Get Updates
Get notified of breaking news, exclusive insights, and must-see stories!

Jobs: ಸರ್ಕಾರಿ ನೌಕರಿ ಕನಸು ಗಗನಕುಸುಮ: ರಾಜ್ಯದಲ್ಲಿ ಖಾಲಿ ಇವೆ 2.84 ಲಕ್ಷ ಹುದ್ದೆಗಳು, ಕಾರಣವೇನು? ಇಲಾಖಾವಾರು ಮಾಹಿತಿ

ಬೆಂಗಳೂರು: ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ, ಸರ್ಕಾರಿ ಹುದ್ದೆ ಅಲಂಕರಿಸಬೇಕೆಂಬ ಹೆಬ್ಬಯಕೆಯೊಂದಿಗೆ ಹಗಲು ರಾತ್ರಿ ಓದಿ ಅಧಿಕೃತ ನೇಮಕಾತಿ ಆಹ್ವಾನದ ನಿರೀಕ್ಷೆಯಲ್ಲಿದ್ದರು. ಆದರೆ ರಾಜ್ಯ ಸರ್ಕಾರ ವರ್ಷಗಳಿಂದ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೇ ಕಾಲಹರಣ ಮಾಡುತ್ತಿದೆ. ಯುವ ಸಮುದಾಯದ ಬಗ್ಗೆ ಕಿಚಿಂತ್ತು ಕಾಳಜಿ ತೋರುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಧಾರವಾಡದಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯಿತು. ಇದು ನೇಮಕಾತಿ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡುವಂತೆ ಮಾಡಿದೆ.

ಸ್ವಂತ ಊರು ತೊರೆದು ಊಟ, ನೀರು, ನಿದ್ದೆ ಇಲ್ಲದೇ, ಪಿಜಿ-ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ನೌಕರಿಯ ಕನಸು ಕಾಣುವವರಿಗೆ ಸರ್ಕಾರಿ ಉದ್ಯೋಗವು ಗಗನಕುಸುಮವಾಗಿದೆ. ರಾಜ್ಯದಲ್ಲಿ ಬರೋಬ್ಬರಿ 2.84 ಲಕ್ಷ ಸರ್ಕಾರಿ ಉದ್ಯೋಗಿಗಳು ಖಾಲಿ ಉಳಿದಿವೆ. ಇದಕ್ಕೆ ಪ್ರಮುಖ ಕಾರಣವೇನು, ಪ್ರತಿಭಟನಾಕಾರರ ಆಗ್ರಹವೇನು? ಮುಖ್ಯವಾಗಿ ಇಲಾಖಾವಾರು ಭರ್ತಿ ಆಗಬೇಕಿರುವ ಹುದ್ದೆಗಳು ಎಷ್ಟು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Karnataka Job Crisis

ಕರ್ನಾಟಕದಲ್ಲಿ ನವೆಂಬರ್ 2024 ರಿಂದ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಸ್ಥಗಿತಗೊಂಡಿದೆ. ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ (ಎಕೆಎಸ್ಎಸ್ಎ) ಸೇರಿದಂತೆ ವಿಪಕ್ಷಗಳು, ಇನ್ನಿತರ ಸಂಘಟನೆಗಳು ಈ ಬಗ್ಗೆ ಆಗ್ರಹಿಸಿದರೂ ಸಹಿತ ಸರ್ಕಾರ ಭರವಸೆ ನೀಡತ್ತಲೇ ಬಂದಿದೆ ವಿನಃ ನೇಮಕಾತಿಗೆ ಮುಂದಾಗಲಿಲ್ಲ. ಸರ್ಕಾರದ ಈ ಧೋರಣೆ ಖಂಡಿಸಿ ಕಳೆದ ಆರು ತಿಂಗಳಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ (ಎಕೆಎಸ್ಎಸ್ಎ) ನೇತೃತ್ವದಲ್ಲಿ ಧಾರವಾಡದಲ್ಲಿ ಎರಡನೇ ಬಾರಿಗೆ ಬೃಹತ್ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಯ ಕಾವು ಮತ್ತೊಮ್ಮೆ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಕುರಿತು ಗಂಭೀರವಾಗಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕರ್ನಾಟಕ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳು ಶೀಘ್ರವೇ, ಪಾರದರ್ಶಕವಾಗಿ ಭರ್ತಿ ಮಾಡಿಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಫೆ.24 ರಂದು ನಡೆದಿದ್ದ ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕ ಪ್ರದೇಶದ ನೂರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು. ಸರ್ಕಾರಿ ಉದ್ಯೋಗ ಕೆಲವರಿಗೆ ಪ್ರತಿಷ್ಠೆಯಾದರೆ ಅದೆಷ್ಟೋ ಮಂದಿಗೆ ಹೊಟ್ಟೆಪಾಡು. ವರ್ಷಗಳಿಂದ ಕೂತು ಓದುವ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕಾದರೆ ವಯಸ್ಸಿನ ಮೀತಿ ಮೀರುವ ಮುನ್ನವೇ ಸರ್ಕಾರ ತ್ವರಿತವಾಗಿ ನೇಮಕಾತಿ ಆರಂಭಿಸಬೇಕಿದೆ. ಈಗಲೇ ತಡವಾದರೆ ಸಾವಿರಾರು ಅಭ್ಯರ್ಥಿಗಳು ಅರ್ಹತೆ ಇದ್ದರೂ ವಯಸ್ಸಿನ ಆಧಾರದಲ್ಲಿ ಅರ್ಜಿ ಹಾಕಲು ಅನರ್ಹರಾಗುವ ಆತಂಕದಲ್ಲಿದ್ದಾರೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಖಾಲಿ ಹುದ್ದೆಗಳು ದ್ವಿಗುಣಗೊಳ್ಳಲು ಕಾರಣವೇನು?

ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ, ನಿವೃತ್ತರ ಸಂಖ್ಯೆ ಹೆಚ್ಚಾಗಿದ್ದು ಮತ್ತು ನೇಮಕಾತಿ ವಿಳಂಬವಾಗಿದ್ದು ಇವೆರಡರ (ನಿವೃತ್ತರು ಮತ್ತು ನೇಮಕಾತಿ ಸಂಖ್ಯೆ) ಮಧ್ಯದಲ್ಲಿ ಅಂತರ ಹೆಚ್ಚಾಗುವಂತೆ ಮಾಡಿತು. ಹೀಗಾಗಿ ವರ್ಷದಿಂದ ವರ್ಷಕ್ಕೆ ಖಾಲಿ ಹುದ್ದೆಗಳ ಪ್ರಮಾಣ ದ್ವಿಗುಣಗೊಂಡಿವೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತವೆ. 2015 ರಲ್ಲಿ, ವಿವಿಧ ಇಲಾಖೆಗಳಲ್ಲಿ ಅಂದಾಜು 1.5-1.7 ಲಕ್ಷ ಹುದ್ದೆಗಳು ಖಾಲಿ ಇದ್ದವು. ಕಳೆದ ಅವಧಿಯಲ್ಲಿ ಖಾಲಿ ಇದ್ದ ಹುದ್ದೆಗಳು ಜನವರಿಯಲ್ಲಿ ದ್ವಿಗುಣಗೊಂಡವು. ರಾಜ್ಯ ಶಾಸಕಾಂಗದ ಜಂಟಿ ಅಧಿವೇಶನದಲ್ಲಿ ಸರ್ಕಾರದ ಪ್ರತಿನಿಧಿಗಳೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದು ಮಾಹಿತಿ ನೀಡಿದ್ದರು.

4 ಲಕ್ಷದತ್ತ ಸರ್ಕಾರಿ ಖಾಲಿ ಹುದ್ದೆಗಳು

ರಾಜ್ಯದ ವಿವಿಧ ನಿಗಮಗಳು ಹಾಗೂ ಮಂಡಳಿಗಳಲ್ಲಿ ಸುಮಾರು 1.01 ಲಕ್ಷ ಉದ್ಯೋಗ, ವಿಶ್ವವಿದ್ಯಾಲಯಗಳಲ್ಲಿ 14,677 ಖಾಲಿ ಹುದ್ದೆಗಳು ಇವೆ. ಸರ್ಕಾರ ಹೀಗೆಯೇ ನಿರ್ಲಕ್ಷ್ಯ ಮಾಡುತ್ತಾ ಸಾಗಿದರೆ, ನಿವೃತ್ತರ ಸಂಖ್ಯೆ ಹೆಚ್ಚಾಗುತ್ತದೆ. ಆಡಳಿತಯಂತ್ರ ಹಳಿ ತಪ್ಪುತ್ತದೆ. ಹಾಲಿ ಇರುವ ಕಡಿಮೆ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಮುಖ್ಯವಾಗಿ ಖಾಲಿ ಹುದ್ದೆಗಳ ಸಂಖ್ಯೆ ಸುಮಾರು 4 ಲಕ್ಷಕ್ಕೆ ಏರುವ ಸಾಧ್ಯತೆ ಇದೆ.

