Chamarajanagar Oxygen Tragedy: ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ: ಭರವಸೆ
Chamarajanagar Oxygen Tragedy: ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಶೀಘ್ರದಲ್ಲೇ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು. ಚಾಮರಾಜನಗರ ಜಿಲ್ಲೆಯ ಹನೂರು ತಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು (ಜೂನ್ 21) ಈ ಭರವಸೆಯನ್ನ ನೀಡಿದರು.
ಸರ್ಕಾರದ ಪರಿಹಾರ ತಾರತಮ್ಯ ವಿಚಾರದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಆಕ್ಸಿಜನ್ ದುರಂತ ಸಂಭವಿಸಿದಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಅವರು ಸರಿಯಾದ ರೀತಿ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.

ಬೆಂಗಳೂರು ಎಂ.ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ ಕುಟುಬಂದವರಿಗೆ ನೀಡಿದ ರೀತಿಯಲ್ಲಿ ಅವರಿಗೆ ಪರಿಹಾರ ಕೊಡಲು ಆಗಲ್ಲ. ಅವರಿಗೆ ಸರ್ಕಾರಿ ಉದ್ಯೋಗ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದು ಹೇಳಿದರು.
ಮನೆ ಮಂಜೂರು ಮಾಡಲು ಲಂಚ ನೀಡಬೇಕೆಂಬ ಆಡಿಯೋ ವೈರಲ್ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಆರ್ ಪಾಟೀಲ್ ಆಪಾದನೆ ಎಷ್ಟರ ಮಟ್ಟಿಗೆ ನಿಜ ಎಂಬ ಬಗ್ಗೆ ತನಿಖೆ ಆಗಬೇಕು. ಈಗಾಗಲೇ ವಸತಿ ಸಚಿವರು ನಮ್ಮಲ್ಲಿ ಆ ರೀತಿ ನಡೆದಿಲ್ಲ ಎಂದು ಸಿಎಂ ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ತನಿಖೆ ಮಾಡಿಸಿ ಎಂದು ವಸತಿ ಸಚಿವರು ಸಿಎಂ ಸಿದ್ದರಾಯಮಯ್ಯ ಅವರಿಗೆ ಹೇಳಿದ್ದಾರೆ ಹೇಳಿದ್ದಾರೆ ಎಂದು ತಿಳಿಸಿದರು.
ತನಿಖೆ ನಡೆಸುವಂತೆ ಆಗ್ರಹ: 2021ರ ಮೇ 2ರ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಕೋವಿಡ್ ಸೋಂಕಿತರು ಮೃತಪಟ್ಟ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಂತ್ರಸ್ತರ ಕುಟುಂಬಸ್ಥರು ಇತ್ತೀಚೆಗಷ್ಟೇ ಆಗ್ರಹಿಸಿದ್ದರು.
ಕೋವಿಡ್-19 ಉಪಕರಣ ಖರೀದಿ ಮತ್ತು ನಿರ್ವಹಣೆಯಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಜಾನ್ ಮೈಕೆಲ್ ಡಿ ಕುನ್ಹಾ ಆಯೋಗಕ್ಕೆ ಸಂತ್ರಸ್ತರ ಕುಟುಂಬಗಳು ಅಫಿಡವಿಟ್ ಸಲ್ಲಿಸಿದ್ದು, ಮರು ತನಿಖೆಗೆ ಒತ್ತಾಯಿಸಿದ್ದರು.
ನಗರಸಭೆ ಸದಸ್ಯರಾದ ಮಹೇಶ್ ಮತ್ತು ಕಲೀಮುಲ್ಲಾ ನೇತೃತ್ವದಲ್ಲಿ ಸಂತ್ರಸ್ತ ಕುಟುಂಬಗಳ ಸದಸ್ಯರು ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪೂರೈಕೆ ಮಾಡದಿರುವುದು ಸಾವಿಗೆ ಕಾರಣವಾಗಿದೆ ಆರೋಪಿಸಿದರು. ಅಲ್ಲದೆ, ದುರಂತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ನಿವೃತ್ತ ನ್ಯಾಯಾಧೀಶ ಬಿ.ಎ.ಪಾಟೀಲ್ ಅವರ ವರದಿಯನ್ನು ಸರ್ಕಾರ ತಿರಸ್ಕರಿಸಿರುವುದರಿಂದ ಮರು ಸಮೀಕ್ಷೆ ನಡೆಯುವ ವಿಶ್ವಾಸ ಇದೆ ಎಂದು ಸಂತ್ರಸ್ತ ಕುಟುಂಬಸ್ಥರು ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ಕೊಟ್ಟಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ದ ವೇಳೆ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು.
ಈ ವೇಳೆ ಸರ್ಕಾರಿ ಉದ್ಯೋಗದ ಭರವಸೆಯನ್ನು ನೀಡಿದ್ದರು. ಅಂದು ಸಂತ್ರಸ್ತರ ಕಷ್ಟ ಕೇಳಿ ಕಣ್ಣೀರಿಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರ ಹಿಡಿದ ಬಳಿಕ ಸಂತ್ರಸ್ತರ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದರು. ಆದರೆ, ಇಂದಿಗೂ ಉದ್ಯೋಗದ ಭರವಸೆ ಈಡೇರಲೇ ಇಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದೀಗ ಮತ್ತೆ ಶೀಘ್ರದಲ್ಲೇ ಈ ಭರವಸೆ ಈಡೇರಲಿದೆ ಎಂದು ಸಚಿವ ವೆಂಕಟೇಶ್ ತಿಳಿಸಿದ್ದಾರೆ.












Click it and Unblock the Notifications