಿ ಸ್ವತಂತ್ರ ಪ್ರಭಾರ ನಿರ್ವಹಿಸಿದ ಪೂರ್ವನ್ವಯ ಮುಂಬಡ್ತಿಗೂ ಸಹ ಅವಕಾಶ ಇರುವುದಿಲ್ಲ.
* ಪೂರ್ವಾನ್ವಯ ಮುಂಬಡ್ತಿಗೆ ಹಕ್ಕೊತ್ತಾಯ ಮಾಡಲು ಬರುವುದಿಲ್ಲ.
* ಸದರಿ ಸ್ವತಂತ್ರ ಪ್ರಭಾರ ವ್ಯವಸ್ಥೆಯಲ್ಲಿ ಮುಂಬಡ್ತಿಗೆ ಅಳವಡಿಸುವ ರೋಸ್ಟರ್/ ಮೀಸಲಾತಿಯನ್ನು ಅಳವಡಿಸುವುದು.
* ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಹುದ್ದೆಗಳನ್ನು ಮತ್ತು ಕಲ್ಯಾಣ ಕರ್ನಾಕೇತರ ಹುದ್ದೆಗಳನ್ನು ನಿರ್ದಿಷ್ಟ ಪಡಿಸಿರುವ ಶೇಕಡವಾರು ಪ್ರಮಾಣದಲ್ಲಿ ಪ್ರತ್ಯೇಕವಾಗಿ ಪರಿಗಣಿಸಿ ಸ್ವತಂತ್ರ ಪ್ರಭಾರದಲ್ಲಿರಿಸುವುದು.
ಸಂಬಂಧಪಟ್ಟ ವಲಯ/ ಕಮೀಷನರೇಟ್‌ಗಳಲ್ಲಿ ಆಯಾ ವಲಯ/ ಕಮೀಷನರೇಟ್‌ಗಳಲ್ಲಿ ರಿಕ್ತವಿರುವ ನೇರ ನೇಮಕಾತಿ ಪಿಎಸ್‌ಐ ಹುದ್ದೆಗಳನ್ನು ಮೇಲ್ಕಂಡ ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ 6 ತಿಂಗಳ ಅವಧಿಯವರೆಗೆ ಸ್ವತಂತ್ರ ಪ್ರಭಾದಲ್ಲಿಸಿರುವುದು ಹಾಗೂ ಕೈಗೊಂಡ ಕ್ರಮದ ಬಗ್ಗೆ ಈ ಕಛೇರಿಗೆ ಪಾಲನಾ ವರದಿಯನ್ನು ಕಳುಹಿಸಿಕೊಡುವುದು ಎಂದು ಆದೇಶ ಸೂಚಿಸಿದೆ.












Click it and Unblock the Notifications