Karnataka Government Jobs: 3 ವರ್ಷದ ವಯೋಮಿತಿ ಸಡಿಲಿಕೆ, ಆದೇಶದ ವಿವರ
ಬೆಂಗಳೂರು, ಸೆಪ್ಟೆಂಬರ್ 11: ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ನೇಮಕಾತಿಯಲ್ಲಿ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ 3ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲು ಅನುಮೋದನೆ ನೀಡಿತ್ತು. ಈಗ ಈ ಬಗ್ಗೆ ರಾಜ್ಯಪತ್ರದಲ್ಲಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ, ವಯೋಮಿತಿ ಸಡಿಲಿಕೆ ಹೇಗೆ ಸಿಗಲಿದೆ? ಎಂದು ವಿವರಣೆಯನ್ನು ಸಹ ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ವೀರಭದ್ರ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು) ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಕರ್ನಾಟಕ ರಾಜ್ಯಪತ್ರ, ಅಧಿಕೃತವಾಗಿ ಪ್ರಕಟಿಸಲಾದುದು ಎಂದು ಇದ್ದು, ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್ 'ಸಿ' ಮತ್ತು ಗ್ರೂಪ್ 'ಬಿ' ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ ಸಡಿಲಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಡಿ ಮತ್ತು ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ, ಕರ್ನಾಟಕ ರಾಜ್ಯದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ಮತ್ತು ಇತರೆ ಕಾರಣದಿಂದ ಮತ್ತು ಪದೇ ಪದೇ ಲಾಕ್ ಡೌನ್ ಆಗಿದ್ದರಿಂದ ವಿವಿಧ ಇಲಾಖೆಯಲ್ಲಿನ ಖಾಲಿ ಹುದ್ಯಗಳ ನೇಮಕಾತಿಯನ್ನು ಸರ್ಕಾರವು ಮುಂದೂಡುತ್ತಾ ಬಂದಿರುತ್ತದೆ.
ಇದರಿಂದ ಅಭ್ಯರ್ಥಿಗಳ ವಯೋಮಿತಿ ಹೆಚ್ಚಾಗಿದ್ದು, ಹುದ್ದೆಗಳ ನೇಮಕಾತಿಯಿಂದ ವಂಚಿತರಾಗಿ ನಿರುದ್ಯೋಗಿಗಳಾಗಿರುವುದರಿಂದ ರಾಜ್ಯ ಸರ್ಕಾರದ ನೇರ ನೇಮಕಾತಿಯಲ್ಲಿ ಪ್ರಸ್ತುತ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಸಡಿಲಿಸುವಂತೆ ಕೋರಿರುತ್ತಾರೆ. ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಕುರಿತು ಸ್ವೀಕರಿಸಲಾಗಿರುವ ಮನವಿಗಳನ್ನು ಪರಿಶೀಲಿಸಿದ್ದು, ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯನ್ನು ಒಂದು ಬಾರಿಗೆ ಮಾತ್ರ ನೀಡಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ ಎಂದು ಹೇಳಿದೆ.
ಆದೇಶದ ವಿವರ: ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೆನೆನಿ 2024, ಬೆಂಗಳೂರು, ದಿನಾಂಕ 10.09.2024. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷದ ಸಡಿಲಿಕೆಯನ್ನು ನೀಡಿ ಆದೇಶಿಸಿದೆ. ಸಚಿವ ಸಂಪುಟ ಸಭೆಯ ನಿರ್ಣಯದಂತೆ ಆದೇಶ ಹೊರಡಿಸಿದೆ ಎಂದು ಹೇಳಿದೆ.
ರಾಜ್ಯ ಸಿಎಲ್ ಸೇವೆಗಳಲ್ಲಿನ ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು 3 ವರ್ಷಗಳಿಗೆ ಹೆಚ್ಚಿಸಲು ಒಂದು ಬಾರಿಯ ಕ್ರಮವಾಗಿ ಒಂದು ವರ್ಷದ ಅವಧಿಗೆ ಸಡಿಲಿಕೆ ನೀಡುವ ಬಗ್ಗೆ ಎಂದು ಸಚಿವ ಸಂಪುಟ ಸಭೆಯಲ್ಲಿ ಟಿಪ್ಪಣಿಯನ್ನು ಮಂಡಿಸಿ, ವಿವರ ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿವರವಾಗಿ ಚರ್ಚಿಸಿ ಅನುಮೋದನೆಯನ್ನು ನೀಡಲಾಗಿತ್ತು.
ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್. ಕೆ. ಪಾಟೀಲ್, "ರಾಜ್ಯದ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳಿಗೆ ಪ್ರಸ್ತುತ ಸಾಮಾನ್ಯ ವರ್ಗಕ್ಕೆ 35 ವರ್ಷ, ಪ್ರವರ್ಗ 2ಎ/ 2ಬಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ಕ್ಕೆ 40 ವರ್ಷದ ಗರಿಷ್ಠ ವಯೋಮಿತಿ ಇದೆ. ಈಗ 1 ವರ್ಷಕ್ಕೆ ಸೀಮಿತವಾಗಿ ವಯೋಮಿತಿ ಸಡಿಲಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದರು. ಈಗ ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ.
ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಇದೇ ಮಾದರಿಯಲ್ಲಿ ಅವಕಾಶ ಮಾಡಿಕೊಟ್ಟಿತ್ತು. ಹಲವು ವರ್ಷಗಳ ಬಳಿಕ ಕೆಎಎಸ್ ಹುದ್ದೆಗಳ ನೇಮಕಾತಿ ನಡೆಸುತ್ತಿರುವ ಕಾರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ (one time measure) ಅರ್ಜಿ ಸಲ್ಲಿಸಲು ಹೆಚ್ಚುವರಿ ವಿಶೇಷ ಅವಕಾಶವನ್ನು ಮಾಡಿಕೊಟ್ಟಿತ್ತು.












Click it and Unblock the Notifications