Google Lay Off: ದೈತ್ಯ ಕಂಪನಿ ಗೂಗಲ್‌ನಲ್ಲೂ ಶೇ 10ರಷ್ಟು ಉದ್ಯೋಗ ಕಡಿತ
ಬೆಂಗಳೂರು, ಡಿಸೆಂಬರ್ 21: ದೈತ್ಯ ಕಂಪನಿ ಗೂಗಲ್ ಸಹ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಘೋಷಣೆಯನ್ನು ಮಾಡಿದೆ. ತನ್ನ ಕಾರ್ಯಚರಣೆಯನ್ನು ಸುಗಮಗೊಳಿಸಲು ಶೇ 10ರಷ್ಟು ಉನ್ನತ ಮಟ್ಟದ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ. ಈ ಬಗ್ಗೆ ಬಹಳ ಹಿಂದೆಯೇ ಗೂಗಲ್ ಸಿಇಒ ಸುಂದರ್ ಪಿಚೈ ಸುಳಿವು ನೀಡಿದ್ದರು. ಈಗ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.
ಉನ್ನತ ಮಟ್ಟದ ನಿರ್ವಹಣಾ ತಂಡದಲ್ಲಿ ಈ ಉದ್ಯೋಗಿಗಳ ವಜಾ ಪ್ರಕ್ರಿಯೆ ನಡೆಯಲಿದೆ. ಈ ವರ್ಷದ ಆರಂಭದಲ್ಲಿಯೇ ಸುಂದರ್ ಪಿಚೈ ಉನ್ನತ ನಿರ್ವಹಣಾ ಹುದ್ದೆಗಳನ್ನು ಶೆ 10ರಷ್ಟು ಕಡಿಮೆ ಮಾಡುವ ಚಿಂತನೆಯನ್ನು ಬಹಿರಂಗಪಡಿಸಿದ್ದರು. ಅದು ಈಗ ಜಾರಿಗೊಳ್ಳುತ್ತಿದೆ.

ಈ ಔದ್ಯೋಗಿಕ ಕಡಿತ ಮ್ಯಾನೇಜರ್, ನಿರ್ದೇಶಕ, ಉಪಾಧ್ಯಕ್ಷ ರೀತಿಯ ಹುದ್ದೆಗಳಿಗೆ ಅನ್ವಯವಾಗಲಿದೆ ಎಂದು ವರದಿಗಳು ತಿಳಿಸಿವೆ. ಕಂಪನಿಯ ವರ್ಷದ ದಕ್ಷತಾ ಪ್ರಯತ್ನ, ಕಂಪನಿಯ ಕಾರ್ಯಾಚರಣೆ ಸರಳಗೊಳಿಸುವ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಣೆ ನೀಡಲಾಗಿದೆ.
ಮೊದಲ ಬಾರಿಗೆ ಘೋಷಣೆ: ಅಭಿವೃದ್ಧಿ ವ್ಯವಹಾರದ ಹೊಂದಾಣಿಕೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ. ನಿರ್ವಹಣಾ, ನಿರ್ದೇಶಕ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೇಲೆ ಇದು ಪರಿಣಾಮ ಬೀರಲಿದೆ. ಕೆಲವು ಹುದ್ದೆಗಳು ವರ್ಗಾಯಿಸಲ್ಪಟ್ಟವು, ಇತರ ಹುದ್ದೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗುತ್ತಿದೆ. ಈ ಪ್ರಕ್ರಿಯೆ ಸೆಪ್ಟೆಂಬರ್ 2022ರಲ್ಲಿ ಮೊದಲ ಬಾರಿಗೆ ವಿವರಿಸಲಾದ ಗೂಗಲ್‌ನ ದಕ್ಷತಾ ಕಾರ್ಯತಂತ್ರದ ಮುಂದುವರಿದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2023ರ ಜನವರಿಯಲ್ಲಿ ಶೇ 6ರಷ್ಟು ಸಿಬ್ಬಂದಿಗಳನ್ನು ವಜಾಗೊಳಿಸಲಾಗಿತ್ತು. ಪರಿಣಾಮ ಸುಮಾರು 12,000 ಹುದ್ದೆಗಳು ಬದಲಾಗಿದ್ದವು. ಇದನ್ನು ಗೂಗಲ್‌ನ ಅತಿ ದೊಡ್ಡ ಕೆಲಸದಿಂದ ವಜಾ ಪ್ರಕ್ರಿಯೆ ಎಂದೇ ಹೇಳಲಾಗುತ್ತಿತ್ತು. ಈ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಈಗ ಶೇ 10ರಷ್ಟು ವಜಾ ಘೋಷಣೆ ಮಾಡಲಾಗಿದೆ.
