ಕೊಪ್ಪಳದ ರಾಜ್ಯ ವಿಮಾ ಆಸ್ಪತ್ರೆಯ ಹುದ್ದೆಗಳ ಭರ್ತಿಗೆ ಒಪ್ಪಿಗೆ
ಕೊಪ್ಪಳ, ಡಿಸೆಂಬರ್ 18; ಕೊಪ್ಪಳದಲ್ಲಿ 30 ಹಾಸಿಗೆ ಸಾಮರ್ಥ್ಯದ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಯನ್ನು ಪ್ರಾರಂಭಿಸಲು ಒಪ್ಪಿಗೆ ನೀಡಲಾಗಿದೆ. ಈ ಆಸ್ಪತ್ರೆಗೆ ಅವಶ್ಯಕವಿರುವ ಒಟ್ಟು 50 ವಿವಿಧ ವೃಂದದ ಹುದ್ದೆಗಳನ್ನು ಸೃಜಿಸಲು ಸರ್ಕಾರವು ಸಹಮತ ಸೂಚಿಸಿದೆ.
ಕೊಪ್ಪಳ ಸಂಸದ ಕರಡಿ ಸಂಗಣ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಾದೇಶಿಕ ನಿರ್ದೇಶಕರು, ಕಾರ್ಮಿಕರ ರಾಜ್ಯ ವಿಮಾ ನಿಗಮ, ಬೆಂಗಳೂರು ಇವರು ಬರೆದ ಪತ್ರದನ್ವಯ ಕೊಪ್ಪಳದಲ್ಲಿ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಯನ್ನು ಪ್ರಾರಂಭಿಸಲು ತಾತ್ವಿಕ ಅನುಮೋದನೆ ಸಿಕ್ಕಿದೆ.
ಅದೇ ರೀತಿ ನಿರ್ದೇಶಕರು, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ ಇವರು 2022ರ ಜೂನ್‌ನಲ್ಲಿ ಬರೆದ ಪತ್ರದನ್ವಯ ಕಾರ್ಮಿಕರ ರಾಜ್ಯ ವಿಮಾ ನಿಗಮದ ಮಾರ್ಗಸೂಚಿಯಂತೆ ಕೊಪ್ಪಳದಲ್ಲಿ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಪ್ರಾರಂಭಿಸಲು ಅವಶ್ಯಕವಿರುವ ಹುದ್ದೆಗಳ ಭರ್ತಿಗೂ ಒಪ್ಪಿಗೆ ಸಿಕ್ಕಿದೆ.

ಹುದ್ದೆಗಳ ವಿವರ; ವಿಮಾ ವೈದ್ಯಾಧಿಕಾರಿ 17, ಆಯುರ್ವೇದಿಕ್ ವೈದ್ಯಾಧಿಕಾರಿ 1, ಶುಶ್ರೂಷಕರು 15, ಫಾರ್ಮಸಿ ಅಧಿಕಾರಿ 4, ಕಛೇರಿ ಅಧೀಕ್ಷಕರು 1, ಪ್ರಥಮ ದರ್ಜೆ ಸಹಾಯಕರು 4, ದ್ವಿತೀಯ ದರ್ಜೆ ಸಹಾಯಕರು 1, ಡೆಂಟಲ್ ಸಹಾಯಕರು 1, ಒಟಿ ಟೆಕ್ನಿಷಿಯನ್ 2, ಟೆಕ್ನಿಷಿಯನ್/ ಸಹಾಯಕರು 2, ಇಸಿಜಿ ತಂತ್ರಜ್ಞರು 2, ಗ್ರೂಪ್ ಡಿ 18 ಸೇರಿ ಒಟ್ಟು 68 ಹುದ್ದೆಗಳನ್ನು ನೇರ ನೇಮಕಾತಿ ಮೇರೆಗೆ ಮತ್ತು ಹೌಸ್ ಕೀಪಿಂಗ್ 18 ಮತ್ತು ಕಾವಲುಗಾರರು 11 ಹುದ್ದೆಗಳನ್ನು ಹೊರಗುತ್ತಿಗೆ ಮೇರೆಗೆ ಸೃಜಿಸಲು ಸರ್ಕಾರದ ಒಪ್ಪಿಗೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆರ್ಥಿಕ ಇಲಾಖೆಯ ಟಿಪ್ಪಣಿಯಂತೆ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಯ ನಿರ್ದೇಶಕರ ಪ್ರಸ್ತಾವನೆಯನ್ನು ಪರಿಶೀಲಿಸಿ ಕೊಪ್ಪಳದಲ್ಲಿ 30 ಹಾಸಿಗೆ ಸಾಮರ್ಥ್ಯದ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯನ್ನು ಪ್ರಾರಂಭಿಸಲು ಅವಶ್ಯಕವಿರುವ ಒಟ್ಟು 50 ವಿವಿಧ ವೃಂದದ ಹುದ್ದೆಗಳನ್ನು ಸೃಜಿಸಲು ಸರ್ಕಾರವು ಮಂಜೂರಾತಿ ನೀಡಿ ಡಿಸೆಂಬರ್ 17ರಂದು ಆದೇಶ ಹೊರಡಿಸಿದೆ.
ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ ಕೊಪ್ಪಳ ಇಲ್ಲಿನ ಮೊದಲ 3 ವರ್ಷಗಳ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುವುದು. ಅನಂತರ ರಾಜ್ಯ ಸರ್ಕಾರದ ಪಾಲಿನ ಶೇ12.5ಅನ್ನು ಮಾತ್ರ ರಾಜ್ಯ ಸರ್ಕಾರವು ಒದಗಿಸುತ್ತದೆ. ಉಳಿದ ಶೇ.87.5ವೆಚ್ಚವನ್ನು ಕೇಂದ್ರ ಸರ್ಕಾರದಿಂದ ಪಡೆಯಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಈ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರಿಂದ ಕೊಪ್ಪಳ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದು ಸಂಸದ ಕರಡಿ ಸಂಗಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಸದರ ಸಂತಸ; ಕೊಪ್ಪಳದಲ್ಲಿ 30 ಹಾಸಿಗೆ ಸಾಮರ್ಥ್ಯದ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದಕ್ಕೆ ಸಂಸದ ಕರಡಿ ಸಂಗಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಗಿಯುವವರೆಗೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿನ ತಾಯಿ ಮತ್ತು ಆರೋಗ್ಯ ವಿಭಾಗ ಹಾಗೂ ಕಟ್ಟಡಕ್ಕೆ ಹೊಂದಿಕೊಂಡಿರುವ ಸಿಬ್ಬಂದಿ ವಸತಿ ಗೃಹಗಳಲ್ಲಿನ ಎರಡು ವಸತಿ ಗೃಹಗಳಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸಲು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳು, ಕಾರ್ಮಿಕ ರಾಜ್ಯ ವಿಮಾ ಯೋಜನೆಯ ವೈದ್ಯಕೀಯ ಸೇವೆಗಳು ಬೆಂಗಳೂರು ಇವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಈ ಬಗ್ಗೆ ಅಗತ್ಯ ಕ್ರಮ ವಹಿಸಲು ವೈದ್ಯಕೀಯ ಅಧೀಕ್ಷಕರು, ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ಹುಬ್ಬಳ್ಳಿ ಇವರಿಗೆ ತಿಳಿಸಲಾಗಿದೆ. ಇದು ಸಂತಸದ ಸಂಗತಿಯಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications