ಸರ್ಕಾರಿ ಪ್ರಾಥಮಿಕ ಶಾಲೆ; ಅತಿಥಿ ಶಿಕ್ಷಕರ 2ನೇ ಹಂತದ ನೇಮಕ, ವಿವರ
ಬೆಂಗಳೂರು, ಆಗಸ್ಟ್ 28: ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2ನೇ ಹಂತದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಆದೇಶ ಹೊರಡಿಸಿದೆ. ಶಾಲೆಗಳಲ್ಲಿ ವರ್ಗಾವಣೆ ನಂತರ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆಯುಕ್ತರು ಶಿಕ್ಷಣ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. 2023-2024ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವರ್ಗಾವಣೆ ನಂತರ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇರ ನೇಮಕಾತಿ/ ವರ್ಗಾವಣೆ ಮೂಲಕ ಹುದ್ದೆ ಭರ್ತಿ ಮಾಡುವವರೆಗೆ ಅಥವಾ ಪ್ರಸ್ತಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಖಾಲಿ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕವಾಗಿ ಒಟ್ಟು 27,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರದ ಆದೇಶದಲ್ಲಿ ಅನುಮತಿ ನೀಡಲಾಗಿದೆ.

2022-23 ಸಾಲಿನ ಶಿಕ್ಷಕರ ಕೌನ್ಸಿಲಿಂಗ್ ವರ್ಗಾವಣೆಯಿಂದ ಕೆಲವೊಂದು ಜಿಲ್ಲೆಗಳಲ್ಲಿ ಉಂಟಾಗಿರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಸರ್ಕಾರದ ಆದೇಶದಂತೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳಿಗೆ ಎದುರಾಗಿ ಹೆಚ್ಚುವರಿಯಾಗಿ 2ನೇ ಹಂತದಲ್ಲಿ ಒಟ್ಟು 8000 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಆದೇಶ ಹೇಳಿದೆ.
ಸದರಿ ಹುದ್ದೆಗಳನ್ನು ವಿಧಿಸಲಾದ ಷರತ್ತುಗಳ ಜೊತೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದು, ಜಿಲ್ಲಾವಾರು, ತಾಲ್ಲೂಕುವಾರು ಶಿಕ್ಷಕರ ಹುದ್ದೆಗಳನ್ನು ಮರು ಹಂಚಿಕೆ ಮಾಡಿ ಆದೇಶಿಸಲಾಗಿದೆ. ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳುವಾಗ ಪಾಲಿಸಬೇಕಾದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅತಿಥಿ ಶಿಕ್ಷಕರ ನೇಮಕ ಷರತ್ತುಗಳು
* ತಾಲ್ಲೂಕಿನಲ್ಲಿನ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ (ಪಿಟಿಆರ್) ಹೊಂದಿರುವ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆದ್ಯತೆ ನೀಡುವುದು.
* ತಾಲ್ಲೂಕಿನಲ್ಲಿನ ಏಕೋಪಾಧ್ಯಾಯ ಶಾಲೆಗಳಿಗೆ ಆದ್ಯತೆ
* ದ್ವಿ, ಭಾಷಾ ಮಾಧ್ಯಮ (bilingual) ಶಾಲೆಗಳು (ಅಂಗ್ಲ ಮಾಧ್ಯಮ ಶಾಲೆಗಳು)
* ಆದರ್ಶ ಶಾಲೆಗಳು
* ಚುನಾಯಿತ ಪ್ರತಿನಿಧಿ ಅಥವಾ ಗ್ರಾಮ ಪಂಚಾಯತಿ ಸದಸ್ಯರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.
* ಅತಿ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವಂತಿಲ್ಲ.
* ತಾಲ್ಲೂಕುವಾರು ಖಾಲಿ ಹುದ್ದೆಗಳಿಗೆ ಎದುರಾಗಿ ನೇಮಕಾತಿಗಾಗಿ ಮಂಜೂರಾತಿ ನೀಡಿರುವ ಅತಿಥಿ ಶಿಕ್ಷಕರನ್ನು ಸಂಬಂಧಿಸಿದ ತಾಲೂಕಿನ ಒಳಗೆ ಕಡ್ಡಾಯವಾಗಿ ಆದ್ಯತೆ ಮೇರೆಗೆ ಬಳಸಿಕೊಳ್ಳುವುದು.
* ಪ್ರಥಮ ಹಂತದಲ್ಲಿ ತಾಲ್ಲೂಕಿನ ಒಳಗಿನ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದ್ದ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಪ್ರಸ್ತುತ ಶಿಕ್ಷಕರ ವರ್ಗಾವಣೆಯಿಂದ ಭರ್ತಿಯಾಗಿದ್ದಲ್ಲಿ ತಕ್ಷಣ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡತಕ್ಕದ್ದು.