ಎರಡು ವರ್ಷಗಳಿಂದ ಗೂಗಲ್ ಕಾರ್ಯಕ್ಷಮತೆಯ ಮೇಲೆ ಹೆಚ್ಚಿನ ಗಮನವನ್ನು ಹರಿಸಿದೆ. ಕೃತಕ ಬುದ್ಧಿಮತ್ತೆ ಮತ್ತು ತೀವ್ರವಾದ ಸ್ಪರ್ಧೆಯ ಕಾರಣಕ್ಕೆ ಕಾರ್ಯ ಕ್ಷಮತೆಯ ಮೇಲೆ ಇನ್ನೂ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದು, ಸಭೆಯಲ್ಲಿ ಉದ್ಯೋಗ ಕಡಿತದ ಕುರಿತು ಸುಂದರ್ ಪಿಚೈ ಮಾತನಾಡಿದ್ದಾರೆ.
ಕಂಪನಿಯ ಆಲ್ ಹ್ಯಾಂಡ್ ಸಭೆಯಲ್ಲಿ ಪಿಚೈ ಗೂಗ್ಲಿನೆಸ್ ಎಂಬ ವಿಷಯವನ್ನು ಸಹ ಉಲ್ಲೇಖಿಸಿದ್ದಾರೆ. ಇದನ್ನು ಪುನರ್ ವ್ಯಾಖ್ಯಾನಿಸುವ ಅಗತ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಇದು ಕಂಪನಿಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ವಿವರಿಸಲು ಒಳ ಆಡಳಿತದಲ್ಲಿ ಬಳಸುವ ಪದವಾಗಿದೆ.
ಇಂದು ಗೂಗಲ್‌ಗೆ ಗೂಗ್ಲಿನೆಸ್ ಎಂದರೇನು? ಎಂಬುದನ್ನು ನವೀಕರಿಸುವ ಸಮಯ ಬಂದಿದೆ ಎಂದು ಹೇಳುವ ಮೂಲಕ ಅವರು, ಕಂಪನಿ ಆಧುನಿಕ ಸವಾಲುಗಳಿಗೆ ಹೊಂದಿಕೊಳ್ಳಲು ಬದಲಾವಣೆ ಮಾಡಿಕೊಳ್ಳಬೇಕಾದ, ಉತ್ಪಾದಕತೆ, ಕಾರ್ಯಕ್ಷಮತೆ ಮೇಲೆ ಗಮನ ಹರಿಸಬೇಕಾದ ಕುರಿತು ಸೂಚನೆಗಳನ್ನು ನೀಡಿದ್ದಾರೆ.
2024ರ ಜನವರಿಯಲ್ಲಿ ಪಿಚೈ ಕಂಪನಿಯ ದಕ್ಷತೆಯ ಗುರಿಗಳ ಬಗ್ಗೆ ಹೆಚ್ಚು ಒತ್ತು ನೀಡಿ ಮಾತನಾಡಿದ್ದರು. ಹೆಚ್ಚುವರಿ ಉದ್ಯೋಗ ಕಡಿತದ ಬಗ್ಗೆ ಉದ್ಯೋಗಿಗಳಿಗೆ ಎಚ್ಚರಿಸಿದ್ದರು. ಹಲವಾರು ಸುತ್ತಿನ ಸಭೆಗಳು, ಪರಾಮರ್ಶೆಗಳ ಬಳಿಕ ಹುದ್ದೆಗಳ ವರ್ಗಾವಣೆ, ರದ್ದು ಕುರಿತು ತೀರ್ಮಾನ ಮಾಡಿದ್ದು, 2024ರ ಉದ್ಯೋಗ ಕಡಿತದ ಘೋಷಣೆ ಬಹಿರಂಗವಾಗಿದೆ. ಆದರೆ ಹಿಂದಿನ ವರ್ಷದ ಉದ್ಯೋಗ ಕಡಿತದ ಮಟ್ಟಕ್ಕೆ ಈ ಬಾರಿ ತಲುಪುವುದಿಲ್ಲ. ಕೆಲವು ವಿಭಾಗಗಳಲ್ಲಿ ಮಾತ್ರ ಸಿಬ್ಬಂದಿ ಕಡಿತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications