AI ವೇಗಕ್ಕೆ ಹೊಂದಿಕೊಳ್ಳದ ಉದ್ಯೋಗಿಗಳಿಗೆ Google ಶಾಕ್: ಸ್ವಯಂಪ್ರೇರಿತ ನಿವೃತ್ತಿ ಪ್ಯಾಕೇಜ್ ಘೋಷಣೆ
ಕ್ಯಾಲಿಫೋರ್ನಿಯಾ: ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ (Google) ತನ್ನ ಉದ್ಯೋಗಿಗಳಿಗೆ ಮಹತ್ವದ ಸಂದೇಶವೊಂದನ್ನು ರವಾನಿಸಿದೆ. ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಕಡೆಗೆ ಕಂಪನಿ ಸಂಪೂರ್ಣವಾಗಿ ವಾಲುತ್ತಿದ್ದು, ಈ ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಉದ್ಯೋಗಿಗಳಿಗೆ ಸ್ವಯಂಪ್ರೇರಿತರಾಗಿ ಕಂಪನಿ ಬಿಡಲು (Voluntary Exit) ಅವಕಾಶ ಮಾಡಿಕೊಟ್ಟಿದೆ. ಈ ಕುರಿತು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ (CBO) ಫಿಲಿಪ್ ಶಿಂಡ್ಲರ್ ಅವರು ಮಂಗಳವಾರ (ಫೆಬ್ರವರಿ 10) ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ್ದು, ನಿರ್ದಿಷ್ಟ ವಿಭಾಗದ ಸಿಬ್ಬಂದಿಗೆ ಆಕರ್ಷಕ ಪ್ಯಾಕೇಜ್‌ನೊಂದಿಗೆ ನಿರ್ಗಮಿಸುವ ಆಯ್ಕೆಯನ್ನು ನೀಡಿದ್ದಾರೆ.
ಏನಿದು ಸ್ವಯಂ ನಿವೃತ್ತಿ ಪ್ಯಾಕೇಜ್ ?
ಟೆಕ್ ವಲಯದಲ್ಲಿ ಉದ್ಯೋಗ ಕಡಿತ ಅಥವಾ ಲೇಆಫ್‌ಗಳ ಭೀತಿ ಇನ್ನೂ ಮಾಸಿಲ್ಲ. ಇದರ ನಡುವೆಯೇ ಗೂಗಲ್ ತನ್ನ 'ಗ್ಲೋಬಲ್ ಬಿಸಿನೆಸ್ ಆರ್ಗನೈಸೇಶನ್' (GBO) ವಿಭಾಗದ ಉದ್ಯೋಗಿಗಳಿಗೆ ಈ ಆಫರ್ ನೀಡಿದೆ. ಇದನ್ನು 'ವಾಲಂಟರಿ ಎಕ್ಸಿಟ್ ಪ್ಯಾಕೇಜ್' (VEP) ಎಂದು ಕರೆಯಲಾಗಿದೆ. ಇದರ ಪ್ರಕಾರ, ಕಂಪನಿಯ ಈಗಿನ ಕಾರ್ಯವೈಖರಿ, ಎಐ ಅಳವಡಿಕೆಯ ವೇಗ ಅಥವಾ ಕೆಲಸದ ಒತ್ತಡವನ್ನು ನಿಭಾಯಿಸಲು ಇಷ್ಟವಿಲ್ಲದವರು ರಾಜೀನಾಮೆ ನೀಡಬಹುದು. ಹೀಗೆ ಸ್ವಯಂಪ್ರೇರಿತರಾಗಿ ಕೆಲಸ ಬಿಡುವವರಿಗೆ ಕಂಪನಿಯು ಉತ್ತಮ ಪರಿಹಾರ ಧನವನ್ನು ನೀಡಲಿದೆ.

ಯಾರಿಗೆ ಈ ಅವಕಾಶವಿದೆ?
ಈ ಆಫರ್ ಎಲ್ಲರಿಗೂ ಅನ್ವಯಿಸುವುದಿಲ್ಲ. ಮುಖ್ಯವಾಗಿ ಸೇಲ್ಸ್ (Sales), ಕಾರ್ಪೊರೇಟ್ ಡೆವಲಪ್‌ಮೆಂಟ್ ಮತ್ತು ಸೊಲ್ಯೂಷನ್ಸ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಈ ಅವಕಾಶ ನೀಡಲಾಗಿದೆ. ಆದರೆ, ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುವ (Customer-facing roles) ಸಿಬ್ಬಂದಿಗೆ ಈ ಪ್ಯಾಕೇಜ್ ಅನ್ವಯಿಸುವುದಿಲ್ಲ ಎಂದು ಶಿಂಡ್ಲರ್ ಸ್ಪಷ್ಟಪಡಿಸಿದ್ದಾರೆ. ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
KMF Recruitment: 194 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ; ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಆಗಿದ್ರೆ ಸಾಕು
ಫಿಲಿಪ್ ಶಿಂಡ್ಲರ್ ತಮ್ಮ ಇ-ಮೇಲ್‌ನಲ್ಲಿ ಎಐ ತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದ್ದಾರೆ. "2025ರ ಸಾಲಿನಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ. ಆದರೆ, ಈಗ ಆಟ ಬದಲಾಗಿದೆ. ಕೆಲಸದ ವೇಗ ವಿದ್ಯುತ್ ಸಂಚಾರದಷ್ಟಿದೆ (Electric Pace). ಈಗಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಎಐ ತಂತ್ರಜ್ಞಾನವನ್ನು ಅಪ್ಪಿಕೊಳ್ಳಲೇಬೇಕು. ಯಾರಿಗೆ ಈ ವೇಗವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲವೋ ಅಥವಾ ಯಾರು ಇಲ್ಲಿಂದ ಹೊರಹೋಗಲು ಸಿದ್ಧರಿದ್ದಾರೋ ಅವರು ಈ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು," ಎಂದು ಅವರು ಬರೆದಿದ್ದಾರೆ.