* ತಾಲ್ಲೂಕಿನ ಒಳಗೆ ಹೆಚ್ಚುವರಿಯಾಗುವ ಅತಿಥಿ ಶಿಕ್ಷಕರ ಹುದ್ದೆಗಳನ್ನು ಹಂಚಿಕೆ ಮಾಡಿ ಮಂಜೂರಾತಿ ನೀಡಿರುವಂತೆ ಕೊರತೆ ಇರುವ ತಾಲ್ಲೂಕುಗಳಿಗೆ ಮರು ಹೊಂದಾಣಿಕೆ ಮಾಡತಕ್ಕದ್ದು.
* ಈಗಾಗಲೇ ಕೆಲವು ಜಿಲ್ಲೆಗಳ ಉಪನಿರ್ದೇಶಕರು ಹೆಚ್ಚುವರಿ ಅತಿಥಿ ಶಿಕ್ಷಕರ ಹುದ್ದೆಗಳನ್ನು ಜಿಲ್ಲೆಗೆ ಅವಶ್ಯಕತೆ ಇಲ್ಲವೆಂದು ಕಛೇರಿಗೆ ಅದ್ಯರ್ಪಿಸಿರುವ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಪುನ: ಮರು ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದಲ್ಲ. ಕಾರಣ ಸದರಿ ಹುದ್ದೆಗಳನ್ನು ಬೇರೆ ಅಗತ್ಯವಿರುವ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ವರ್ಗಾವಣೆಯಿಂದ ಖಾಲಿಯಾಗಿರುವ ಸಹ ಶಿಕ್ಷಕರ ಒಟ್ಟು 43,245 ಖಾಲಿ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರನ್ನು 27,000+8,000=35,000 ಮಂಜೂರಾತಿ ನೀಡಿದ್ದು, ಸದರಿ ಹುದ್ದೆಗಳನ್ನು ಷರತ್ತುಗಳಂತೆ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳಿಗೆ ಮಾತ್ರ ಒಂದು ವಾರದೊಳಗಾಗಿ ನೇಮಕಾತಿ ಮಾಡಿಕೊಂಡು, ವರ್ಗಾಯಿತ ಶಿಕ್ಷಕರನ್ನು ಬಿಡುಗಡೆಗೊಳಿಸತಕ್ಕದ್ದು. ಯಾವುದೇ ಗೊಂದಲ/ ದೂರುಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯಿಂದ ನೇಮಕ ಮಾಡಿಕೊಂಡು ಶೈಕ್ಷಣಿಕವಾಗಿ ಹಿನ್ನಡೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಅತಿಥಿ ಶಿಕ್ಷಕರ ವಿವರಗಳು; ಬಳ್ಳಾರಿ ಜಿಲ್ಲೆಗೆ 417, ಬೀದರ್ 80, ಕಲಬುರಗಿ 323, ಕೊಪ್ಪಳ 722, ರಾಯಚೂರು 286, ಯಾದಗಿರಿ 35, ಉತ್ತರ ಕನ್ನಡ 150, ವಿಜಯಪುರ 250, ಚಾಮರಾಜನರ 144, ದಕ್ಷಿಣ ಕನ್ನಡ 277, ಕೊಡಗು 1126, ಬಾಗಲಕೋಟೆ 150 ಹುದ್ದೆಗಳು.
ಬೆಳಗಾವಿ ಜಿಲ್ಲೆಗೆ 312, ಚಿಕ್ಕೋಡಿ 888, ಧಾರವಾಡ 175, ಗದಗ 110, ಹಾವೇರಿ 200, ಉತ್ತರ ಕನ್ನಡ 20, ಮಂಡ್ಯ 60, ಮೈಸೂರು 70, ಉಡುಪಿ 75, ಬೆಂಗಳೂರು ಗ್ರಾಮಾಂತರ 30, ಬೆಂಗಳೂರು ನಗರ (ಉತ್ತರ) 145, ಬೆಂಗಳೂರು ನಗರ (ದಕ್ಷಿಣ) 98, ಚಿಕ್ಕಬಳ್ಳಾಪುರ 30, ಚಿತ್ರದುರ್ಗ 80, ಕೋಲಾರ 30, ರಾಮನಗರ 202, ಶಿವಮೊಗ್ಗ10 ಮತ್ತು ಮಧುಗಿರಿ 60 ಹುದ್ದೆಗಳ ನೇಮಕಕ್ಕೆ ಒಪ್ಪಿಗೆ ನೀಡಲಾಗಿದೆ.












Click it and Unblock the Notifications