GESCOM Recruitment: ಜೆಸ್ಕಾಂ ನೇಮಕಾತಿ, ಹುದ್ದೆ ಮತ್ತು ವೇತನ ವಿವರ
ಕಲಬುರಗಿ, ಅಕ್ಟೋಬರ್ 28: ಕರ್ನಾಟಕದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕಿದೆ. ಆಸಕ್ತ, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಲು 20/11/2024 ಕೊನೆಯ ದಿನವಾಗಿದೆ. ಗುಲ್ಬಾರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ)ನಲ್ಲಿಯೂ ನೇಮಕಾತಿ ನಡೆಯುತ್ತಿದೆ.
ಗುಲ್ಬಾರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ)ನಲ್ಲಿ 15 ಕಿರಿಯ ಪವರ್ ಮ್ಯಾನ್, 29 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಾತಿ ಅಧಿಸೂಚನೆ ಈಗಾಗಲೇ ಪ್ರಕಟಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು.

ಹುದ್ದೆಗಳ ಸಂಖ್ಯೆ, ವಿವರ: ಜೆಸ್ಕಾಂನಲ್ಲಿ 15 ಕಿರಿಯ ಪವರ್ ಮ್ಯಾನ್ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 3, ಪರಿಶಿಷ್ಟ ವರ್ಗ 1, ಸಾಮಾನ್ಯ 6, ಪ್ರವರ್ಗ-1 1, ಪ್ರವರ್ಗ-2ಎ 3, ಪ್ರವರ್ಗ 2-ಬಿ 1 ಹುದ್ದೆಗಳಿವೆ. ನೇಮಕಾತಿ ಅಧಿಸೂಚನೆಯಲ್ಲಿ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಆ ಹುದ್ದೆಯನ್ನು ಆಯಾ ಪ್ರವರ್ಗದ ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದೆ.
29 ಬ್ಯಾಕ್‌ಲಾಗ್ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 10, ಪರಿಶಿಷ್ಟ ವರ್ಗ 1, ಸಾಮಾನ್ಯ 7, ಪ್ರವರ್ಗ-1 2, ಪ್ರವರ್ಗ-2ಎ 3, ಪ್ರವರ್ಗ 2-ಬಿ 2, ಪ್ರವರ್ಗ-3ಎ 1, ಪ್ರವರ್ಗ-3ಬಿ 3 ಹುದ್ದೆಗಳಿವೆ.
ಕಿರಿಯ ಪವರ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕವಿಪ್ರನಿನಿ ಅಥವ ವಿದ್ಯುತ್ ಸರಬರಾಜು ಕಂಪನಿಗಳು ಇವುಗಳಲ್ಲಿ ಯಾವುದಾದರೂ ಒಂದು ಕಂಪನಿಗೆ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅರ್ಹರು. ವಿದ್ಯುತ್ ಸರಬರಾಜು ಕಂಪನಿಗಳ ಕಿರಿಯ ಪವರ್ ಮ್ಯಾನ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳಲ್ಲಿನ ಅಧಿಕಾರ ವ್ಯಾಪ್ತಿಯಲ್ಲಿ ನಿಯುಕ್ತಿಗೊಳಿಸಲಾಗುತ್ತದೆ.
ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿ ಕನಿಷ್ಠ ವಯೋಮಿತಿ 18 ವರ್ಷ ಹೊಂದಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 35, ಪ್ರವರ್ಗ 2ಎ/ 2ಬಿ/ 3ಎ/ 3ಬಿ 38, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯ. ಒಂದು ವೇಳೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸದಿದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ. ಸಾಮಾನ್ಯ ವರ್ಗದ ಅಭ್ಯರ್ಥಿ 590 ರೂ. (ಜಿಎಸ್‌ಟಿ ಸೇರಿ), ಪ್ರವರ್ಗ -1, 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿ 614 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಭ್ಯರ್ಥಿ 378 ರೂ. ಶುಲ್ಕ ಪಾವತಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ) ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರಬೇಕು. ಈ ವಿದ್ಯಾರ್ಹತೆ ಹೊರತುಪಡಿಸಿ ಇತರೆ ಯಾವುದೇ ಸಮನಾಂತರ ವಿದ್ಯಾರ್ಹತೆ ಪರಿಗಣಿಸುವುದಿಲ್ಲ. ಒಂದು ವೇಳೆ ಅಭ್ಯರ್ಥಿಗಳು ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್.ಎಸ್.ಎಲ್.ಸಿ./ 10ನೇ ತರಗತಿ (ಬ್ರಿಡ್ಜ್ ಕೋರ್ಸ್) ಉತ್ತೀರ್ಣತೆ ಹೊಂದಿದ್ದರೆ ಅವುಗಳನ್ನು ಪರಿಗಣಿಸಲಾಗುವುದಿಲ್ಲ. ನಿಗದಿತ ಶೈಕ್ಷಣಿಕ ವಿದ್ಯಾರ್ಹತೆ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು, ಅರ್ಜಿ ಸಲ್ಲಿಸುವಂತಿಲ್ಲ.
ಆಯ್ಕೆಯಾದ ಅಭ್ಯರ್ಥಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳ ಷರತ್ತುಗಳಿಗೊಳಪಟ್ಟು 3 ವರ್ಷಗಳ ಅವಧಿಗೆ ತರಬೇತಿಗೆ ಒಳಪಡಿಸಲಾಗುತ್ತದೆ. ತರಬೇತಿಯ ಅವಧಿಯಲ್ಲಿ, ಕ್ರೋಢೀಕೃತ ಸಂಭಾವನೆಯನ್ನು ಬಿಟ್ಟು, ಇನ್ನಿತರ ಯಾವುದೇ ಭತ್ಯೆ ಹಾಗೂ ಸೌಲಭ್ಯ ಇರುವುದಿಲ್ಲ. ಕ್ರೋಢೀಕೃತ ಸಂಭಾವನೆ 1ನೇ ವರ್ಷ 17,000 ಮಾಸಿಕ, 2ನೇ ವರ್ಷ 19,000 ಮಾಸಿಕ ಮತ್ತು 3ನೇ ವರ್ಷ 21,000 ಮಾಸಿಕ ನೀಡಲಾಗುತ್ತದೆ.












Click it and Unblock the Notifications