ಯಾದಗಿರಿ; ಡಿಸೆಂಬರ್ 4ರಿಂದ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಯಾದಗಿರಿ, ಅಕ್ಟೋಬರ್ 20: ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 4 ರಿಂದ 16 ರವರೆಗೆ ನೇಮಕಾತಿ ರ‍್ಯಾಲಿ ನಡೆಯಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಬೆಂಗಳೂರಿನ ನೇಮಕಾತಿ ಪ್ರಧಾನ ಕಚೇರಿಯ ಹೆಚ್ಚುವರಿ ಮಹಾ ನಿರ್ದೇಶಕರು ಹಾಗೂ ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ವತಿಯಿಂದ ಬೆಳಗಾವಿ, ಕಲಬುರಗಿ, ಬೀದರ್, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಶಾರ್ಟ್‌ಲಿಸ್ಟ್ ಮಾಡಲಾದ ಪುರುಷ ಅಭ್ಯರ್ಥಿಗಳಿಗಾಗಿ ಅಗ್ನಿವೀರ್ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದೆ.

ಈ ರ‍್ಯಾಲಿಯಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ ಟ್ರೇಡ್ಸ್ಮನ್, ಅಗ್ನಿವೀರ್ ಕ್ಲರ್ಕ್, ಸ್ಟೋರ್ ಕೀಪರ್, ತಾಂತ್ರಿಕ ವರ್ಗ ಮುಂತಾದ ಹುದ್ದೆಗಳಿಗೆ 8ನೇ ತರಗತಿ ಹಾಗೂ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಹುದ್ದೆಗೆ ನಿಗದಿಪಡಿಸಿದ ವಯೋಮಾನ, ವಿದ್ಯಾರ್ಹತೆ ಮುಂತಾದ ಅರ್ಹತಾ ಮಾನದಂಡಗಳ ಕುರಿತು ಫೆಬ್ರವರಿಯಲ್ಲಿ ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಫಲಿತಾಂಶ ಪ್ರಕಟವಾಗಿದೆ; ನೇಮಕಾತಿ ಕುರಿತ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶವನ್ನು www.joinindianarmy.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಅಕ್ಟೋಬರ್ 20 ರಿಂದ ಪ್ರವೇಶ ಪತ್ರವನ್ನು ನೀಡಲಾಗುತ್ತಿದ್ದು, ಸೇನಾ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ರಿಜಿಸ್ಟರ್ ಮಾಡಿದ ತಮ್ಮ ಇ-ಮೇಲ್ ಐಡಿ ಹಾಗೂ ವೈಯಕ್ತಿಕ ಮಾಹಿತಿ ನೀಡಿ ಲಾಗಿನ್ ಮಾಡಿ, ಪ್ರವೇಶ ಪತ್ರ ಪಡೆಯಬಹುದು.
ಅಗ್ನಿವೀರ್ ನೇಮಕಾತಿಯು ಸಂಪೂರ್ಣ ಮೆರಿಟ್ ಆಧಾರಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡುವುದಾಗಲಿ, ಮೂಲ ದಾಖಲೆಗಳನ್ನು ಸಲ್ಲಿಸುವುದಾಗಲಿ ಮಾಡಬಾರದು. ಒಂದು ವೇಳೆ ಯಾರದರೂ ಆಮೀಷ ತೋರಿದಲ್ಲಿ ಅಂತವರ ವಿರುದ್ಧ ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸಬಹುದು ಅಥವಾ ಬೆಳಗಾವಿ ಸೇನಾ ನೇಮಕಾತಿ ಕಚೇರಿಯ ಇ-ಮೇಲ್ ಐಡಿ [email protected] ಗೆ ವರದಿ ಮಾಡಬಹುದು.
ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳು ತಮ್ಮ ಆಧಾರ್ ಜೋಡಣೆ ಮಾಡಿದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಯಾವುದೇ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ನೇಮಕಾತಿಗಾಗಿ ನೀಡಬಾರದು.
ಯಾವುದೇ ಉದ್ದೀಪನ ಔಷಧಿಗಳ ಸೇವನೆ ಮಾಡಬಾರದು. ಯಾವುದೇ ರೀತಿಯ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಫೆಬ್ರವರಿ 15ರಂದು ಹೊರಡಿಸಿದ ಸೇನಾ ನೇಮಕಾತಿ ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಅಗ್ನಿವೀರ್ ನೇಮಕಾತಿ; ದೇಶದ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆಕರ್ಷಕ ನೇಮಕಾತಿ ಯೋಜನೆ ಅಗ್ನಿಪಥ್. ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಯುವಕರನ್ನು 'ಅಗ್ನಿವೀರ್' ಎಂದು ಕರೆಯಲಾಗುತ್ತದೆ. ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಇದರಲ್ಲಿ ಅವಕಾಶ ನೀಡಲಾಗುತ್ತದೆ.
