ಹೊರಗುತ್ತಿಗೆ ನೇಮಕಾತಿ; ಕರ್ನಾಟಕ ಸರ್ಕಾರದ ಮಹತ್ವದ ಆದೇಶ
ಬೆಂಗಳೂರು, ಜನವರಿ 24: ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪಣಿಯ ಅನ್ವಯ ಈ ಕುರಿತು ಸೂಚನೆಗಳನ್ನು ನೀಡಲಾಗಿದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್ ಈ ಕುರಿತು ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಿಗೆ ಟಿಪ್ಪಣಿಯನ್ನು ಹೊರಡಿಸಿದ್ದಾರೆ.

ಜನವರಿ 23ರಂದು ಹೊರಡಿಸಿರುವ ಟಿಪ್ಪಣಿಯು ಮಾನ್ಯ ಮುಖ್ಯಮಂತ್ರಿಯವರ ದಿನಾಂಕ 09/01/2024ರ ಟಿಪ್ಪಣಿಯ ಪ್ರತಿಯ ಅನ್ವಯ ಹೊರಡಿಸಲಾಗಿದೆ. ಇದರಲ್ಲಿ ಹೊರಗುತ್ತಿಗೆ ನೇಮಕಾತಿ ಕುರಿತು ಸೂಚನೆಗಳನ್ನು ಕೊಡಲಾಗಿದೆ.
ಟಿಪ್ಪಣಿಯ ವಿವರಗಳು; ಟಿಪ್ಪಣಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ಕೆಲವು ಇಲಾಖೆಗಳಲ್ಲಿ (ಸಚಿವಾಲಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ/ ನೌಕರರನ್ನು ಅನಗತ್ಯವಾಗಿ ಹುದ್ದೆಗಳನ್ನು ಸೃಜಿಸಿ, ಸಮಾಲೋಚಕರು/ ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಹಾಗೂ ಕೆಲವು ಗ್ರೂಪ್-ಎ ವೃಂದದ ಹುದ್ದೆಗಳಿಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.
ಸದರಿ ನಿವೃತ್ತ ನೌಕರರಿಗೆ ವೇತನ, ವಾಹನ ಸೌಲಭ್ಯ ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಲ್ಲದೆ, ಕಾರ್ಯಕ್ಷಮತೆಯ ಗುಣಮಟ್ಟ ಹಾಗೂ ಉತ್ತರದಾಯಿತ್ವದ ಕೊರತೆಯೂ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ವಿವಿಧ ಇಲಾಖೆಗಳಲ್ಲಿ ಹಾಲಿ ಗುತ್ತಿಗೆ/ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ/ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಿ, ಸದರಿ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ/ ನೌಕರರುಗಳನ್ನು ನಿಯೋಜನೆ ಮಾಡಲು ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರ ಸಚಿವಾಲಯ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಲಿ ಗುತ್ತಿಗೆ/ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ/ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಿ, ಸದರಿ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ/ ನೌಕರರುಗಳನ್ನು ನಿಯೋಜನೆ ಮಾಡಲು ಕೂಡಲೇ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಕಛೇರಿಗೆ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಟಿಪ್ಪಣಿ ವಿವರ; 9/1/2024ರ ಟಿಪ್ಪಣಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯೊಂದನ್ನು ನೀಡಿದ್ದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ರಾಜ್ಯ ಸರ್ಕಾರದ ಕೆಲವು ಇಲಾಖೆಗಳಲ್ಲಿ ಸಚಿವಾಲಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ/ ನೌಕರರನ್ನು ಅನಗತ್ಯವಾಗಿ ಹುದ್ದೆಗಳನ್ನ ಸೃಜಿಸಿ ಸಮಾಲೋಚಕರು ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಹಾಗೂ ಕೆಲವು ಗ್ರೂಪ್ ಎ. ವೃಂದದ ಹುದ್ದೆಗಳಿಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿರುತ್ತದೆ ಎಂದು ಹೇಳಿದ್ದರು.
ಸದರಿ ನಿವೃತ್ತ ನೌಕರರಿಗೆ ವೇತನ, ವಾಹನ ಸೌಲಭ್ಯ ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಲ್ಲದೆ, ಕಾರ್ಯಕ್ರಮತಿಯ ಗುಣಮಟ್ಟ ಹಾಗೂ ಉತ್ತರದಾಯಿತ್ವದ ಕೊರತೆಯೂ ಎಮ್ಮ ಕಾಣುತ್ತಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು.
ಆದ್ದರಿಂದ, ಸದರಿ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ/ ನೌಕರರುಗಳನ್ನು ನಿಯೋಜನೆ ಮಾಡಲು ಹಾಗೂ ವಿವಿಧ ಇಲಾಖೆಗಳಲ್ಲಿ ಹಾಲಿ ಗುತ್ತಿಗೆ/ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಸರ್ಕಾರಿ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದೆ ಎಂದು ತಿಳಿಸಿದ್ದರು.












Click it and Unblock the Notifications