1500 ಪಿಡಿಒ ಹುದ್ದೆಗಳು ಮೇಲ್ದರ್ಜೆಗೆ, ವೇತನವೂ ಹೆಚ್ಚಳ
ಬೆಂಗಳೂರು, ನವೆಂಬರ್ 13; ಗ್ರಾಮ ಪಂಚಾಯತಿಗಳಿಗೆ ಮಂಜೂರಾಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳನ್ನು ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸುವ ಬಗ್ಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಮುಂದುವರೆಸುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
1500 ಪಿಡಿಒ ಹುದ್ದೆಗಳನ್ನು 'ಗ್ರೂಪ್ ಸಿ' ನಿಂದ 'ಗ್ರೂಪ್ ಬಿ'ಗೆ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ. 'ಗ್ರೂಪ್ ಸಿ'ನಲ್ಲಿನ 37,900-70,850 ರೂ. ವೇತನ ಶ್ರೇಣಿಯನ್ನು 40,900-78,200 ವೇತನ ಶ್ರೇಣಿಯ ಗ್ರೂಪ್-ಬಿ ಕಿರಿಯ ವೃಂದಕ್ಕೆ ಉನ್ನತೀಕರಿಸಲಾಗಿದೆ.
ಸರ್ಕಾರದ ಆದೇಶದಂತೆ ರಾಜ್ಯದಲ್ಲಿನ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಹುದ್ದೆಯಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ವೇತನ ಶ್ರೇಣಿ ರೂ.10,000-18,150 (ಪ್ರಸ್ತುತ ವೇತನ ಶ್ರೇಣಿ ರೂ. 37,900-70,850) ರಲ್ಲಿ ಸೃಜಿಸಿ ಆದೇಶಿಸಲಾಗಿದ್ದು, ಪ್ರಸ್ತುತ 6021 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಮಂಜೂರಾಗಿರುತ್ತವೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಸೃಜನೆಯಾಗಿರುವ 176 ಹೆಚ್ಚುವರಿ ಕಾರ್ಯಕ್ರಮ ಅಧಿಕಾರಿ ಹುದ್ದೆಗಳನ್ನು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಎಂದು ಪುನರ್ ಪದನಾಮಗೊಳಿಸಲಾಗಿದೆ.
ರಾಜ್ಯದಲ್ಲಿನ 226 ತಾಲೂಕು ಪಂಚಾಯಿತಿಗಳಲ್ಲಿ ಅಸ್ತಿತ್ವದಲ್ಲಿದ್ದ ತಲಾ ಒಂದು ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) (ವೇತನ ಶ್ರೇಣಿ) (ರೂ 43,100 ರಿಂದ 83,900/-) ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ತಾಲೂಕಿಗೆ ಒಂದು ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್) ಹುದ್ದೆಯಂತೆ ಒಟ್ಟು 26 ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಸೃಜಿಸಿ ಆದೇಶಿಸಲಾಗಿದೆ. ಪ್ರಸ್ತುತ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮುಂಬಡ್ತಿಗಾಗಿ 452 ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ/ ಪಂ.ರಾಜ್) ಹುದ್ದೆಗಳನ್ನು ಸೃಜಿಸಲಾಗಿದೆ.
ಪಿಡಿಒ ಕಾರ್ಯಗಳು; ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಪಂಚಾಯತ್ ರಾಜ್ ವ್ಯವಸ್ಥೆಯ ಕಾರ್ಯಗಳ ಜೊತೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲಾ ಅಭಿವೃದ್ಧಿ ಇಲಾಖೆಗಳ ಕಾಮಗಾರಿಗಳ ಅನುಪ್ರಾನದ ಉಸ್ತುವಾರಿ, ಪರಿವೀಕ್ಷಣೆ, ಮೇಲುಸ್ತುವಾರಿ ಮಾಡುವಂತಹ ಮಹತ್ತರ ಜವಾಬ್ದಾರಿಯನ್ನು ಹೊಂದಿದ್ದಾರೆ.