ಪ್ಯಾಕೇಜ್‌ನಲ್ಲಿ ಏನಿರಲಿದೆ?
ಗೂಗಲ್ ಈ ಬಾರಿ ಎಷ್ಟು ಹಣವನ್ನು ಪರಿಹಾರವಾಗಿ ನೀಡುತ್ತಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕಳೆದ ವರ್ಷ ಇದೇ ರೀತಿಯ ಆಫರ್ ನೀಡಿದ್ದಾಗ, ಕಂಪನಿಯು ಕನಿಷ್ಠ 14 ವಾರಗಳ ಸಂಬಳ ಮತ್ತು ಪ್ರತಿ ವರ್ಷದ ಸೇವೆಗೆ ಹೆಚ್ಚುವರಿಯಾಗಿ ಒಂದು ವಾರದ ಸಂಬಳವನ್ನು ನೀಡಿತ್ತು. ಈ ಬಾರಿಯೂ ಇದೇ ಮಾದರಿಯ ಅಥವಾ ಇದಕ್ಕಿಂತ ಉತ್ತಮವಾದ ಪ್ಯಾಕೇಜ್ ಸಿಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ನೇರ ವಜಾ ಬದಲು ಸ್ವಯಂ ನಿರ್ಗಮನವೇಕೆ?
ಸಾಮಾನ್ಯವಾಗಿ ಕಂಪನಿಗಳು ಉದ್ಯೋಗಿಗಳನ್ನು ನೇರವಾಗಿ ಕೆಲಸದಿಂದ ತೆಗೆದುಹಾಕಿದರೆ (Layoff) ಅದು ಕಂಪನಿಯ ವರ್ಚಸ್ಸಿಗೆ ಧಕ್ಕೆ ತರುತ್ತದೆ. ಜೊತೆಗೆ ಕಾನೂನಿನ ತೊಡಕುಗಳೂ ಎದುರಾಗಬಹುದು. ಅಮೆರಿಕದಂತಹ ದೇಶಗಳಲ್ಲಿ ಸಾಮೂಹಿಕ ವಜಾ ಮಾಡುವಾಗ ಮುನ್ಸೂಚನೆ ನೀಡಬೇಕಾದ ಕಠಿಣ ನಿಯಮಗಳಿವೆ. ಆದರೆ, 'ಸ್ವಯಂ ನಿವೃತ್ತಿ' ಅಥವಾ 'ಬೈ ಔಟ್' (Buyout) ಆಯ್ಕೆ ನೀಡುವುದರಿಂದ ಕಂಪನಿಯ ಮೇಲಿನ ಕಪ್ಪುಚುಕ್ಕೆ ತಪ್ಪುತ್ತದೆ ಮತ್ತು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಸುಲಭವಾಗುತ್ತದೆ.
ಇದು ಗೂಗಲ್ ಮೊದಲ ಬಾರಿಗೆ ಮಾಡುತ್ತಿರುವ ಪ್ರಯೋಗವೇನಲ್ಲ. ಕಳೆದ ವರ್ಷ ಜೂನ್ ತಿಂಗಳಲ್ಲಿ ಗೂಗಲ್‌ನ ನಾಲೆಡ್ಜ್ ಆಂಡ್ ಇನ್ಫಾರ್ಮೇಷನ್ ವಿಭಾಗದವರಿಗೆ ಮತ್ತು ಅಕ್ಟೋಬರ್‌ನಲ್ಲಿ ಯೂಟ್ಯೂಬ್ ಉದ್ಯೋಗಿಗಳಿಗೂ ಇದೇ ರೀತಿಯ ಆಫರ್ ನೀಡಲಾಗಿತ್ತು. ಒಟ್ಟಿನಲ್ಲಿ, ಎಐ ಯುಗದಲ್ಲಿ ಉದ್ಯೋಗ ಉಳಿಸಿಕೊಳ್ಳಲು ಕೇವಲ ಮನುಷ್ಯರ ಬುದ್ಧಿವಂತಿಕೆ ಸಾಲದು, ಯಂತ್ರಗಳ ವೇಗಕ್ಕೂ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬುದಕ್ಕೆ ಗೂಗಲ್‌ನ ಈ ನಡೆ ಸಾಕ್ಷಿಯಾಗಿದೆ.












Click it and Unblock the Notifications