BESCOM Recruitment: ಬೆಸ್ಕಾಂ ನೇಮಕಾತಿ, 10ನೇ ತರಗತಿ ವಿದ್ಯಾರ್ಹತೆ, ವೇತನ ವಿವರ
ಬೆಂಗಳೂರು, ಅಕ್ಟೋಬರ್ 17: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ)ನಲ್ಲಿಯೂ ಹಲವು ಹುದ್ದೆಗಳ ನೇಮಕಾತಿ ನಡೆಯಲಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ)ನಲ್ಲಿ ಕಿರಿಯ ಪವರ್ ಮ್ಯಾನ್ 618 ಮತ್ತು ಬ್ಯಾಕ್‌ಲಾಗ್ ಹುದ್ದೆಗಳು 288 ಭರ್ತಿ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆ ಹೇಳಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 20/11/2024ರ ತನಕ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ.

ಹುದ್ದೆಗಳ ವಿವರ: ಬೆಸ್ಕಾಂನಲ್ಲಿ 618 ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 105, ಪರಿಶಿಷ್ಟ ವರ್ಗ 44, ಸಾಮಾನ್ಯ 272, ಪ್ರವರ್ಗ-1 25, ಪ್ರವರ್ಗ-2ಎ 92, ಪ್ರವರ್ಗ 2-ಬಿ 25, ಪ್ರವರ್ಗ-3ಎ 25, ಪ್ರವರ್ಗ-3ಬಿ 30 ಹುದ್ದೆಗಳು ಸೇರಿವೆ.
288 ಬ್ಯಾಕ್‌ಲಾಗ್ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿ 50, ಪರಿಶಿಷ್ಟ ವರ್ಗ 10, ಸಾಮಾನ್ಯ 121, ಪ್ರವರ್ಗ-1 13, ಪ್ರವರ್ಗ-2ಎ 56, ಪ್ರವರ್ಗ 2-ಬಿ 9, ಪ್ರವರ್ಗ-3ಎ 13, ಪ್ರವರ್ಗ-3ಬಿ 16 ಹುದ್ದೆಗಳಿವೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗಳು ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರಬೇಕು. ಈ ವಿದ್ಯಾರ್ಹತೆ ಹೊರತುಪಡಿಸಿ ಇತರೆ ಯಾವುದೇ ಸಮನಾಂತರ ವಿದ್ಯಾರ್ಹತೆ ಪರಿಗಣಿಸುವುದಿಲ್ಲ.
ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್.ಎಸ್.ಎಲ್.ಸಿ./ 10ನೇ ತರಗತಿ (ಬ್ರಿಡ್ಜ್ ಕೋರ್ಸ್) ಉತ್ತೀರ್ಣತೆ ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅಭ್ಯರ್ಥಿಗಳು ಈ ಮೇಲೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಉತ್ತೀರ್ಣಗೊಂಡಿರತಕ್ಕದ್ದು ಹಾಗೂ ಅಂಕಪಟ್ಟಿಯನ್ನು ಹೊಂದಿರತಕ್ಕದ್ದು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಮೇಲಿನ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು, ಅರ್ಜಿ ಸಲ್ಲಿಸಲು ಅರ್ಹರಲ್ಲ.
ಆಯ್ಕೆಯಾಗುವ ಅಭ್ಯರ್ಥಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳ ಕೆಲವು ಷರತ್ತುಗಳಿಗೊಳಪಟ್ಟು 3 ವರ್ಷಗಳ ಅವಧಿಗೆ ತರಬೇತಿಗೆ ಒಳಪಡಿಸಲಾಗುತ್ತದೆ. ತರಬೇತಿಯ ಅವಧಿಯಲ್ಲಿ, ಕ್ರೋಢೀಕೃತ ಸಂಭಾವನೆಯನ್ನು ಬಿಟ್ಟು, ಇನ್ನಿತರ ಯಾವುದೇ ಭತ್ಯೆ ಹಾಗೂ ಸೌಲಭ್ಯ ಪಡೆಯತಕ್ಕದ್ದಲ್ಲ. ಕ್ರೋಢೀಕೃತ ಸಂಭಾವನೆ 1ನೇ ವರ್ಷ 17,000 ಮಾಸಿಕ, 2ನೇ ವರ್ಷ 19,000 ಮಾಸಿಕ ಮತ್ತು 3ನೇ ವರ್ಷ 21,000 ಮಾಸಿಕ ನಿಗದಿ ಮಾಡಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷ ಹೊಂದಿರಬೇಕು, ಗರಿಷ್ಠ ವಯೋಮಿತಿ ಮೀರಿರಬಾರದು. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷ. ಸಾಮಾನ್ಯ ವರ್ಗಕ್ಕೆ 35, ಪ್ರವರ್ಗ 2ಎ/ 2ಬಿ/ 3ಎ/ 3ಬಿ 38 ವರ್ಷಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮತಿ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಅಭ್ಯರ್ಥಿ 590 ರೂ. (ಜಿಎಸ್‌ಟಿ ಸೇರಿ), ಪ್ರವರ್ಗ -1, 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 614 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಭ್ಯರ್ಥಿಗಳು 378 ರೂ. ಶುಲ್ಕ ಪಾವತಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸದಿದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಅರ್ಜಿ ಶುಲ್ಕದ ಚಲನ್ ಅನ್ನು ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು, ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದಾದರೂ ಅಂಚೆ ಕಚೇರಿಯ ಮುಖಾಂತರ ಪಾವತಿಸಬೇಕಿರುತ್ತದೆ. ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ, ಅದನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ.
ಅರ್ಜಿಯನ್ನು ಕಡ್ಡಾಯವಾಗಿ ಕವಿಪ್ರನಿನಿ ಅಥವಾ ವಿದ್ಯುತ್ ಸರಬರಾಜು ಕಂಪನಿಗಳ ಈ ಕೆಳಗೆ ತಿಳಿಸಿರುವ ಯಾವುದಾದರೊಂದು ವೆಬ್-ಸೈಟ್ ಮೂಲಕ ಸಲ್ಲಿಸಬಹುದಾಗಿರುತ್ತದೆ. ಇತರೆ ಯಾವುದೇ ವಿಧಾನದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು 21.10.2024 ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಭರ್ತಿ ಮಾಡುವ ಮುನ್ನ ಎಲ್ಲಾ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು.
ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ https://bescom.karnataka.gov.in












Click it and Unblock the Notifications