ಇಲಾಖಾವಾರು ಸರ್ಕಾರಿ ಖಾಲಿ ಹುದ್ದೆಗಳ ಮಾಹಿತಿ

ಸರ್ಕಾರದಿಂದ ದೊರೆತ ಲಭ್ಯ ಮಾಹಿತಿ ಪ್ರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 79,694 ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ. ಒಟ್ಟು ಖಾಲಿ ಹುದ್ದೆಗಳ ಪೈಕಿ ಸುಮಾರು ಶೇ. 27ರಷ್ಟು ಶಿಕ್ಷಣ ಇಲಾಖೆಗೆ ಸಂಬಂಧಿಸಿದೆ. ಉಳಿದಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ರಂಗದಲ್ಲಿ 37,572 ಮತ್ತು ಗೃಹ ಇಲಾಖೆಗಳಲ್ಲಿ 28,188 ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಕೃವಾಗಿ ನೇಮಕಾತಿಗೆ ಆಹ್ವಾನಿಸಬೇಕಿದೆ. ಆದರೆ ಸರ್ಕಾರ ಈ ಕೆಲಸ ಮಾಡುತ್ತಿಲ್ಲ. ಜನಪ್ರತಿನಿಧಿಗಳು ಕೇವಲ ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

10 ಸಾವಿರಕ್ಕೂ ಅಧಿಕ ಖಾಲಿ ಹುದ್ದೆಗಳಿರುವ ಇಲಾಖೆಗಳು

ಉನ್ನತ ಶಿಕ್ಷಣ ಇಲಾಖೆಯಲ್ಲಿ 13,599 ಪಶು ಸಂಗೋಪನೆ ಇಲಾಖೆಯಲ್ಲಿ 11,000 (ಕಳೆದ ನವೆಂಬರ್ ನಲ್ಲಿ ಇದ್ದದ್ದು 10,867 ಹುದ್ದೆಗಳಿದ್ದವು) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ 10,504 ಹುದ್ದೆಗಳಿವೆ. ಇನ್ನೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 9,646, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 8,525, ಅರಣ್ಯ ಇಲಾಖೆ 7,668 ಹಾಗೂ ಕಾನೂನು ಇಲಾಖೆಯಲ್ಲಿ 7,659 ಖಾಲಿ ಹುದ್ದೆಗಳನ್ನು ಹೊಂದಿವೆ.

ನೇಮಕಾತಿ ಸ್ಥಗತಗೊಂಡಿದ್ದೇಕೆ? ಪ್ರಮುಖ ಕಾರಣಗಳು

ರಾಜ್ಯದಲ್ಲಿ 2020ರ ಆರಂಭದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ/ಅಲೆ ಎದುರಾಯಿತು. ಇದಕ್ಕೆ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತವೇ ಲಾಕ್‌ಡೌನ್ ಆಗಿತ್ತು. ಆಗ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಎಲ್ಲಾ ನೇರ ನೇಮಕಾತಿಗಳನ್ನು 2020-21ರ ಆರ್ಥಿಕ ವರ್ಷಕ್ಕೆ ತಡೆ ಹಿಡಿಯಲಾಯಿತು. ಕೋವಿಡ್ ಹಿನ್ನೆಲೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆ ವೇಳೆಯಲ್ಲಿ (2023) ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ತನ್ನ ಅವಧಿಯೊಳಗೆ ಸೀಮಿತ ಸಂಖ್ಯೆಯ ನೇಮಕಾತಿಗಳನ್ನು ನಡೆಸಿತು. ಬಳಿಕ ನವೆಂಬರ್ 2024ರಿಂದ ನೇಮಕಾತಿ ನೆನೆಗುದಿಗೆ ಬಿತ್ತು. ಅಲ್ಲಿಂದ ಈವರೆಗೆ ಭರವಸೆಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರವು ಒಮ್ಮೆಲೆ ಅಥವಾ ಹಂತ ಹಂತವಾಗಿಯಾದರೂ ನೇಮಕಾತಿಗೆ ಮುಂದಾಗಿಲ್ಲ. ಇದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ (ಎಕೆಎಸ್ಎಸ್ಎ), ವಿವಿಧ ಸಂಘಟನೆಗಳು, ವಿಪಕ್ಷ ನಾಯಕರು ಹಾಗೂ ಉದ್ಯೋಗಾಕಾಂಕ್ಷಿಗಳ ಕೆಂಗಣ್ಣಿಗೆ ಕಾರಣವಾಗಿದೆ.