ಇದರ ಜೊತೆಗೆ ಸಂವಿಧಾನದ 73 ತಿದ್ದುಪಡಿಯ ಅನ್ವಯ ಅನುಚ್ಛೇದ 243(ಜಿ) ರ ಅನುಸೂಚಿ-11ರಡಿ 29 ವಿಷಯಗಳನ್ನು ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸಲಾಗಿದ್ದು, ಇವುಗಳ ಕುರಿತು ಸಂಬಂಧಪಟ್ಟ ಇಲಾಖೆಗಳೊಡನ ಸಮನ್ವಯ ಸಾಧಿಸುವ ಜವಾಬ್ದಾರಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ನಡೆಸುವುದು ಸಹ ಸದಸ್ಯ ಕಾರ್ಯದರ್ಶಿಯಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.
ಆದ್ದರಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಜವಾಬ್ದಾರಿಗೆ ಅನುಗುಣವಾಗಿ ಗ್ರೂಪ್-ಬಿ ವೃಂದಕ್ಕೆ ಉನ್ನತೀಕರಿಸುವುದು ಅಗತ್ಯವೆಂದು ಭಾವಿಸಲಾಗಿದೆ. 2010ನೇ ಸಾಲಿನಲ್ಲಿ ಒಟ್ಟು 2500 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇರ ನೇಮಕಾತಿ ಮಾಡಲಾಗಿರುತ್ತದೆ. ಕಳೆದ 12 ವರ್ಷಗಳ ಅವಧಿಯಲ್ಲಿ 613 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕರು ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಈ - ಶೇಕಡವಾರು ಪ್ರಮಾಣವನ್ನು ಪರಿಗಣಿಸಿದಲ್ಲಿ 2010ನೇ ಸಾಲಿನಲ್ಲಿ ನೇಮಕಾತಿ ಹೊಂದಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೇವಾವಧಿಯಲ್ಲಿ ಒಂದೇ ಒಂದು ಮುಂಬಡ್ತಿ ದೊರೆಯದ ಸಂದರ್ಭವಿರುತ್ತದೆ.

ಹಾಗಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮುಂಬಡ್ತಿಗೆ ಅವಕಾಶ ಹೆಚ್ಚಿಸುವ ದೃಷ್ಠಿಯಿಂದ ಒಟ್ಟು ಹುದ್ದೆಗಳ ಪೈಕಿ 1500 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ. 40,900-78,200 (ಗ್ರೂಪ್ ಬಿ ಕಿರಿಯ ವೃಂದ) ಹೊಂದಿರುವ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸಲು ಹಾಗೂ ಉಳಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ. 37,900-70,850ರಲ್ಲಿಯೇ ಮುಂದುವರೆಸಲು ಸರ್ಕಾರವು ತೀರ್ಮಾನಿಸಿರುತ್ತದೆ.
ಆದ್ದರಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಂದದಲ್ಲಿ ಮಂಜೂರಾಗಿರುವ 6021 ಹುದ್ದೆಗಳ ಪೈಕಿ 1500 ಹುದ್ದೆಗಳನ್ನು ತಕ್ಷಣಕ್ಕೆ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ಸರ್ಕಾರದ ಆದೇಶ ವಿವರಿಸಿದೆ.
ಸರ್ಕಾರವು ಪ್ರಸ್ತಾವನೆಯನ್ನು ಒಪ್ಪಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಮಂಜೂರಾಗಿರುವ 6021 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉನ್ನತೀಕರಿಸಿ/ ಪುನರ್ ಪದನಾಮೀಕರಿಸಿ ಆದೇಶಿಸಿದೆ.
* ವೇತನ ಶ್ರೇಣಿ ರೂ. 37,900-70,850ರ ಗೂಪ್ ಸಿ ವೃಂದದ 1500 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಅನ್ವಯವಾಗುವಂತೆ ವೇತನ ಶ್ರೇಣಿ ರೂ. 40,900-78,200 (ಗ್ರೂಪ್ ಬಿ ಕಿರಿಯ ವೃಂದ)ರಲ್ಲಿ ಉನ್ನತೀಕರಿಸಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಮರುಪದನಾಮೀಕರಿಸಿದೆ.
* ಉಳಿದ 4521 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶೇಣಿ ರೂ. 37,900-70,850 -(ಗ್ರೂಪ್ ಸಿ ವೃಂದದಲ್ಲಿ) ಮುಂದುವರಿಸಿದೆ.
ಸರ್ಕಾರವು ತನ್ನ ಆದೇಶದಲ್ಲಿ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಂದಗಳಿಗೆ ನೇಮಕಾತಿ ಕಾರ್ಯವಿಧಾನವನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.












Click it and Unblock the Notifications