ಅತಿಥಿ ಬೋಧಕರ ಹುದ್ದೆ, ಇತರ ಉದ್ಯೋಗ ಮಾಹಿತಿ
ಕೊಪ್ಪಳ, ಸೆಪ್ಟೆಂಬರ್ 05; ಕೊಪ್ಪಳ ಜಿಲ್ಲೆಯ ಟಣಕನಕಲ್ ಐಟಿಐ ಕಾಲೇಜಿನಲ್ಲಿ ಖಾಲಿ ಇರುವ ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು ಸೆಪ್ಟೆಂಬರ್ 15ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಎಲೆಕ್ಟ್ರಿಷಿಯನ್ ವಿಭಾಗದಲ್ಲಿನ 1 ಅತಿಥಿ ಬೋಧಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಎಲೆಕ್ಟ್ರಿಷಿಯನ್ ವೃತ್ತಿಯಲ್ಲಿ ಐಟಿಐ ಉತ್ತೀರ್ಣರಾಗಿ ಅಪ್ರೆಂಟಿಶಿಪ್ ಮುಗಿಸಿ, 2 ವರ್ಷ ಬೋಧನಾ ಅಥವಾ ಕೈಗಾರಿಕೆಗಳಲ್ಲಿ ಕೆಲಸ ಮಾಡಿದ ಅನುಭವವ ಹೊಂದಿರಬೇಕು.
ಐಟಿಐ ಸಂಸ್ಥೆಯಲ್ಲಿ ಅತಿಥಿ ಬೋಧಕರಾಗಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಬೇಕಿದೆ. ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳು ಹಾಗೂ 2 ಸೆಟ್ ಝೆರಾಕ್ಸ್ ಪ್ರತಿಗಳೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಬೇಕು.

ಸೆಪ್ಟೆಂಬರ್ 15 ರಂದು ಬೆಳಗ್ಗೆ 11 ಗಂಟೆಗೆ ಐಟಿಐ ಕಾಲೇಜಿನಲ್ಲಿ ನೇರ ಸಂದರ್ಶನ ನಡೆಯಲಿದೆ.
ಸೆಪ್ಟೆಂಬರ್ 7 ರಂದು ಜಾಬ್ ಡ್ರೈವ್; ಕೊಪ್ಪಳ ಜಿಲ್ಲಾ ಕೌಶಲ್ಯ ಮಿಷನ್ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜಾಬ್ ಡ್ರೈವ್ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರ ತನಕ ಜಿಲ್ಲಾಡಳಿತಭವನದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜಾವ್ ಡ್ರೈವ್ ನಡೆಯಲಿದೆ.
ಹುಬ್ಬಳ್ಳಿಯ ಶೈನ್ ಹೆಲ್ತ್ ಕೇರ್, ಕೊಪ್ಪಳದ ಬಿ. ಎಸ್. ಎಸ್ ಫೈನಾನ್ಸ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಭಾಗವಹಿಸಿ, ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಿವೆ. ಇದರಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ.
ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ, ಪಿಯುಸಿ, ಐಟಿಐ, ಯಾವುದೇ ಪದವಿ, ಎ. ಎನ್. ಎಂ, ಜಿ. ಎನ್. ಎಂ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಹತೆ ಹೊಂದಿದ 18 ರಿಂದ 26 ವರ್ಷದ ಯುವಕ ಮತ್ತು ಯುವತಿಯರು ತಮ್ಮ ಎಲ್ಲಾ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್ ಪ್ರತಿ, ಬಯೋಡಾಟಾ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಹಾಜರಾಗಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಭೇಟಿ ಮಾಡಬಹುದು. ದೂರವಾಣಿ ಸಂಖ್ಯೆಗಳು 9880758997, 08539-220859.
ಅಪ್ರೆಂಟಿಸ್ ಮೇಳ; ಕೊಪ್ಪಳ ಜಿಲ್ಲೆಯ ಹನುಮಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ಅಪ್ರೆಂಟಿಸ್ ಮೇಳವನ್ನು ಸೆಪ್ಟೆಂಬರ್ 12ರಂದು ಆಯೋಜನೆ ಮಾಡಲಾಗಿದೆ. ಬೆಳಗ್ಗೆ 9ರಿಂದ ಮೇಳ ನಡೆಯಲಿದೆ.
ಅಪ್ರೆಂಟಿಸ್ ಮೇಳದಲ್ಲಿ ಕೊಪ್ಪಳ ತಾಲ್ಲೂಕಿನ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಭಾಗವಹಿಸಲಿದೆ. ಪಿಟ್ಟರ್, ಎಲೆಕ್ಟ್ರೀಷನ್ ಮತ್ತು ಡೀಸೆಲ್ ಮೆಕಾನಿಕ್ ವೃತ್ತಿಗಳಲ್ಲಿ ಪಾಸಾದವರು ಮತ್ತು ಪರೀಕ್ಷೆಗೆ ಹಾಜರಾಗಿ ಫಲಿತಾಂಶವನ್ನು ನಿರೀಕ್ಷಿಸುವ ವಿದ್ಯಾರ್ಥಿಗಳು ಹಾಜರಾಗಬಹುದು.
ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಈ ಮೇಳಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ತರಬೇತಿ ಅಧಿಕಾರಿ ರಮೇಶಕುಮಾರ ಬೋಗಂ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 7899863289.
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ; ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ 2022-23ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಯುಪಿಎಸ್‌ಸಿ/ ಕೆಎಎಸ್/ ಗ್ರೂಪ್- ಸಿ/ ಬ್ಯಾಂಕಿಂಗ್/ ಎಸ್ಎಸ್‌ಸಿ/ ಆರ್. ಆರ್. ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ.
ತರಬೇತಿ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ, ಪರೀಕ್ಷೆಯಲ್ಲಿಗಳಿಸಿದ ಅಂಕಗಳ ಆಧಾರದ ಮೇಲೆ ನಿಗದಿತ ಗುರಿಗನುಗುಣವಾಗಿ ಆಯ್ಕೆ ಮಾಡಲಾಗುತ್ತದೆ.
ಆಯ್ಕೆಯಾದ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಶಿಷ್ಯವೇತನವನ್ನು ಸರ್ಕಾರದಿಂದ ಮಂಜೂರಾದ ದರದಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಮತ್ತು ತರಬೇತಿ ವೆಚ್ಚವನ್ನು ತರಬೇತಿ ಸಂಸ್ಥೆಗಳಿಗೆ ಪಾವತಿಸಲಾಗುವುದು.
ಪರೀಕ್ಷೆಗಳ ಪೂರ್ವಭಾವಿ ತರಬೇತಿಗಾಗಿ ಅರ್ಹ ಅಲ್ಪಸಂಖ್ಯಾತರ ಅಭ್ಯರ್ಥಿಗಳು sw.kar.nic.in ವೆಬ್‌ಸೈಟ್‌ನಲ್ಲಿ ಸೆಪ್ಟೆಂಬರ್ 20ರೊಳಗೆ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಯೂ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
ಅಭ್ಯರ್ಥಿ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 5 ಲಕ್ಷ ರೂ. ಮೀರಿರಬಾರದು. ದೈಹಿಕ ಅಂಗವಿಕಲ ಮೀಸಲಾತಿಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿ, ನಿಗದಿತ ಪ್ರಾಧಿಕಾರದಿಂದ ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗೆ ಅಂಗವಿಕಲ ಪ್ರಮಾಣ ಪತ್ರ ಪಡೆದಿರಬೇಕು.
ಯುಪಿಎಸ್‌ಸಿ ತರಬೇತಿಗಾಗಿ ಅಭ್ಯರ್ಥಿಯು ಪದವಿಯಲ್ಲಿ ಶೇ 55ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಕೆಎಎಸ್/ ಗ್ರೂಪ್-ಸಿ/ ಬ್ಯಾಂಕಿಂಗ್/ ಆರ್. ಆರ್. ಬಿ / ಎಸ್. ಎಸ್. ಸಿ ತರಬೇತಿಗಾಗಿ ಪದವಿಯಲ್ಲಿ ಶೇ 50ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.
ನ್ಯಾಯಾಂಗ ಸೇವೆ ತರಬೇತಿಗಾಗಿ ಪದವಿಯಲ್ಲಿ ಶೇ 45ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.












Click it and Unblock the Notifications