ಇನ್ನೊಂದು ಮುಖ್ಯ ಕಾರಣವೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಳ ಮೀಸಲಾತಿಯ ವಿಷಯ ನೇಮಕಾತಿ ವಿಳಂಬ ಕಾರಣವಾಗಿದೆ. ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಸಂಬಂಧ ಶಿಫಾರಸು ಮಾಡಲು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗ ರಚಿಸಿತ್ತು. ಆಯೋಗವು ಮೀಸಲಾತಿ ಸೂತ್ರಕ್ಕಾಗಿ ನೇಮಕಾತಿ ಸ್ಥಗಿತಗೊಳಿಸಲು ತಿಳಿಸಿತ್ತು.

ಬಳಿಕ ಇದೇ ಆಯೋಗವು ಕಳೆದ ವರ್ಷ 2025 ಆಗಸ್ಟ್ ತಿಂಗಳಿನಲ್ಲಿ ಒಳ ಮೀಸಲಾತಿ ವರದಿ ಸಲ್ಲಿಸಿತು. ಆಂತರಿಕ ಮೀಸಲಾತಿ ಸೂತ್ರದಿಂದ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಲಾಯಿತು ಎನ್ನಲಾಗಿದೆ. ಸರ್ಕಾರದ ಉದ್ಯೋಗ ನೇಮಕಾತಿ ಭರವಸೆ ಭರವಸೆಯಾಗಿಯೇ ಉಳಿಯಿತು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 2.5 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅದನ್ನು ಈಡೇರಿಸುವಂತೆ ವಿಪಕ್ಷ ನಾಯಕರು ಹಾಗೂ ಉದ್ಯೋಗಾಸಕ್ತರು ಪಟ್ಟು ಹಿಡಿದ್ದಾರೆ. ಸರ್ಕಾರ ಮನವಿಗಳಿಗೆ ಸ್ಪಂದಿಸದಿದ್ದಾಗ ಅನಿವಾರ್ಯವಾಗಿ ಪ್ರತಿಭಟನೆ ಹಾದಿ ಹಿಡಿದವು.

ತುರ್ತಾಗಿ ಪೊಲೀಸರ ನೇಮಕಾತಿ ಆಗಲಿ

ಬೆಂಗಳೂರು ನಗರದ 18 ಪ್ರಮುಖ ಪೊಲೀಸ್ ಠಾಣೆಗಳು ಇನ್ಸ್‌ಪೆಕ್ಟರ್‌ಗಳ ಹುದ್ದೆ ಖಾಲಿ ಇವೆ. ಅಪರಾಧ ಪ್ರಕರಣಗಳು, ಪೊಲೀಸ್ ಸಂಬಂಧಿ ಆಡಳಿತ ನಿರ್ವಹಣೆ ಆತಂಕದಲ್ಲಿದೆ. ಜನ ಸೇವೆಗೆ ಪೊಲೀಸ್ ನೇಮಕಾತಿ ಆಗಿಲ್ಲ. ಇದೇ ಕಾರಣದಿಂದ ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ ಎಂಬ ಆರೋಪವನ್ನು ಎದುರಿಸಿತು. ನೇಮಕಾತಿ ವಿಳಂಬವು ರಾಜ್ಯದ ಆಡಳಿತ, ಜನ ಸೇವೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸರ್ಕಾರ ಎಚ್ಚೆತ್ತುಕೊಂಡು ತುರ್ತಾಗಿ ನೇಮಕಾತಿ ನಿರ್ಧಾರಕ್ಕೆ ಬರಬೇಕಿದೆ.

ನೇಮಕಾತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

ಸರ್ಕಾರಿ ನೇಮಕಾತಿ ದೀರ್ಘಕಾಲದ ನಿಷ್ಕ್ರಿಯತೆಗೆ ಹಿಂದಿನ ಬಿಜೆಪಿ ಸರ್ಕಾರ ಕಾರಣವೆಂದು ಸಿಎಂ ಸಿದ್ದರಾಮಯ್ಯ ದೂರಿದ್ದಾರೆ. 56,000 ಹೊಸ ಉದ್ಯೋಗಗಳಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು. ಹೆಚ್ಚು ಪಾರದರ್ಶಕ ನೇಮಕಾತಿ ಪ್ರಕ್ರಿಯೆಗಳು ಖಚಿತಪಡಿಸಲಾಗುವುದು ಎಂದು ಹೇಳಿದರು. ನೇಮಕಾತಿ ತಡವಾಗಿದ್ದಕ್ಕೆ ಇತ್ತೀಚೆಗೆ ನಮ್ಮ ಸರ್ಕಾರ ಡಿಸೆಂಬರ್ 2027ರ ಅಂತ್ಯದವರೆಗೆ ಎಲ್ಲಾ ವರ್ಗಗಳ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.

ಕರ್ನಾಟಕ ಸರ್ಕಾರಿ ಉದ್ಯೋಗ ನೇಮಕಾತಿ ಬಗ್ಗೆ ಕೇಳುವ ಪ್ರಶ್ನೆಗಳು (FAQs)

1. ಕರ್ನಾಟಕದಲ್ಲಿ ಪ್ರಸ್ತುತ ಎಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ?

ಸರ್ಕಾರದ ಅಧಿಕೃತ ಮಾಹಿತಿ ಮತ್ತು ವಿವಿಧ ವರದಿಗಳ ಪ್ರಕಾರ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 2.84 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ.

2. ಅತಿ ಹೆಚ್ಚು ಖಾಲಿ ಹುದ್ದೆಗಳನ್ನು ಹೊಂದಿರುವ ಇಲಾಖೆ ಯಾವುದು?

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅತಿ ಹೆಚ್ಚು ಖಾಲಿ ಹುದ್ದೆಗಳನ್ನು ಹೊಂದಿದೆ. ಸುಮಾರು 79,694 ಹುದ್ದೆಗಳು ಈ ಇಲಾಖೆಯಲ್ಲಿ ಭರ್ತಿಯಾಗದೇ ಉಳಿದಿವೆ, ಇದು ಒಟ್ಟು ಖಾಲಿ ಹುದ್ದೆಗಳ ಶೇಕಡಾ 27 ರಷ್ಟಿದೆ.

3. ಇತ್ತೀಚೆಗೆ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದೇಕೆ?

ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸದ ಸರ್ಕಾರದ ಧೋರಣೆಯನ್ನು ಖಂಡಿಸಿ, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ (AKSSA) ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಶೀಘ್ರ ಮತ್ತು ಪಾರದರ್ಶಕ ನೇಮಕಾತಿಗಾಗಿ ಬೃಹತ್ ಪ್ರತಿಭಟನೆ ನಡೆಸಿದರು.

4. ನೇಮಕಾತಿ ಪ್ರಕ್ರಿಯೆ ವಿಳಂಬಕ್ಕೆ ಸರ್ಕಾರ ನೀಡುತ್ತಿರುವ ಕಾರಣವೇನು?

ಕೋವಿಡ್ ಸಾಂಕ್ರಾಮಿಕದ ವೇಳೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಒಂದು ಕಾರಣವಾದರೆ, ಇತ್ತೀಚಿನ ಒಳ ಮೀಸಲಾತಿ (Internal Reservation) ಕುರಿತಾದ ಚರ್ಚೆ ಮತ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಸಲ್ಲಿಕೆಯ ಪ್ರಕ್ರಿಯೆಗಳು ನೇಮಕಾತಿ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ.

5. ಉದ್ಯೋಗಾಕಾಂಕ್ಷಿಗಳ ವಯೋಮಿತಿ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿದ ಭರವಸೆ ಏನು?

ನೇಮಕಾತಿ ವಿಳಂಬದಿಂದ ಅಭ್ಯರ್ಥಿಗಳಿಗೆ ಆಗಿರುವ ನಷ್ಟವನ್ನು ಸರಿದೂಗಿಸಲು, ಡಿಸೆಂಬರ್ 2027ರ ಅಂತ್ಯದವರೆಗೆ ಎಲ್ಲಾ ವರ್ಗಗಳ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಜೊತೆಗೆ 56,000 ಹುದ್ದೆಗಳಿಗೆ ಶೀಘ್ರ ಅಧಿಸೂಚನೆ ಹೊರಡಿಸುವ ಭರವಸೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+