ವಿವಿಧ ಹುದ್ದೆಗಳ ಭರ್ತಿ: ಕರ್ನಾಟಕ ಸರ್ಕಾರದಿಂದ ಹೊಸ ಸುತ್ತೋಲೆ
ಬೆಂಗಳೂರು, ಜೂನ್ 13: ಕರ್ನಾಟಕ ಸರ್ಕಾರ ವಿವಿಧ ಹುದ್ದೆಗಳ ಭರ್ತಿ, ಗ್ರೂಪ್-ಡಿ ಮತ್ತು ಸಮಾನಂತರ ಹುದ್ದೆ ಮತ್ತು ಗ್ರೂಪ್-ಸಿ ಹುದ್ದೆಗಳ ಭರ್ತಿ ಕುರಿತು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ.
ಈ ಕುರಿತು ಮಾನ್ಯ ಮುಖ್ಯಮಂತ್ರಿಯವರಿಂದ ಅನುಮೋದಿತ ಸುತ್ತೋಲೆಯನ್ನು ಡಾ. ಪಿ. ಸಿ. ಜಾಫರ್ ಸರ್ಕಾರದ ಕಾರ್ಯದರ್ಶಿ (ಆ ಮತ್ತು ಸಂ), ಆರ್ಥಿಕ ಇಲಾಖೆ ಹೊರಡಿಸಿದ್ದಾರೆ. ಹಲವು ಸುತ್ತೋಲೆಗಳನ್ನು ಉಲ್ಲೇಖಿಸಿದ್ದಾರೆ.

ಸುತ್ತೋಲೆಯ ವಿವರಗಳು; ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಅನ್ವಯ ಹುದ್ದೆಗಳ ಸೃಜನೆ - ಅಥವಾ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಅಂಶಗಳನ್ನು ಒಳಗೊಂಡ ಯಾವುದೇ ಪ್ರಸ್ತಾವನೆ/ ಯೋಜನೆಗಳ ಕುರಿತು ಅದೇಶ ಹೊರಡಿಸುವ ಪೂರ್ವದಲ್ಲಿಯೇ ಅರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಆರ್ಥಿಕ ಇಲಾಖೆಯಿಂದ ಹುದ್ದೆಯನ್ನು ಮಂಜೂರು ಮಾಡದ ಹೊರತು, ವಿಶ್ವವಿದ್ಯಾಲಯಗಳು ಮತ್ತು ಇತರ ಸ್ವಾಯತ್ತ ಸಂಸ್ಥೆಗಳ ಮಟ್ಟದಲ್ಲಿ ಸೃಜಿಸಲಾದ ಹುದ್ದೆಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ, ಆರ್ಥಿಕ ಇಲಾಖೆಯು ಇಂತಹ ಹುದ್ದೆಗಳ ಭರ್ತಿಗೆ ಸಹಮತಿ ನೀಡಲಾಗುವುದಿಲ್ಲ ಹಾಗೂ ಕ್ರಮವಹಿಸಲಾಗುವುದಿಲ್ಲ ಎಂದು ಸುತ್ತೋಲೆಗಳಲ್ಲಿ ಸ್ಪಷ್ಟಪಡಿಸಲಾಗಿದೆ.
ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದ ಹುದ್ದೆಗಳ ಎದುರಾಗಿ ಉದ್ಭವಿಸುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದಿಲ್ಲ. ಆದರೆ ವಿಶ್ವವಿದ್ಯಾಲಯಗಳು ಮತ್ತು ಇತರ ಸ್ವಾಯತ್ತ ಸಂಸ್ಥೆಗಳು ಇಂತಹ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸುತ್ತಿರುವುದನ್ನು ಗಮನಿಸಲಾಗಿದೆ. ಅಲ್ಲದೆ ಇಂತಹ ಹುದ್ದೆಗಳನ್ನು ಆರ್ಥಿಕ ಇಲಾಖೆಯ ಸಹಮತಿ ಪಡೆಯದೇ ಬ್ಯಾಕ್ ಲಾಗ್ ಹುದ್ದೆಗಳೆಂದೂ ಗುರುತಿಸಿರುತ್ತವೆ.
ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಅನ್ವಯ ಆರ್ಥಿಕ ಇಲಾಖೆಯಿಂದ ಪೂರ್ವಾನುಮತಿ ಪಡೆಯದ ಹೊರತು ಇಂತಹ ಅನುಮೋದಿತವಲ್ಲದ ಹುದ್ದೆಗಳ ಎದುರಾಗಿ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶವಿರುವುದಿಲ್ಲ. ಆದುದರಿಂದ ಮೊದಲಿಗೆ, ಹುದ್ದೆಗಳ ಸೃಜನೆಗೆ ಸಂಬಂಧಿಸಿದಂತೆ, ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಬೇಕಾಗಿರುತ್ತದೆ.
ನಿಯಮಗಳೇನು?; ಗ್ರೂಪ್-ಡಿ ಮತ್ತು ಸಮಾನಂತರ ಹುದ್ದೆ ಮತ್ತು ಗ್ರೂಪ್-ಸಿ ಹುದ್ದೆಗಳ ಭರ್ತಿ (ಬೆರಳಚ್ಚುಗಾರರು/ ದತ್ತಾಂಶ ನಮೂದು ಸಹಾಯಕರು (ಡಿ.ಇ.ಓ), ವಾಹನ ಚಾಲಕರು, ಶೀಘ್ರಲಿಪಿಗಾರರು)
ಈ ಮೇಲಿನ ವೃಂದದ ಹುದ್ದೆಗಳನ್ನು (ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಪ್ರಕಾರ (ಆರ್ಥಿಕ ಇಲಾಖೆಯಿಂದ ಅನುಮೋದಿಸಲ್ಪಟ್ಟ ಹುದ್ದೆಗಳಾಗಿದ್ದಲ್ಲಿ) ಹೊರಗುತ್ತಿಗೆ ಆಧಾರದ ಮೇಲೆ ಮಾತ್ರ ಭರ್ತಿ ಮಾಡುವುದು ರಾಜ್ಯ ಸರ್ಕಾರದ ನೀತಿಯಾಗಿದೆ.
ಆದ್ದರಿಂದ ಅಂತಹ ವೃಂದದ ಹುದ್ದೆಗಳ ಎದುರಾಗಿ ನೇರ ನೇಮಕಾತಿಯ ಪ್ರಶ್ನೆ ಉದ್ಭವಿಸುವುದಿಲ್ಲ. ಈ ವೃಂದಗಳಲ್ಲಿ (ಬ್ಯಾಕ್‌ಲಾಗ್ ಖಾಲಿ ಹುದ್ದೆ ಸೇರಿದಂತೆ) ಯಾವುದೇ ಖಾಲಿ ಹುದ್ದೆಯನ್ನು ಹೊರಗುತ್ತಿಗೆ ಮೂಲಕವೇ ಭರ್ತಿ ಮಾಡತಕ್ಕದ್ದು.
ಆದಾಗ್ಯೂ, ಗ್ರೂಪ್ 'ಡಿ' ಮತ್ತು ಸಮಾನಂತರ ಹುದ್ದೆ ಮತ್ತು ಗ್ರೂಪ್ 'ಸಿ' ವೃಂದಗಳಲ್ಲಿ (ಬೆರಳಚ್ಚುಗಾರರು/ ದತ್ತಾಂಶ ನಮೂದು ಸಹಾಯಕರು (ಡಿ.ಇ.ಓ), ವಾಹನ ಚಾಲಕರು, ಶೀಘ್ರಲಿಪಿಗಾರರು) ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳ ಎದುರಾಗಿ ಆಯಾ ವರ್ಗಗಳಿಗೆ ಮೀಸಲಾದ ಅಭ್ಯರ್ಥಿಗಳಿಂದಲೇ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳುವುದನ್ನು ಆಡಳಿತ ಇಲಾಖೆಗಳು ಖಚಿತಪಡಿಸಿಕೊಳ್ಳತಕ್ಕದ್ದು ಎಂದು ಸುತ್ತೋಲೆ ಹೇಳಿದೆ.












Click it and Unblock the Notifications