Government Jobs: 384 ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಅಧಿಸೂಚನೆ
ಬೆಂಗಳೂರು, ಫೆಬ್ರವರಿ 07: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿಯ) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಆಯೋಗದಲ್ಲಿರುವ ಭಿನ್ನಭಿಪ್ರಾಯದ ಮಧ್ಯೆಯೇ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಕಳೆದ ವಾರ ನಡೆದ ಸಭೆಯನ್ನು ಕೆಪಿಎಸ್‌ಸಿ ಅಧ್ಯಕ್ಷ ಎಸ್.ಶಿವಶಂಕರಪ್ಪ ಎಸ್. ಸಾಹುಕಾರ ಹಾಗೂ ಐವರು ಸದಸ್ಯರು ಬಹಿಷ್ಕರಿಸಿದರು. ಕೆಪಿಎಸ್‌ಸಿ ಆಯೋಗದ 10 ಸದಸ್ಯರಲ್ಲಿ ಐವರು ಭಾಗವಹಿಸಿದ್ದ ಸಭೆಯಲ್ಲಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ.

ಒಟ್ಟು 384 ಹುದ್ದೆಗಳ ಎ ಮತ್ತು ಬಿ ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲು ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯನ್ನು ನಡೆಸಲು ತಾತ್ಕಾಲಿಕ ದಿನಾಂಕ ಅಂಗೀಕರಿಸಿಸಲಾಗಿದೆ. ಆಯೋಗವು ಫೆಬ್ರವರಿ 2 ರಂದು ಸರ್ಕಾರದಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದೆ. ಪೂರ್ವಭಾವಿ ಪರೀಕ್ಷೆಗಳನ್ನು ಮೂರು ತಿಂಗಳೊಳಗೆ ನಡೆಸಲು ಕೆಪಿಎಸ್‌ಸಿ ಸದಸ್ಯರು ನಿರ್ಧರಿಸಿದ್ದಾರೆ.
384 ಹುದ್ದೆಗಳ ಗ್ರೂಪ್ 'ಎ'ನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಾಣಿಜ್ಯ ತೆರಿಗೆ, ಖಜಾನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಒಳಾಡಳಿತ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಟ್ಟು 159 ಹುದ್ದೆಗಳಿವೆ.
ಉಳಿದ ಗ್ರೂಪ್ 'ಬಿ'ನಲ್ಲಿ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ಆರ್ಥಿಕ ಇಲಾಖೆ, ಲೆಕ್ಕ ಪರಿಶೋಧನಾ ಇಲಾಖೆ, ಕೌಶಲಾಭಿವೃದ್ಧಿ ಇಲಾಖೆ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರ್ಥಿಕ ಇಲಾಖೆ (ಖಜಾನೆ), ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು 225 ಹುದ್ದೆಗಳಿವೆ.
ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಅಸ್ತು ಎಂದ ಆಯೋಗ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಸಿಸಿ)ದ ಅಧ್ಯಕ್ಷ ಶಿವಶಂಕರಪ್ಪ ಸಭೆಯನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಹಿರಿಯ ಸದಸ್ಯ ರೊನಾಲ್ಡ್ ಅನಿಲ್ ಫರ್ನಾಂಡೀಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 666 ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳ ಆಯ್ಕೆ ಪಟ್ಟಿಗಳನ್ನು ಆಯಾ ಇಲಾಖೆಗಳಿಗೆ ಕಳುಹಿಸಲು ಸದಸ್ಯರು ನಿರ್ಧರಿಸಿದ್ದಾರೆ.












Click it and Unblock the Notifications