ಈ ಯೋಜನೆ ಅನುಷ್ಠಾನದಿಂದ ಭಾರತೀಯ ಸಶಸ್ತ್ರ ಪಡೆಗಳ ಸರಾಸರಿ ವಯಸ್ಸಿನ ಮಿತಿ ಸುಮಾರು 4-5 ವರ್ಷಗಳು ಕಡಿಮೆಯಾಗಲಿದೆ. ಸ್ವಯಂ ಶಿಸ್ತು, ಶ್ರದ್ಧೆ ಮತ್ತು ಗಮನದ ಆಳವಾದ ತಿಳುವಳಿಕೆಯೊಂದಿಗೆ ಹೆಚ್ಚು ಪ್ರೇರಿತ ಯುವಕರು ಸೇನೆ ಸೇರುವುದರಿಂದ ರಾಷ್ಟ್ರವು ಅನೇಕ ಪ್ರಯೋಜನವನ್ನು ಪಡೆಯುತ್ತದೆ. ಅವರು ಸಮರ್ಪಕವಾಗಿ ಕೌಶಲ್ಯವನ್ನು ಹೊಂದಿರುತ್ತಾರೆ ಮತ್ತು ಇತರ ಕ್ಷೇತ್ರಗಳಲ್ಲಿ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
ರಾಷ್ಟ್ರ, ಸಮಾಜ ಮತ್ತು ರಾಷ್ಟ್ರದ ಯುವಕರಿಗೆ ಅಲ್ಪಾವಧಿಯ ಮಿಲಿಟರಿ ಸೇವೆಯ ಲಾಭಾಂಶವು ಅಪಾರವಾಗಿದೆ. ಇದರಲ್ಲಿ ದೇಶಭಕ್ತಿ, ತಂಡದ ಕೆಲಸ, ದೈಹಿಕ ಸಾಮರ್ಥ್ಯದ ವರ್ಧನೆ, ದೇಶಕ್ಕಾಗಿ ಬೇರೂರಿರುವ ನಿಷ್ಠೆ ಮತ್ತು ಬಾಹ್ಯ ಬೆದರಿಕೆಗಳು, ಆಂತರಿಕ ಬೆದರಿಕೆಗಳು ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ತರಬೇತಿ ಪಡೆದ ಸಿಬ್ಬಂದಿಗಳ ಲಭ್ಯತೆ ಸೇರಿವೆ.
ಇದು ಮೂರು ಸೇವೆಗಳ ಮಾನವ ಸಂಪನ್ಮೂಲ ನೀತಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಲು ಸರ್ಕಾರವು ಪರಿಚಯಿಸಿದ ಪ್ರಮುಖ ರಕ್ಷಣಾ ನೀತಿ ಸುಧಾರಣೆಯಾಗಿದೆ. ಅಗ್ನಿವೀರ್ ಆಗಿ ಆಯ್ಕೆಯಾದವರಿಗೆ ಮೂರು ಸೇವೆಗಳಲ್ಲಿ ಅನ್ವಯವಾಗುವಂತೆ ಅಪಾಯ ಮತ್ತು ಕಷ್ಟದ ಭತ್ಯೆಗಳೊಂದಿಗೆ ಆಕರ್ಷಕ ಕಸ್ಟಮೈಸ್ ಮಾಡಿದ ಮಾಸಿಕ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. 4 ವರ್ಷಗಳ ಅವಧಿಯು ಪೂರ್ಣಗೊಂಡ ನಂತರ ಅಗ್ನಿವೀರ್‌ಗಳಿಗೆ ಒಂದು ಬಾರಿ 'ಸೇವಾನಿಧಿ' ಪ್ಯಾಕೇಜ್ ಅನ್ನು ಪಾವತಿಸಲಾಗುತ್ತದೆ. ಅದು ಅವರ ಕೊಡುಗೆಯನ್ನು ಒಳಗೊಂಡಿರುತ್ತದೆ ಮತ್ತು ಅದರ ಮೇಲಿನ ಸಂಚಿತ ಬಡ್ಡಿ ಮತ್ತು ಬಡ್ಡಿ ಸೇರಿದಂತೆ ಅವರ ಕೊಡುಗೆಯ ಸಂಚಿತ ಮೊತ್ತಕ್ಕೆ ಸಮಾನವಾದ ಸರ್ಕಾರದಿಂದ ಹೊಂದಾಣಿಕೆಯ ಕೊಡುಗೆಯನ್ನು ಒಳಗೊಂಡಿರುತ್ತದೆ.












Click it and Unblock the Notifications