ಸರ್ಕಾರದಿಂದ ಧಾರವಾಡದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ
ಧಾರವಾಡ, ಫೆಬ್ರವರಿ 26: ಕರ್ನಾಟಕ ಸರ್ಕಾರ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಿದೆ. 'ಯುವನಿಧಿ' ಗ್ಯಾರಂಟಿ ಯೋಜನೆ ಫಲಾನುಭವಿಗಳು ಸೇರಿದಂತೆ ಯುವಕ/ ಯುವತಿಯರಿಗೆ ಉದ್ಯೋಗವನ್ನು ಒದಗಿಸಿಕೊಡಲು ಶ್ರಮಿಸುತ್ತಿದೆ. ಸರ್ಕಾರದಿಂದ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಧಾರವಾಡದಲ್ಲಿ ಆಯೋಜಿಸುತ್ತಿದ್ದು, ಇದರ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಧಾರವಾಡ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಅವಳಿ ನಗರದ ಕೈಗಾರಿಕೋದ್ಯಮಿಗಳೊಂದಿಗೆ ಪೂರ್ವಭಾವಿ ಸಿದ್ಧತಾ ಸಭೆಯನ್ನು ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಸಚಿವರು, "ಸರ್ಕಾರದಿಂದ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸುತ್ತಿರುವುದರಿಂದ ಅಧಿಕಾರಿಗಳು ಉದ್ಯೋಗದಾತರಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಉದ್ಯೋಗ ಮೇಳ ಸಂಘಟಿಸಬೇಕು" ಎಂದು ಸೂಚಿಸಿದರು.
ಉದ್ಯೋಗ ಮೇಳ ಆಯೋಜನೆ: ಸಚಿವ ಸಂತೋಷ್ ಲಾಡ್, "ಅರ್ಹತೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ದೊರೆಯಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗಲು ಸರ್ಕಾರದಿಂದಲೇ ಉದ್ಯೋಗ ಮೇಳ ಆಯೋಜಿಸಿ, ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಮೇಳ ಸಂಘಟಿಸಲಾಗುತ್ತಿದೆ" ಎಂದರು.
"ಉದ್ಯೋಗ ಮೇಳವನ್ನು ವ್ಯವಸ್ಥಿತವಾಗಿ ಸಂಘಟಿಸಬೇಕು. ಮೇಳಕ್ಕೂ ಮೊದಲು ಒಂದು ವಾರ ಮೊದಲೇ ಉದ್ಯೋಗಾಂಕ್ಷಿಗಳ ಮಾಹಿತಿ, ಬೇಡಿಕೆ ಸಂಗ್ರಹಿಸಿ, ಮ್ಯಾಪಿಂಗ್ ಮಾಡಬೇಕು ಅವಳಿ ನಗರದ ಕೈಗಾರಿಕೋದ್ಯಮಿಗಳಿಂದ ಕಾರ್ಮಿಕರ ಬೇಡಿಕೆ ಪಡೆಯಬೇಕು. ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಬೇಕು" ಎಂದು ಹೇಳಿದರು.
"ಉದ್ಯೋಗ ಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಕುಡಿಯುವ ನೀರು, ಊಟ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳು ಸಿಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ನೋಂದಣಿ ಮಾಡಿಕೊಂಡರೆ ಎರಡು ದಿನಗಳವರೆಗೆ ಉದ್ಯೋಗ ಮೇಳ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು" ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು.
"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗ ಆಕಾಂಕ್ಷಿಗಳಿಗೆ ಕೈಗಾರಿಕೆಗಳು ಉದ್ಯೋಗ ನೀಡಿದಲ್ಲಿ ಉದ್ಯೋಗಿಗೆ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಆಶಾದೀಪ ಯೋಜನೆಯಡಿ ಎರಡು ವರ್ಷಗಳವರೆಗೆ ಪ್ರತಿ ತಿಂಗಳು 6 ಸಾವಿರ ರೂ.ಗಳ ಸಹಾಯಧನ ನೀಡುತ್ತದೆ. ಕೈಗಾರಿಕೆಗಳು ಎಸ್.ಸಿ., ಎಸ್.ಟಿ. ಸಮುದಾಯದವರಿಗೆ ಉದ್ಯೋಗ ನೀಡಿ ಪ್ರೋತ್ಸಾಹಿಸಬೇಕು ಮತ್ತು ಆಶಾದೀಪ ಯೋಜನೆ ಪ್ರಯೋಜನೆ ಪಡೆಯಬೇಕು" ಎಂದು ಸಚಿವರು ಕರೆ ಕೊಟ್ಟರು.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, "ಉದ್ಯೋಗ ಮೇಳದಲ್ಲಿ ಭಾಗವಹಿಸುವ ಪ್ರತಿ ಕೈಗಾರಿಕೆ ತಮ್ಮ ತಮ್ಮ ಉದ್ಯೋಗ ಬೇಡಿಕೆ, ನೀಡುವ ವೇತನ, ಅರ್ಹತೆಗಳು ಮತ್ತು ಬೇಡಿಕೆ ಸಂಖ್ಯೆಯನ್ನು ಸಲ್ಲಿಸಬೇಕು. ಈ ಎಲ್ಲ ಮಾಹಿತಿಯನ್ನು ದಾಖಲಿಸಿ ಉದ್ಯೋಗ ಮೇಳ ವೆಬ್‍ಸೈಟ್ ಹಾಗೂ ಕೌಶಲ್ಯ ಕರ್ನಾಟಕ ವೆಬೆಸೈಟ್‍ಗೆ ಜೋಡಿಸಬೇಕು. ಉದ್ಯೋಗ ಆಕಾಂಕ್ಷಿಗಳು ಈ ಲಿಂಕ್ ನೋಡಿ, ತಮ್ಮ ಉದ್ಯೋಗ ಸ್ಥಳ ಮತ್ತು ಕೈಗಾರಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ" ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, " ಜಿಲ್ಲೆಯ ಕೈಗಾರಿಕಾ ವಲಯಗಳಲ್ಲಿ ಉದ್ಯೋಗ ಮೇಳ ಆಯೋಜನೆ ಕುರಿತು ಸಭೆ ಜರುಗಿಸಿ, ಕಾರ್ಮಿಕರ ಬೇಡಿಕೆ ಪಟ್ಟಿ ಪಡೆಯಲಾಗುತ್ತದೆ" ಎಂದು ಹೇಳಿದರು. ಉದ್ಯೋಗ ಮೇಳದ ದಿನಾಂಕವನ್ನು ಇನ್ನೂ ಸಹ ಘೋಷಣೆ ಮಾಡಿಲ್ಲ.












Click it and Unblock the Notifications