Government Recruitment: ಭರ್ತಿ ಆಗದ 2.5ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳು: ಯುವಕರಿಗೆ ಸರ್ಕಾರ ಚಿಪ್ಪು..BJP
Government Jobs Recruitment 2025: ಕರ್ನಾಟಕ ರಾಜ್ಯಾದ್ಯಂತ ಉದ್ಯೋಗಾಕಾಂಕ್ಷಿಗಳ ಇವತ್ತಲ್ಲ ನಾಳೆ ಸರ್ಕಾರದಿಂದ ಬೃಹತ್ ಮಟ್ಟದ ಉದ್ಯೋಗ ನೇಮಕಾತಿ ನಡೆಯಲಿದೆ ಎಂದು ಕಾಯುತ್ತಿದ್ದಾರೆ. ಆದರೆ ವರ್ಷಗಳು ಕಳೆದು ಖಾಲಿ ಇರುವ ಹುದ್ದೆಗಳಿಗೆ ಸೂಕ್ತ ರೀತಿಯಲ್ಲಿ ನೇಮಕಾತಿಗೆ ಆದೇಶ, ಅಧಿಸೂಚನೆ ಪ್ರಕಟವಾಗಿಲ್ಲ. ಇದೇ ವಿಚಾರ ಇಟ್ಟುಕೊಂಡು ರಾಜ್ಯ ಬಿಜೆಪಿಯು 2 ವರ್ಷದಿಂದ ನೇಮಕಾತಿ ಮಾಡದೇ ರಾಜ್ಯದ ಯುವಕರಿಗೆ ಕಾಂಗ್ರೆಸ್ ಸರ್ಕಾರ ಚಿಪ್ಪು ನೀಡಿದೆ ಎಂದು ಅಪಹಾಸ್ಯ ಮಾಡಿದೆ.
ಶುಕ್ರವಾರ ಕರ್ನಾಟಕ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕುರಿತಂತೆ ರಾಜ್ಯ ಬಿಜೆಪಿ ಎಕ್ಸ್ ಪೋಸ್ಟ್ ಮಾಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2 ವರ್ಷದಿಂದ ನೇಮಕಾತಿ ಇಲ್ಲ. ಯುವಕರಿಗೆ ಉದ್ಯೋಗವಿಲ್ಲ. ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ದೂರಿದೆ.

ರಾಜ್ಯದಲ್ಲಿ ಒಟ್ಟು 2.5 ಲಕ್ಷಕ್ಕೂ ಅಧಿಕ ಸರ್ಕಾರ ಹುದ್ದೆಗಳು ಖಾಲಿ ಇವೆ. ಹೀಗಿದ್ದರೂ ಸಹ ಸರ್ಕಾರ ಅವುಗಳ ಭರ್ತಿ ಮಾಡಿ ಯುವ ಸಮೂಹದ ಬದುಕಿಗೆ ದಾರಿ ತೋರಿಸಲು ಮುಂದಾಗಿಲ್ಲ. ಹೆಚ್ಚುತ್ತಿರುವ ನಿರುದ್ಯೋಗ ನಿಯಂತ್ರಣಕ್ಕೆ ಸರ್ಕಾರದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ವರ್ಷಗಳಲ್ಲಿ ಯುವಕರ ಕೈಗೆ ಚಿಪ್ಪು ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಯುವಕರ ನೋವಿನ ಸಮಸ್ಯೆ ಆಲಿಸಿ. ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ ಎಂದು ಬಿಜೆಪಿ ಒತ್ತಾಯಿಸಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ನಿಮಗಳಲ್ಲಿ ಒಂದಷ್ಟು ನೇಮಕಾತಿ ಮಾಡಿಕೊಂಡಿದ್ದಾಗಿ ಇತ್ತೀಚೆಗೆ ತಿಳಿಸಿದ್ದಾರೆ. ಇನ್ನೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರು ಅಗತ್ಯ ಹುದ್ದೆಗಳ ನೇಮಕಾತಿಗೆ ಮಾಡಿಕೊಳ್ಳಲಾಗುವುದು. '8500' ಕಾನ್ ಸ್ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದರು. ಈವರೆಗೆ ಆ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ನೆರೆ ಸಂತ್ರಸ್ತರ ಮರೆತ ಸರ್ಕಾರ
ತಿಂಗಳ ಹಿಂದಷ್ಟೆ ಉತ್ತರ ಕರ್ನಾಟಕದ ಕಲಬುರಗಿ, ಬೀದರ್ ಇತರ ಕಡೆಗಳಲ್ಲಿ ಅತೀವ ಮಳೆ, ಪ್ರವಾಹಕ್ಕೆ ಬೆಳೆದ ಬೆಳೆ ಹಾಳಾಗಿತ್ತು. ಜನ ಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರದ ಭರವಸೆ ನೀಡಿ ಒಂದು ತಿಂಗಳು ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಹೇಳಿ ಒಂದು ತಿಂಗಳು ಕಳೆದಿದೆ. ಸಂತ್ರಸ್ತರ ಖಾತೆಗೆ ಬಿಡಿಗಾಸು ಜಮೆ ಆಗಿಲ್ಲ. ಸ್ವಾಮಿ ಸಿದ್ದರಾಮಯ್ಯನವರೇ, ಕೊಟ್ಟ ಮಾತು ಮರೆಯಬೇಡಿ, ಕೂಡಲೇ ಪರಿಹಾರ ನೀಡಿ ಎಂದು ಬಿಜೆಪಿ ಒತ್ತಾಯಿಸಿದೆ.












Click it and Unblock the Notifications